ADVERTISEMENT

ರಕ್ಷಣಾ ಕ್ಷೇತ್ರದಲ್ಲಿ ಹಿಂದೆಂದೂ ಕಾಣದಂತಹ ವಿಶ್ವಾಸಾರ್ಹತೆ: ಪ್ರಧಾನಿ ಮೋದಿ

ಸರ್ಕಾರಿ ಸ್ವಾಮ್ಯದ ಏಳು ರಕ್ಷಣಾ ಕಂಪನಿಗಳ ಲೋಕಾರ್ಪಣೆ

ಪಿಟಿಐ
Published 15 ಅಕ್ಟೋಬರ್ 2021, 18:02 IST
Last Updated 15 ಅಕ್ಟೋಬರ್ 2021, 18:02 IST
ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ   

ನವದೆಹಲಿ: ಭಾರತದ ರಕ್ಷಣಾ ವಲಯದಲ್ಲಿ ಹಿಂದೆಂದಿಗಿಂತಲೂ ಹೆಚ್ಚು ಪಾರದರ್ಶಕತೆ, ನಂಬಿಕೆ ಮತ್ತು ತಂತ್ರಜ್ಞಾನ ಆಧಾರಿತ ದೃಷ್ಟಿಕೋನ ಈಗ ಇದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದರು. ಏಳು ಹೊಸ ರಕ್ಷಣಾ ಸಂಸ್ಥೆಗಳನ್ನು ದೇಶಕ್ಕೆ ಅರ್ಪಿಸಿದ ಬಳಿಕ ಅವರು ಹೀಗೆ ಹೇಳಿದರು

ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ಬಳಿಕ ಇದೇ ಮೊದಲ ಬಾರಿಗೆ, ಈ ವರೆಗೂ ಇದ್ದ ಜಡ ನೀತಿಗಳನ್ನು ಪಕ್ಕಕ್ಕಿರಿಸಿ ಈ ವಲಯದಲ್ಲಿ ದೊಡ್ಡ ಸುಧಾರಣೆಗಳು ನಡೆಯುತ್ತಿವೆ ಎಂದರು. ಆತ್ಮ ನಿರ್ಭರ ಭಾರತ ಉಪಕ್ರಮವನ್ನು ಉಲ್ಲೇಖಿಸಿದ ಅವರು, ‘ಭಾರತ ತನ್ನ ಸ್ವಂತ ಬಲದಿಂದ ಜಗತ್ತಿನ ಅತ್ಯಂತ ದೊಡ್ಡ ಮಿಲಿಟರಿ ಶಕ್ತಿಯಾಗಿ ಹೊರಹೊಮ್ಮಬೇಕು ಎಂಬುದು ನಮ್ಮ ಗುರಿ’ ಎಂದರು.

ಅತ್ಯಂತ ಮಹತ್ವದ ಸುಧಾರಣಾ ಕ್ರಮಕ್ಕೆ ಮುಂದಾದ ಸರ್ಕಾರ ಸುಮಾರು 200 ವರ್ಷಗಳಷ್ಟು ಹಳೆಯದಾದ ಆರ್ಡೆನ್ಸ್‌ ಫ್ಯಾಕ್ಟರಿ ಬೋರ್ಡ್ (ಒಎಫ್‌ಬಿ) ಸಂಸ್ಥೆಯನ್ನು ವಿಸರ್ಜಿಸಿ, ರಾಜ್ಯ ಸರ್ಕಾರಗಳ ಸ್ವಾಮ್ಯದ ಏಳು ರಕ್ಷಣಾ ಸಂಸ್ಥೆಗಳನ್ನು ತೆರೆದಿದೆ. ಒಎಫ್‌ಬಿಗೆ ಸೇರಿದ 41 ಶಸ್ತ್ರಾಸ್ತ್ರ ತಯಾರಿಕಾ ಕಾರ್ಖಾನೆಗಳೂ ಸೇರಿ ಅದರ ಎಲ್ಲಾ ಆಸ್ತಿಯನ್ನೂ ಹೊಸ ಸಂಸ್ಥೆಗಳಿಗೆ ವರ್ಗಾಯಿಸಲಾಗಿದೆ. ಈ ಸಂಸ್ಥೆಗಳು ಉತ್ಪನ್ನಗಳ ತಯಾರಿಕೆಯಲ್ಲಿ ಪರಿಣತಿ ಸಾಧಿಸಿದರೆ ಸಾಲದು. ಉತ್ಪನ್ನಗಳು ಜಾಗತಿಕ ಬ್ರ್ಯಾಂಡ್‌ಗಳಾಗಬೇಕು. ಸ್ಪರ್ಧಾತ್ಮಕ ಬೆಲೆ ಭಾರತದ ಬಲವಾಗಿದೆ. ಇದರ ಜೊತೆಗೆ ಗುಣಮಟ್ಟ ಮತ್ತು ವಿಶ್ವಾಸಾರ್ಹತೆ ಕೂಡಾ ಭಾರತದ ಹೆಗ್ಗುರುತಾಗಬೇಕು ಎಂದು ಅವರು ಹೇಳಿದರು.

ADVERTISEMENT

ಮೊದಲನೇ ಜಾಗತಿಕ ಮಹಾಯುದ್ಧದ ವೇಳೆಯೇ ಶಸ್ತ್ರಾಸ್ತ್ರ ತಯಾರಿಕೆಯಲ್ಲಿ ಭಾರತದ ಸಾಮರ್ಥ್ಯ ಏನು ಎಂಬುದು ಜಗತ್ತಿಗೇ ತಿಳಿದಿತ್ತು. ಆಗಲೇ ಭಾರತ ಜಾಗತಿಕ ಮಟ್ಟದ ಕೌಶಲ ಮತ್ತು ಉತ್ತಮ ಸಂಪನ್ಮೂಲವನ್ನು ಹೊಂದಿತ್ತು. ಆದರೆ ಸ್ವಾತಂತ್ರ್ಯದ ಬಳಿಕ ಈ ಸಂಸ್ಥೆಯನ್ನು ಕಡೆಗಣಿಸಲಾಯಿತು ಎಂದು ಅವರು ಹೇಳಿದರು.

‘ಸ್ವಾತಂತ್ರ್ಯ ಬಂದ ಬಳಿಕ ಹೊಸ ತಂತ್ರಜ್ಞಾನಗಳನ್ನು ಅಳವಡಿಸುವ ಮೂಲಕ ಈ ಕಾರ್ಖಾನೆಗಳನ್ನು ಉನ್ನತೀಕರಿಸಬೇಕಿತ್ತು. ಆದರೆ ಈ ವಲಯವನ್ನು ನಿರ್ಲಕ್ಷಿಸಲಾಯಿತು. ಅದಕ್ಕಾಗಿ ಭಾರತ ರಕ್ಷಣಾ ಸಾಮಾಗ್ರಿಗಳಿಗಾಗಿ ವಿದೇಶಗಳ ಮೇಲೆ ಅವಲಂಬಿಸಬೇಕಾಯಿತು. ಈ ಪರಿಸ್ಥಿತಿಯನ್ನು ಬದಲಾಯಿಸುವ ನಿಟ್ಟಿನಲ್ಲಿ ಈ ಏಳು ಸಂಸ್ಥೆಗಳು ಬಹುಮುಖ್ಯ ಪಾತ್ರ ವಹಿಸುತ್ತವೆ. ಒಎಫ್‌ಬಿಗೆ ಸುಧಾರಣೆ ತರುವ ಯೋಜನೆ ಸುಮಾರು 15–20 ವರ್ಷಗಳಿಂದ ಬಾಕಿ ಉಳಿದಿತ್ತು. ಆ ಕೆಲಸಕ್ಕೆ ಈಗ ಚಾಲನೆ ದೊರಕಿದೆ’
ಎಂದರು.

ರಕ್ಷಣಾ ಸಚಿವ ರಾಜನಾಥ್‌ ಸಿಂಗ್ ಮತ್ತು ರಕ್ಷಣಾ ಉದ್ಯಮ ಸಹಯೋಗದ ಹಲವು ಗಣ್ಯರು ಉಪಸ್ಥಿತರಿದ್ದರು.

***

ಭಾರತಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳು ತುಂಬಿರುವ ಈ ಹೊತ್ತಿನಲ್ಲಿ ಹಲವಾರು ವರ್ಷಗಳಿಂದ ಸಂಪೂರ್ಣಗೊಳ್ಳದೇ ಇದ್ದ ಕೆಲಸಗಳು ಈಗ ಸಂಪೂರ್ಣಗೊಳ್ಳುತ್ತಿವೆ.

- ನರೇಂದ್ರ ಮೋದಿ, ಪ್ರಧಾನಿ

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.