ADVERTISEMENT

ಆನ್‌ಲೈನ್ ಶಿಕ್ಷಣಕ್ಕೆ ಸುಲಭವಾಗಿ ಹೊಂದಿಕೊಂಡ ವಿದ್ಯಾರ್ಥಿಗಳು: ಮೋದಿ ಪ್ರಶಂಸೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 29 ಜುಲೈ 2021, 13:07 IST
Last Updated 29 ಜುಲೈ 2021, 13:07 IST
ನರೇಂದ್ರ ಮೋದಿ
ನರೇಂದ್ರ ಮೋದಿ   

ನವದೆಹಲಿ: ಹೊಸ ಶಿಕ್ಷಣ ನೀತಿ ಜಾರಿಗೆ ಬಂದು ಒಂದು ವರ್ಷ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ದೇಶವನ್ನು ಉದ್ದೇಶಿಸಿ ಗುರುವಾರ ಮಾತನಾಡಿದರು.

ಈ ಸಂದರ್ಭದಲ್ಲಿ ವಿದ್ಯಾರ್ಥಿಗಳನ್ನು ಹೊಗಳಿದ ಅವರು, 'ನಮ್ಮ ಯುವಜನಾಂಗಕ್ಕೆ ಹೊಸ ಉತ್ಸಾಹವಿದೆ. ಅವರು ಬದಲಾವಣೆಗೆ ಸಿದ್ಧರಾಗಿದ್ದಾರೆ. ಕೋವಿಡ್‌ನಿಂದ ಶಿಕ್ಷಣ ವ್ಯವಸ್ಥೆಯ ಸನ್ನಿವೇಶಗಳು ಬದಲಾದವು. ಅದಕ್ಕೆ ತಕ್ಕ ಹಾಗೆ ನಮ್ಮ ವಿದ್ಯಾರ್ಥಿಗಳು ಆನ್‌ಲೈನ್ ಶಿಕ್ಷಣಕ್ಕೆ ಸುಲಭವಾಗಿ ಹೊಂದಿಕೊಂಡರು' ಎಂದು ಹೇಳಿದರು.

ಇದೇ ವೇಳೆ ಅಧಿಕಾರಿಗಳ ಕಾರ್ಯಗಳನ್ನು ಶ್ಲಾಘಿಸಿದ ಮೋದಿ, 'ಕಾರ್ಯಪಡೆ ನಿಯೋಜಿಸುವ ಮೂಲಕ ಹಂತಹಂತವಾಗಿ ಶಿಕ್ಷಣ ನೀತಿಯನ್ನು ಜಾರಿಗೊಳಿಸಲಾಗುತ್ತಿದೆ. ಇದಕ್ಕೆ ಲಕ್ಷಾಂತರ ನಾಗರಿಕರು, ಶಿಕ್ಷಕರು, ಸ್ವಾಯತ್ತ ಸಂಸ್ಥೆಗಳ ಸಹಾಯವಿದೆ' ಎಂದು ತಿಳಿಸಿದರು.

ADVERTISEMENT

ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ಭಾರತದ ಹೊಸ ಶಿಕ್ಷಣ ನೀತಿಯು ಪ್ರಮುಖ ಪಾತ್ರವಹಿಸುತ್ತದೆ ಎಂದು ಮೋದಿ ಅಭಿಪ್ರಾಯಪಟ್ಟರು.

ಹಿಂದಿ, ತಮಿಳು, ತೆಲುಗು, ಮರಾಠಿ ಮತ್ತು ಬಂಗಾಳಿ ಭಾಷೆಗಳಲ್ಲಿ ಶಿಕ್ಷಣ ನೀಡುವ 14 ಎಂಜಿನಿಯರಿಂಗ್ ಕಾಲೇಜುಗಳು ದೇಶದಲ್ಲಿವೆ ಎಂದು ಮೋದಿ ಹೇಳಿದರು.

'11 ಪ್ರಾದೇಶಿಕ ಭಾಷೆಗಳಲ್ಲಿ ಎಂಜಿನಿಯರಿಂಗ್ ಕೋರ್ಸ್‌ಗಳನ್ನು ಭಾಷಾಂತರಿಸುವ ಸಾಧನವನ್ನು ಸಹ ನಾವು ಅಭಿವೃದ್ಧಿಪಡಿಸಿದ್ದೇವೆ. ಇದು ವಿಶೇಷವಾಗಿ ಬಡವರು, ನಿರ್ಗತಿಕರು, ದಲಿತರು ಮತ್ತು ಇತರ ಹಿಂದುಳಿದ ವರ್ಗಗಳಿಗೆ ಸಹಾಯ ಮಾಡುತ್ತದೆ. ಪ್ರಾದೇಶಿಕ ಭಾಷೆಗಳಲ್ಲಿ ಶಿಕ್ಷಣವನ್ನು ಕಲಿಯುವ ವಿದ್ಯಾರ್ಥಿಗಳನ್ನು ನಾನು ಅಭಿನಂದಿಸುತ್ತೇನೆ' ಎಂದು ಅವರು ತಿಳಿಸಿದರು.

ದೇಶದ ಶಿಕ್ಷಣ ವ್ಯವಸ್ಥೆಯ ಚಹರೆಯನ್ನು ಸಮಗ್ರವಾಗಿ ಬದಲಾಯಿಸುವ ಮಹತ್ವಾಕಾಂಕ್ಷೆಯ ರಾಷ್ಟ್ರೀಯ ಶಿಕ್ಷಣ ನೀತಿ–2020 ಜಾರಿಗೆ ಬಂದು ಜುಲೈ 29ಕ್ಕೆ (ಗುರುವಾರ) ಒಂದು ವರ್ಷ ಪೂರ್ಣಗೊಂಡಿದೆ. ಕೇಂದ್ರ ಸಚಿವ ಸಂಪುಟವು ಕಳೆದ ವರ್ಷ ಜುಲೈ 29ರಂದು ಹೊಸ ಶಿಕ್ಷಣ ನೀತಿಗೆ ಅನುಮೋದನೆ ಕೊಟ್ಟಿತ್ತು. 34 ವರ್ಷದ ಹಿಂದೆ ಅಂದರೆ, 1986ರಲ್ಲಿ ಜಾರಿಗೆ ಬಂದಿದ್ದ ರಾಷ್ಟ್ರೀಯ ಶಿಕ್ಷಣ ನೀತಿಯು ಅಲ್ಲಿವರೆಗೆ ಜಾರಿಯಲ್ಲಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.