ಹೈದರಾಬಾದ್: ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್‌ಎಎಲ್) ಅನ್ನು ಕರ್ನಾಟಕದಿಂದ ಆಂಧ್ರಪ್ರದೇಶಕ್ಕೆ ಸ್ಥಳಾಂತರಿಸಲು ಪ್ರಯತ್ನಿಸಿದ್ದೇನೆ ಎಂಬ ವರದಿಗಳು ಮತ್ತು ರಾಜಕೀಯ ಆರೋಪಗಳನ್ನು ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಸ್ಪಷ್ಟವಾಗಿ ತಳ್ಳಿಹಾಕಿದ್ದಾರೆ.
ಕಡಪದಲ್ಲಿ ನಡೆದ ಮಹಾನಾಡು ಸಭೆಯಲ್ಲಿ ಬುಧವಾರ ಮಾತನಾಡಿದ ನಾಯ್ಡು, ಕೇಂದ್ರಕ್ಕೆ ತಮ್ಮ ಮನವಿಯು ಆಂಧ್ರಪ್ರದೇಶದಲ್ಲಿ ರಕ್ಷಣಾ ಉತ್ಪಾದನಾ ಕೇಂದ್ರವನ್ನು ಸ್ಥಾಪಿಸಬೇಕು ಎಂಬುದಾಗಿತ್ತೇ ಹೊರತು ಇತರ ರಾಜ್ಯಗಳಿಂದ ಅಸ್ತಿತ್ವದಲ್ಲಿರುವ ಸಂಸ್ಥೆಗಳನ್ನು ಸ್ಥಳಾಂತರಿಸುವ ಬಗ್ಗೆ ಅಲ್ಲ ಎಂದು ಸ್ಪಷ್ಟಪಡಿಸಿದರು.
ಬೆಂಗಳೂರಿನಲ್ಲಿರುವ ಎಚ್‌ಎಎಲ್ ಅನ್ನು ಆಂಧ್ರಪ್ರದೇಶಕ್ಕೆ ಸ್ಥಳಾಂತರಿಸಲು ನಾನು ಎಂದೂ ಕೇಳಿಲ್ಲ. ಇದು ಬೃಹತ್ ಕಾರ್ಯತಂತ್ರದ ಕೇಂದ್ರವಾಗಿದೆ ಮತ್ತು ಅಂತಹ ಸಂಸ್ಥೆಗಳನ್ನು ಸ್ಥಳಾಂತರಿಸಲು ಸಾಧ್ಯವಿಲ್ಲ. ಸ್ಥಳಾಂತರಿಸಲೂಬಾರದು. ನಾನು ಯಾವುದೇ ಯೋಜನೆಯನ್ನು ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಸ್ಥಳಾಂತರಿಸಲು ಎಂದಿಗೂ ಪ್ರಯತ್ನಿಸಿಲ್ಲ. ಅಂತಹ ಇತಿಹಾಸ ನನ್ನದಲ್ಲ ಎಂದು ನಾಯ್ಡು ಹೇಳಿದ್ದಾರೆ.
ವಿಮಾನ ಉತ್ಪಾದನೆ ಮತ್ತು ರಕ್ಷಣಾ ಸಂಬಂಧಿತ ಕೈಗಾರಿಕೆಗಳನ್ನು ಸ್ಥಾಪಿಸಲು ಅನಂತಪುರ ಜಿಲ್ಲೆಯ ಲೇಪಾಕ್ಷಿ ಹೆಚ್ಚು ಸೂಕ್ತವಾದ ಪ್ರದೇಶವಾಗಿದೆ ಎಂದು ಅವರು ಒತ್ತಿ ಹೇಳಿದರು.
ನಾನು ಮೊದಲೇ ಲೇಪಾಕ್ಷಿಯ ಸಾಮರ್ಥ್ಯವನ್ನು ಒತ್ತಿ ಹೇಳಿದ್ದೆ. ಆದರೆ, ದುರದೃಷ್ಟವಶಾತ್ ಕರ್ನಾಟಕದ ಕೆಲವು ರಾಜಕಾರಣಿಗಳು ಎಚ್‌ಎಎಲ್ ಅನ್ನು ಆಂಧ್ರಪ್ರದೇಶಕ್ಕೆ ವರ್ಗಾಯಿಸುವ ಪ್ರಯತ್ನ ಎಂದು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ ಎಂದು ಅವರು ಹೇಳಿದರು.
ತಮ್ಮ ಉದ್ದೇಶಗಳು ಹೊಸ ಅಭಿವೃದ್ಧಿ ಮತ್ತು ಹೂಡಿಕೆಯ ಮೇಲೆ ಕೇಂದ್ರೀಕೃತವಾಗಿವೆ ಎಂದು ನಾಯ್ಡು ಪುನರುಚ್ಚರಿಸಿದರು. ಆಂಧ್ರಪ್ರದೇಶದಲ್ಲಿ, ವಿಶೇಷವಾಗಿ ರಾಯಲಸೀಮಾ ಭಾಗದಲ್ಲಿ ರಕ್ಷಣಾ ಉತ್ಪಾದನಾ ಕೇಂದ್ರವನ್ನು ಸ್ಥಾಪಿಸಲು ವಿನಂತಿಸಲು ಅವರು ಇತ್ತೀಚೆಗೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ಭೇಟಿ ಮಾಡಿದ್ದರು.
ತೆಲುಗು ದೇಶಂ ಪಕ್ಷವು ಅಭಿವೃದ್ಧಿಗೆ ಸಮಾನಾರ್ಥಕವಾಗಿದೆ. ನಾವು ಎಂದಿಗೂ ಪ್ರಗತಿಯನ್ನು ವಿರೋಧಿಸುವುದಿಲ್ಲ ಅಥವಾ ಇತರ ರಾಜ್ಯಗಳಿಂದ ಯೋಜನೆಗಳನ್ನು ಕಸಿದುಕೊಳ್ಳುವುದರಲ್ಲಿ ನಾವು ನಂಬಿಕೆ ಇಟ್ಟಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.