ADVERTISEMENT

ನೊಯ್ಡಾ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಶಂಕುಸ್ಥಾಪನೆ ನೇರವೇರಿಸಿದ ಪ್ರಧಾನಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 25 ನವೆಂಬರ್ 2021, 11:03 IST
Last Updated 25 ನವೆಂಬರ್ 2021, 11:03 IST
ಪ್ರಧಾನಿ ಮೋದಿ
ಪ್ರಧಾನಿ ಮೋದಿ   

ನೊಯ್ಡಾ: ಉತ್ತರ ಪ್ರದೇಶದ ಜೇವರ್‌ನಲ್ಲಿ ನೊಯ್ಡಾಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪ್ರಧಾನಿ ಮೋದಿ ಅವರು ಇಂದು (ಗುರುವಾರ) ಶಂಕುಸ್ಥಾಪನೆ ನೆರವೇರಿಸಿದರು.

ವಿಮಾನ ನಿಲ್ದಾಣದ ಭೂಮಿ ಪೂಜೆ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಅವರು, ‘21 ನೇ ಶತಮಾನದ ನವ ಭಾರತವು ಇಂದು ಅತ್ಯುತ್ತಮ ಆಧುನಿಕ ಮೂಲ ಸೌಕರ್ಯಗಳನ್ನು ಹೊಂದುತ್ತಿದೆ. ಉತ್ತಮ ರಸ್ತೆ, ಉತ್ತಮ ರೈಲು, ಉತ್ತಮ ವಿಮಾನ ನಿಲ್ದಾಣಗಳು ಕೇವಲ ಮೂಲ ಸೌಕರ್ಯ ಯೋಜನೆಗಳಷ್ಟೇ ಅಲ್ಲ. ಅವುಗಳು ಇಡೀ ಪ್ರದೇಶವನ್ನು ಬದಲಿಸುತ್ತವೆ. ಆ ಪ್ರದೇಶದ ಜನರ ಜೀವನವನ್ನು ಸಂಪೂರ್ಣವಾಗಿ ಪರಿವರ್ತಿಸುತ್ತವೆ’ಎಂದು ತಿಳಿಸಿದರು.

‘ನೊಯ್ಡಾಅಂತರರಾಷ್ಟ್ರೀಯ ವಿಮಾನ ನಿಲ್ದಾಣವು ಉತ್ತರ ಭಾರತದ ಸರಕು ಸಾಗಣೆಯ ಪ್ರಮುಖ ತಾಣವಾಗಲಿದೆ‘ ಎಂದು ಮೋದಿ ಪ್ರತಿಪಾದಿಸಿದರು.

ADVERTISEMENT

‘ಸ್ವಾತಂತ್ರ್ಯ ಪಡೆದ ಏಳು ದಶಕಗಳ ನಂತರ, ಉತ್ತರ ಪ್ರದೇಶವು ಅರ್ಹವಾದದ್ದನ್ನು ಅಂತಿಮವಾಗಿ ಪಡೆಯುತ್ತಿದೆ. ಡಬಲ್ ಎಂಜಿನ್ ಸರ್ಕಾರದ ಪ್ರಯತ್ನದಿಂದ ಇಂದು ಉತ್ತರ ಪ್ರದೇಶವು ದೇಶದ ಅತ್ಯಂತ ಸಂಪರ್ಕಿತ ಪ್ರದೇಶವಾಗಿ ಬದಲಾಗುತ್ತಿದೆ. ರಾಷ್ಟ್ರೀಯವಾಗಿ ಮಾತ್ರವಲ್ಲದೆ ಅಂತರರಾಷ್ಟ್ರೀಯ ಮಟ್ಟದಲ್ಲಿ ತನ್ನ ಛಾಪು ಮೂಡಿಸುತ್ತಿದೆ‘ ಎಂದು ಪ್ರಧಾನಿ ತಿಳಿಸಿದರು.

ಈ ವೇಳೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಕೇಂದ್ರ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರು ಸಹ ಉಪಸ್ಥಿತರಿದ್ದರು.

ನೊಯ್ಡಾವಿಮಾನ ನಿಲ್ದಾಣದ ಮೊದಲ ಹಂತದ ಅಭಿವೃದ್ಧಿಯು ₹ 10,050 ಕೋಟಿ ವೆಚ್ಚದಲ್ಲಿ ಆಗಲಿದೆ. ಈ ಹಂತದಲ್ಲಿ1,300 ಹೆಕ್ಟೇರ್‌ಗೂ ಅಧಿಕ ಜಾಗವನ್ನು ಬಳಸಲಾಗುವುದು.

ಈ ವಿಮಾನ ನಿಲ್ದಾಣವು ವರ್ಷದಲ್ಲಿ 1.2 ಕೋಟಿ ಪ್ರಯಾಣಿಕರಿಗೆ ಸೇವೆ ಒದಗಿಸುವ ಸಾಮರ್ಥ್ಯ ಹೊಂದಲಿದೆ ಮತ್ತು ನಿರ್ಮಾಣ ಕಾಮಗಾರಿಯು 2024ರ ವೇಳೆಗೆ ಪೂರ್ಣಗೊಳ್ಳಲಿದೆ ಎಂದು ಅಧಿಕಾರಿಗಳು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.