ತಿರುವನಂತಪುರ: ಭಾರತದ ಅತ್ಯಂತ ಶ್ರೇಷ್ಠ ಸಮಾಜ ಸುಧಾರಕ, ಆಧ್ಯಾತ್ಮಿಕ ನಾಯಕರಲ್ಲಿ ಶ್ರೀ ನಾರಾಯಣ ಗುರು ಅಗ್ರಗಣ್ಯರಾಗಿದ್ದು, ಸಮಾನತೆ–ಏಕತೆ ಕುರಿತಂತೆ ಅವರು ನೀಡಿರುವ ಸಂದೇಶ, ಆದರ್ಶಗಳು ಆಧುನಿಕ ಜಗತ್ತಿಗೆ ಅತಿ ಹೆಚ್ಚು ಪ್ರಸ್ತುತವಾಗಿವೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಹೇಳಿದ್ದಾರೆ.
ಕೇರಳದ ವರ್ಕಳದ ಶಿವಗಿರಿ ಮಠದಲ್ಲಿ ಗುರುವಾರ ನಡೆದ ನಾರಾಯಣ ಗುರುಗಳ ಮಹಾಸಮಾಧಿಯ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಮುರ್ಮು ಪಾಲ್ಗೊಂಡಿದ್ದರು.
ಈ ವೇಳೆ ಮಾತನಾಡಿದ ಅವರು, ‘ಜನರನ್ನು ಅಜ್ಞಾನದಿಂದ, ಕತ್ತಲಿನಿಂದ, ಮೌಢ್ಯದಿಂದ ಹೊರತರುವುದಕ್ಕಾಗಿಯೇ ಗುರುಗಳು ತಮ್ಮ ಇಡೀ ಜೀವನವನ್ನು ಮುಡುಪಿಟ್ಟಿದ್ದರು. ಪ್ರತಿಯೊಂದು ಜೀವಾತ್ಮದಲ್ಲೂ ಪರಮಾತ್ಮನ ಅಸ್ತಿತ್ವವಿದೆ ಎಂದು ನಂಬಿದ್ದ ಅವರು, ಸಮಾನತೆ, ಏಕತೆ, ಮಾನವೀಯತೆ, ಪ್ರೀತಿ ಹಾಗೂ ತಮ್ಮ ಆದರ್ಶಗಳ ಮೂಲಕ ಪೀಳಿಗೆಗಳಿಗೆ ಪ್ರೇರಣೆ ನೀಡಿದ್ದರು’ ಎಂದಿದ್ದಾರೆ.
‘ಜ್ಞಾನ ಮತ್ತು ಸಹಾನುಭೂತಿಯಿಂದ ಮಾತ್ರ ಮುಕ್ತಿ ಸಾಧ್ಯವೇ ಹೊರತು ಅಂಧಭಕ್ತಿ ಇಂದಲ್ಲ ಎಂದು ನಂಬಿದ್ದ ಗುರುಗಳು, ಒಂದು ಜಾತಿ–ಒಂದು ಧರ್ಮ, ಮಾನವ ಕುಲಕ್ಕೆ ಒಬ್ಬನೇ ದೇವರು ಎಂದು ಸಾರಿದ್ದರು. ಅವರ ಬೋಧನೆಗಳು ಪ್ರತಿಯೊಬ್ಬ ಮನುಷ್ಯನಲ್ಲೂ ಇರುವ ದೈವತ್ವ ಒಂದೇ ಎಂಬುದನ್ನು ನಮಗೆ ನೆನಪಿಸುತ್ತದೆ’ ಎಂದು ಮುರ್ಮು ಹೇಳಿದ್ದಾರೆ.
‘ಮಾನವತೆಗೆ ಎದುರಾಗಿರುವ ಸಂಘರ್ಷಗಳಿಗೆಲ್ಲಾ ಗುರುಗಳ ಸಮಾನತೆ, ಏಕತೆ ಹಾಗೂ ಪರಸ್ಪರ ಗೌರವದ ಸಿದ್ಧಾಂತಗಳೇ ಪರಿಹಾರ. ಅವುಗಳನ್ನು ಅಳವಡಿಸಿಕೊಳ್ಳಬೇಕು’ ಎಂದೂ ಮುರ್ಮು ಕರೆ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.