ನಾಗ್ಪುರ: ಸೋಮವಾರ ಸಂಜೆ ಇಲ್ಲಿ ನಡೆದ ಕೋಮು ಗಲಭೆಯ ಪ್ರಮುಖ ಸೂತ್ರಧಾರಿ ಎನ್ನಲಾದ ಸ್ಥಳೀಯ ರಾಜಕೀಯ ಮುಖಂಡ ಫಾಹಿಮ್ ಖಾನ್ ಅವರನ್ನು ಪೊಲೀಸರು ಬುಧವಾರ ಬಂಧಿಸಿದ್ದಾರೆ.
ಅಲ್ಪಸಂಖ್ಯಾತ ಪ್ರಜಾಸತ್ತಾತ್ಮಕ ಪಕ್ಷದ ನಾಗ್ಪುರ ಘಟಕದ ಜಿಲ್ಲಾ ಅಧ್ಯಕ್ಷರಾದ ಫಾಹಿಮ್ ಖಾನ್ ಅವರ ಹೆಸರು ಗಣೇಶಪೇಠ್ ಪೊಲೀಸ್ ಠಾಣೆಯಲ್ಲಿ ದಾಖಲಾದ ಎಫ್ಐಆರ್ ನಲ್ಲಿ ಅಧಿಕೃತವಾಗಿ ಸೇರಿಸಿದ ಕೆಲವೇ ತಾಸುಗಳಲ್ಲಿ ಅವರ ಬಂಧನವಾಗಿದೆ. 2024ರ ಲೋಕಸಭಾ ಚುನಾವಣೆಯಲ್ಲಿ ಖಾನ್, ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ಬಿಜೆಪಿಯ ನಿತಿನ್ ಗಡ್ಕರಿ ವಿರುದ್ಧ ನಾಗ್ಪುರ ಕ್ಷೇತ್ರದಿಂದ ಸ್ಪರ್ಧಿಸಿ ಪರಾಭವಗೊಂಡಿದ್ದರು.
ನಾಗ್ಪುರದಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಕೆಲವು ಸೂಕ್ಷ್ಮ ಪ್ರದೇಶಗಳಲ್ಲಿ ಕರ್ಫ್ಯೂ ಮುಂದುವರಿಸಲಾಗಿದೆ. 51 ಜನರನ್ನು ಬಂಧಿಸಲಾಗಿದೆ ಎಂದು ನಾಗ್ಪುರದ ಪೊಲೀಸ್ ಆಯುಕ್ತ ಡಾ. ರವೀಂದ್ರ ಸಿಂಘಾಲ್ ತಿಳಿಸಿದರು.
ನಾಗ್ಪುರದಲ್ಲಿ ನಡೆದ ಹಿಂಸಾಚಾರದ ಸಂದರ್ಭದಲ್ಲಿ, ಗಲಭೆಕೋರರ ಗುಂಪೊಂದು ಮಹಿಳಾ ಕಾನ್‌ಸ್ಟೆಬಲ್‌ವೊಬ್ಬರ ಜೊತೆ ಅನುಚಿತವಾಗಿ ವರ್ತಿಸಿ, ಅವರನ್ನು ನಗ್ನಗೊಳಿಸಲು ಯತ್ನಿಸಿತ್ತು ಎಂದು ಅಧಿಕಾರಿಗಳು ತಿಳಿಸಿದರು.
ಇತರ ಮಹಿಳಾ ಸಿಬ್ಬಂದಿಯನ್ನು ಅವಾಚ್ಯವಾಗಿ ನಿಂದಿಸಿ, ಅವರ ಮೇಲೆ ದಾಳಿ ನಡೆಸಿದ್ದಾರೆ ಎಂದು ಹೇಳಿದರು.
ಕುಲ್ದಾಬಾದ್‌ನಲ್ಲಿರುವ ಔರಂಗಜೇಬ್ ಸಮಾಧಿ ಸ್ಥಳದಲ್ಲಿ ಡ್ರೋನ್ ಹಾರಿಸು ವಂತಿಲ್ಲ ಎಂದು ಜಿಲ್ಲಾಡಳಿತ ಘೋಷಿಸಿದೆ.
17ನೇ ಶತಮಾನದ ಮೊಘಲ್ ದೊರೆ ಔರಂಗಜೇಬ್ ಇವತ್ತಿಗೆ ಅಪ್ರಸ್ತುತ. ಯಾವುದೇ ಹಿಂಸಾಚಾರವು ಸಮಾಜದ ಆರೋಗ್ಯಕ್ಕೆ ಒಳ್ಳೆಯದಲ್ಲಸುನೀಲ್ ಅಂಬೇಕರ್‌ಆರ್‌ಎಸ್‌ಎಸ್ ನಾಯಕ
ನಾಗ್ಪುರ ಕೋಮು ಗಲಭೆ ಪೂರ್ವಯೋಜಿತ ಕೃತ್ಯ. ಅಪರಾಧಿಗಳು ಎಲ್ಲಿಯೇ ಅಡಗಿಕೊಂಡಿದ್ದರೂ ಅವರನ್ನು ಹುಡುಕಿ ಬಂಧಿಸುತ್ತೇವೆದೇವೇಂದ್ರ ಫಡಣವೀಸ್, ಮಹಾರಾಷ್ಟ್ರ ಮುಖ್ಯಮಂತ್ರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.