ADVERTISEMENT

ಸಣ್ಣ, ಅತಿ ಸಣ್ಣ ರೈತರಿಗೆ ಮಸೂದೆಗಳು ಅನುಕೂಲ: ಪ್ರಧಾನಿ ಮೋದಿ

ವಿರೋಧ ಪಕ್ಷಗಳ ವಿರುದ್ಧ ವಾಗ್ದಾಳಿ, ರೈತರಿಗೆ ಮಸೂದೆಯ ಅನುಕೂಲಗಳನ್ನು ತಿಳಿಸಲು ಕರೆ

ಪಿಟಿಐ
Published 25 ಸೆಪ್ಟೆಂಬರ್ 2020, 8:39 IST
Last Updated 25 ಸೆಪ್ಟೆಂಬರ್ 2020, 8:39 IST
ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ   

ನವದೆಹಲಿ: ಕೃಷಿ ಮಸೂದೆಗಳನ್ನು ವಿರೋಧಿಸುತ್ತಾ, ಕೇಂದ್ರದ ವಿರುದ್ಧ ಹರಿಹಾಯುತ್ತಿರುವ ವಿರೋಧಪಕ್ಷಗಳನ್ನು ತರಾಟೆಗೆ ತೆಗೆದುಕೊಂಡಿರುವ ಪ್ರಧಾನಿ ನರೇಂದ್ರ ಮೋದಿ, ‘ರೈತರಿಗೆ ಸದಾ ಸುಳ್ಳು ಹೇಳುತ್ತಿದ್ದವರು, ಈಗ ತಮ್ಮ ರಾಜಕೀಯ ಲಾಭಕ್ಕಾಗಿ ಆ ಕೃಷಿಕರನ್ನೇ ದಾಳವನ್ನಾಗಿ ಬಳಸಿಕೊಳ್ಳುತ್ತಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪಂಡಿತ್‌ ದೀನ್‌ದಯಾಳ್ ಉಪಾಧ್ಯಾಯ ಅವರ ಜನ್ಮದಿನದ ಅಂಗವಾಗಿ ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರಿಗಾಗಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಹೊಸ ಕೃಷಿ ಮಸೂದೆಗಳ ಕುರಿತ ವಾಸ್ತಾವಂಶವನ್ನು ರೈತರಿಗೆ ತಲುಪಿಸುವ ಮೂಲಕ, ಈ ಮಸೂದೆಗಳ ಬಗ್ಗೆ ಮಾಡುತ್ತಿರುವ ಅಪಪ್ರಚಾರಕ್ಕೆ ಅಂತ್ಯ ಹಾಡಬೇಕು’ ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.

ಮಸೂದೆಗಳ ವಿರುದ್ಧ ರಾಷ್ಟ್ರವ್ಯಾಪಿ ಪ್ರತಿಭಟನೆಗೆ ಮುಂದಾಗಿರುವ ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ನಡೆಸಿದ ಮೋದಿ, ‘ಸ್ವಾತಂತ್ರ್ಯ ಬಂದಾಗಿನಿಂದ ರೈತರು ಮತ್ತು ಕಾರ್ಮಿಕರ ಪರವಾಗಿ ಪೊಳ್ಳು ಆಶ್ವಾಸನೆ, ಘೋಷಣೆಗಳನ್ನು ಮಾಡುತ್ತಾ, ಅವರ ಹೆಸರಿನಲ್ಲೇ ಕೇಂದ್ರ ಮತ್ತು ರಾಜ್ಯದಲ್ಲಿ ಸರ್ಕಾರ ರಚಿಸಿದ್ದಾರೆ. ಈಗ ಅವರನ್ನೇ ತಮ್ಮ ಹೋರಾಟಕ್ಕೆ ದಾಳವನ್ನಾಗಿ ಮಾಡಿಕೊಂಡಿದ್ದಾರೆ’ ಎಂದು ದೂರಿದರು.

ADVERTISEMENT

‘ಕೃಷಿ ಮಸೂದೆಗಳ ತಿದ್ದುಪಡಿಯಿಂದಾಗಿ ದೇಶದಲ್ಲಿರುವ ಶೇ 85ರಷ್ಟು ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಹೆಚ್ಚಿನ ಲಾಭವಾಗಲಿದೆ’ ಎಂದು ಹೇಳಿದ ಪ್ರಧಾನಿ, ಈ ಮಸೂದೆ, ಕೃಷಿ ಮಂಡಿ (ಎಪಿಎಂಸಿ) ಹೊರಗೂ ರೈತರು ತಮ್ಮ ಉತ್ಪನ್ನಗಳಿಗೆ ತಾವೇ ಬೆಲೆ ನಿಗದಿಪಡಿಸಿ ಮಾರಾಟ ಮಾಡುವ ಅವಕಾಶವನ್ನು ಕಲ್ಪಿಸಲಿದೆ’ ಎಂದು ವಿವರಿಸಿದರು.

‘ಮಸೂದೆಗಳ ಬಗ್ಗೆ ವದಂತಿಗಳನ್ನು ಹರಡಲಾಗುತ್ತಿದ್ದು, ಇಂಥವುಗಳಿಂದ ರೈತರನ್ನು ರಕ್ಷಿಸಬೇಕಿದೆ. ಅಲ್ಲದೆ ಕೃಷಿ ಮಸೂದೆ ಸುಧಾರಣೆಗಳ ಮಹತ್ವವನ್ನು ವಿವರಿಸಬೇಕಿದೆ. ಈ ಮೂಲಕ ರೈತರ ಭವಿಷ್ಯವನ್ನು ಉಜ್ವಲವಾಗಿಸುವುದು ಎಲ್ಲಾ ಬಿಜೆಪಿ ಕಾರ್ಯಕರ್ತರ ಜವಾಬ್ದಾರಿ ಮತ್ತು ಕರ್ತವ್ಯವಾಗಿದೆ’ ಎಂದು ಮೋದಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.