ADVERTISEMENT

‘ಮನ್‌ ಕಿ ಬಾತ್‌‘ನಲ್ಲಿ ಸಲೀಂ ಅಲಿ, ಜೊನಾಸ್ ಮಾಸೆಟ್ಟಿ ನೆನಪು

ಪಿಟಿಐ
Published 29 ನವೆಂಬರ್ 2020, 8:21 IST
Last Updated 29 ನವೆಂಬರ್ 2020, 8:21 IST
ನರೇಂದ್ರ ಮೋದಿ
ನರೇಂದ್ರ ಮೋದಿ   

ನವದೆಹಲಿ: ಭಾರತಕ್ಕೆ ವಾಪಸಾದ ವಾರಾಣಸಿಯ ‘ಅನ್ನಪೂರ್ಣಾ ದೇವಿ ವಿಗ್ರಹ‘, ಪಕ್ಷಿ ತಜ್ಞ ಸಲೀಂ ಅಲಿಯವರ ನೆನಪು, ಕರ್ತಾಪುರ್ ಸಾಹಿಬ್ ಕಾರಿಡಾರ್, ವಿದೇಶದಲ್ಲಿ ಭಾರತೀಯರೊಬ್ಬರು ಸಂಸ್ಕೃತದಲ್ಲಿ ಪ್ರಮಾಣ ವಚನ ಸ್ವೀಕಾರ.. ಇಂಥ ಹಲವು ವಿಚಾರಗಳನ್ನು ಪ್ರಧಾನಿ ನರೇಂದ್ರ ಮೋದಿಯವರು ಮಾಸಿಕ ರೇಡಿಯೊ ಕಾರ್ಯಕ್ರಮ ‘ಮನ್‌ ಕಿ ಬಾತ್‌‘ನಲ್ಲಿ ಉಲ್ಲೇಖಿಸಿದರು.

ಪ್ರಧಾನಿಯವರು ಆರಂಭದಲ್ಲಿ ನೂತನ ಕೃಷಿ ಕಾಯ್ದೆಗಳಿಂದ ರೈತರಿಗೆ ಆಗುವ ಪ್ರಯೋಜನಗಳನ್ನು ಪ್ರಸ್ತಾಪಿಸುತ್ತಾ, ತಮ್ಮ ಮಾತುಗಳನ್ನು 1913ರಲ್ಲಿ ವಾರಾಣಸಿಯಿಂದ ಕಳುವಾಗಿದ್ದ ‘ಅನ್ನಪೂರ್ಣಾ ದೇವಿ ವಿಗ್ರಹ‘ ವಿಚಾರದತ್ತ ಹೊರಳಿಸಿದರು. ಕೆನಡಾ ದೇಶದವರು ಆ ವಿಗ್ರಹವನ್ನು ಮರಳಿ ಭಾರತಕ್ಕೆ ಕಳುಹಿಸಲು ಒಪ್ಪಿದ್ದನ್ನು ಸ್ಮರಿಸಿದರು.

ನಂತರ ಶಿಕ್ಷಣ ಸಂಸ್ಥೆಗಳು ತಮ್ಮ ಹಳೆಯ ವಿದ್ಯಾರ್ಥಿಗಳ ಸಾಮರ್ಥ್ಯ ಮತ್ತು ಪ್ರತಿಭೆಯನ್ನು ಬಳಸಿಕೊಳ್ಳಬೇಕೆಂದು ಒತ್ತಿ ಹೇಳಿದರು.

ADVERTISEMENT

ಸೋಮವಾರ ಸಿಖ್ಖರ ಧರ್ಮಗುರು ಗುರುನಾನಕ್ ದೇವ್ ಅವರ ಜನ್ಮದಿನ. ಇದರ ಅಂಗವಾಗಿ ಗುರುನಾನಕ್ ಅವರ ಉದಾತ್ತ ಆದರ್ಶಗಳನ್ನು ನೆನಪಿಸಿಕೊಂಡ ಮೋದಿಯವರು, ಸಿಖ್‌ ಗುರುಗಳು ಮತ್ತು ಗುರದ್ವಾರಗಳಿಗೆ ಸಂಬಂಧಿಸಿದ ವಿವಿಧ ಕಾರ್ಯಗಳಲ್ಲಿ ಭಾಗಿಯಾಗಿರುವುದು ತಮ್ಮ ಅದೃಷ್ಟ ಎಂದು ಅಭಿಪ್ರಾಯಪಟ್ಟರು.

ಇದೇ ಸಂದರ್ಭದಲ್ಲಿ, ಕಳೆದ ವರ್ಷ ನವೆಂಬರ್‌ ತಿಂಗಳಲ್ಲಿ ಕರ್ತಾಪುರ್ ಸಾಹಿಬ್ ಕಾರಿಡಾರ್ ತೆರೆದಿದ್ದನ್ನು ಐತಿಹಾಸಿಕ ಘಟನೆ ಎಂದು ಅವರು ಶ್ಲಾಘಿಸಿದರು. ಜತೆಗೆ ಕಚ್‌ನಲ್ಲಿರುವ ಗುರುದ್ವಾರದ ಕುರಿತು ಮಾತನಾಡಿದರು.

ಭಾರತೀಯ ಪಕ್ಷಿ ವಿಜ್ಞಾನಿ ಡಾ. ಸಲೀಂ ಅಲಿ ಅವರ ಕಾರ್ಯವನ್ನು ಸ್ಮರಿಸಿದ ಪ್ರಧಾನಿಯವರು, ‘ದೇಶದಲ್ಲಿ ಪ‍ಕ್ಷಿ ವೀಕ್ಷಣೆಯ ಬಗ್ಗೆ ಆಸಕ್ತಿ ಹೊಂದಿರುವ ಅನೇಕ ಸಂಘ ಸಂಸ್ಥೆಗಳಿವೆ. ಇವರೆಲ್ಲ ಪಕ್ಷಿ ವೀಕ್ಷಣೆಗೆ ಸಂಬಂಧಿಸಿದಂತೆ ಸಾಕಷ್ಟು ಕೆಲಸಗಳನ್ನು ಮಾಡುತ್ತಿರುವುದಾಗಿ ಭಾವಿಸಿದ್ದೇನೆ‘ ಎಂದು ಹೇಳಿದರು.

‘ಭಾರತೀಯ ಸಂಸ್ಕೃತಿ ಪ್ರಪಂಚದಾದ್ಯಂತ ಜನಪ್ರಿಯತೆ ಗಳಿಸುತ್ತಿದೆ‘ ಎಂದ ಅವರು, ಅಂಥದ್ದೊಂದು ಪ್ರಯತ್ನ ಬ್ರೆಜಿಲ್‌ನಲ್ಲಿ ನಡೆದಿದೆ. ಬ್ರೆಜಿಲ್ ಮೂಲದ ಜೊನಾಸ್ ಮಾಸೆಟ್ಟಿಯವರು ವೇದಾಂತ ಮತ್ತು ಭಗವದ್ಗೀತೆಯನ್ನು ಜನಪ್ರಿಯಗೊಳಿಸುತ್ತಿದ್ದಾರೆ. ನಮ್ಮ ಸಂಸ್ಕೃತಿ ಮತ್ತು ನೀತಿಗಳನ್ನು ಜನಪ್ರಿಯಗೊಳಿಸಲು ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸುತ್ತಿದ್ದಾರೆ‘ ಎಂದರು.

ಇದೇ ವೇಳೆ ನ್ಯೂಜಿಲೆಂಡ್‌ನ ಹ್ಯಾಮಿಲ್ಟನ್ ವೆಸ್ಟ್ ಸಂಸದ ಗೌರವ್ ಶರ್ಮಾ ಅವರು ಸಂಸ್ಕೃತದಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದನ್ನು ಪ್ರಧಾನಿ ಶ್ಲಾಘಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.