ADVERTISEMENT

‘ಬೇಕಿದ್ದರೆ ಚುನಾವಣಾ ಆಯೋಗಕ್ಕೆ ಹೋಗಿ’

ಮೋದಿ ಕುರಿತು ಚಿತ್ರ ತಡೆಗೆ ನಕಾರ

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2019, 20:24 IST
Last Updated 1 ಏಪ್ರಿಲ್ 2019, 20:24 IST
ನರೇಂದ್ರ ಮೋದಿ ಪಾತ್ರದಲ್ಲಿ ನಟ ವಿವೇಕ್ ಒಬೆರಾಯ್
ನರೇಂದ್ರ ಮೋದಿ ಪಾತ್ರದಲ್ಲಿ ನಟ ವಿವೇಕ್ ಒಬೆರಾಯ್   

ನವದೆಹಲಿ: ‘ಪಿ.ಎಂ. ನರೇಂದ್ರಮೋದಿ’ ಚಿತ್ರದ ಬಿಡುಗಡೆವಿಚಾರದಲ್ಲಿ ನಾವು ಮಧ್ಯ ಪ್ರವೇಶಿಸುವುದಿಲ್ಲ. ನೀವು ಸೆನ್ಸಾರ್‌ ಮಂಡಳಿ ಅಥವಾ ಚುನಾವಣಾ ಆಯೋಗಕ್ಕೆ ಹೋಗಿ ಮನವಿ ಸಲ್ಲಿಸಬಹುದು’

–ಚಿತ್ರದ ಬಿಡುಗಡೆಗೆ ತಡೆ ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ಮೇಲಿನಂತೆ ಪ್ರತಿಕ್ರಿಯಿಸಿದ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ರಾಜೇಂದ್ರ ಮೆನನ್‌ ಮತ್ತು ನ್ಯಾಯಮೂರ್ತಿ ಎ.ಜೆ.ಭಂಭಾನಿ ಅವರ ನ್ಯಾಯಪೀಠ ಅರ್ಜಿಯ ಕೋರಿಕೆಯನ್ನು ತಳ್ಳಿಹಾಕಿತು.

ಲೋಕಸಭಾ ಚುನಾವಣೆಯ ಫಲಿತಾಂಶದವರೆಗೆ ಈ ಚಿತ್ರದ ಬಿಡುಗಡೆಗೆ ತಡೆ ನೀಡಬೇಕು ಎಂದು ಕೋರಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಇಲ್ಲಿನ ಹೈಕೋರ್ಟ್‌ ತಳ್ಳಿಹಾಕಿದೆ.

ADVERTISEMENT

ಪ್ರಧಾನಿ ನರೇಂದ್ರ ಮೋದಿ ಅವರ ಜೀವನಗಾಥೆ ಆಧರಿತ, ಬಾಲಿವುಡ್ ನಟ ವಿವೇಕ್ ಒಬೆರಾಯ್ ಅಭಿನಯದ ಈ ಚಿತ್ರ ಏ. 5ರಂದು ಬಿಡುಗಡೆಗೆ ಸಿದ್ಧವಾಗಿದೆ. ವಕೀಲ ಸುಜೀತ್‌ ಕುಮಾರ್‌ ಸಿಂಗ್‌ ಅವರು ಚಿತ್ರದ ಬಿಡುಗಡೆಗೆ ತಡೆ ಕೋರಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.

‘ಏ. 11ರಿಂದ ಮೇ 19ರವರೆಗೆ ಏಳು ಹಂತಗಳಲ್ಲಿ ದೇಶದ ವಿವಿಧ ಭಾಗಗಳಲ್ಲಿ ಮತದಾನ ನಡೆಯಲಿದೆ. ಈಗ ಮಾದರಿ ನೀತಿ ಸಂಹಿತೆ ಅಸ್ತಿತ್ವದಲ್ಲಿದೆ. ಇಂಥ ಸಂದರ್ಭದಲ್ಲಿ ಮೋದಿ ಅವರ ಜೀವನಗಾಥೆ ಆಧರಿತ ಚಿತ್ರ ಬಿಡುಗಡೆ ಮಾಡುವುದರಿಂದ ಅದು ಪ್ರಚಾರ ತಂತ್ರದ ಭಾಗವಾಗಿ ಮತದಾರರ ಮೇಲೆ ಪ್ರಭಾವ ಬೀರುವ ಸಾಧ್ಯತೆಯಿದೆ. ಚಿತ್ರದ ಶೀರ್ಷಿಕೆಯೇ ಮಾದರಿ ನೀತಿ ಸಂಹಿತೆಯನ್ನು ಉಲ್ಲಂಘಿಸುತ್ತದೆ’ ಎಂದು ಅವರು ಅರ್ಜಿಯಲ್ಲಿ ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.