ADVERTISEMENT

ಶ್ರೀಲಂಕಾಗೆ ₹ 3 ಸಾವಿರ ಕೋಟಿ ನೆರವು ಘೋಷಿಸಿದ ಪ್ರಧಾನಿ ಮೋದಿ

ಶ್ರೀಲಂಕಾ ನೂತನ ಅಧ್ಯಕ್ಷ ಗೋಟಬಯ ರಾಜಪಕ್ಸೆ ಜತೆ ಮಾತುಕತೆ

ಏಜೆನ್ಸೀಸ್
Published 29 ನವೆಂಬರ್ 2019, 13:41 IST
Last Updated 29 ನವೆಂಬರ್ 2019, 13:41 IST
ಶ್ರೀಲಂಕಾ ನೂತನ ಅಧ್ಯಕ್ಷ ಗೋಟಬಯ ರಾಜಪಪ್ಸೆ ಜತೆ ಪ್ರಧಾನಿ ಮೋದಿ
ಶ್ರೀಲಂಕಾ ನೂತನ ಅಧ್ಯಕ್ಷ ಗೋಟಬಯ ರಾಜಪಪ್ಸೆ ಜತೆ ಪ್ರಧಾನಿ ಮೋದಿ   

ನವದೆಹಲಿ: ಭಯೋತ್ಪಾದನೆ ವಿರುದ್ಧದ ಹೋರಾಟಕ್ಕೆ ₹ 350 ಕೋಟಿ ಸೇರಿದಂತೆ ಶ್ರೀಲಂಕಾಗೆ ₹ 3 ಸಾವಿರ ಕೋಟಿ ಹಣಕಾಸು ನೆರವು ನೀಡುವುದಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಘೊಷಿಸಿದ್ದಾರೆ.

ಭಾರತಕ್ಕೆ ಬಂದಿಳಿದ ಶ್ರೀಲಂಕಾದ ನೂತನ ಅಧ್ಯಕ್ಷ ಗೋಟಬಯ ರಾಜಪಕ್ಸೆ ಅವರೊಂದಿಗೆ ಮೋದಿ ಅವರು ಮಾತುಕತೆ ನಡೆಸಿದ್ದಾರೆ. ಶ್ರೀಲಂಕಾದಲ್ಲಿರುವ ತಮಿಳು ಸಮುದಾಯದವರ ಆಶೋತ್ತರ ಈಡೇರಿಸುವುದು, ಭದ್ರತೆ ಹೆಚ್ಚಳ, ವ್ಯಾಪಾರ ಹಾಗೂ ಮೀನುಗಾರರ ಸಮಸ್ಯೆ ನಿವಾರಣೆ ವಿಷಯಗಳ ಬಗ್ಗೆ ಮಾತುಕತೆಯಲ್ಲಿ ಹೆಚ್ಚಿನ ಒತ್ತು ನೀಡಲಾಗಿದೆ.

ನೆರೆಯ ದೇಶವು ವೇಗದ ಅಭಿವೃದ್ಧಿ ಸಾಧಿಸಲು ಭಾರತದಿಂದ ಎಲ್ಲ ರೀತಿಯ ನೆರವು ನೀಡುವುದಾಗಿ ರಾಜಪಕ್ಸೆ ಅವರಿಗೆ ಮೋದಿ ಭರವಸೆ ನೀಡಿದ್ದಾರೆ. ಶ್ರೀಲಂಕಾದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳಲು ₹ 3 ಸಾವಿರ ಕೋಟಿ ನೀಡಲಾಗುತ್ತಿದೆ. ಇದರ ಜೊತೆ ಭಯೋತ್ಪಾದನೆ ವಿರುದ್ಧದ ಹೋರಾಟಕ್ಕೆ ಪ್ರತ್ಯೇಕ ನೆರವು ನೀಡಲಾಗುತ್ತಿದೆ. ಇದೇ ಏಪ್ರಿಲ್‌ನಲ್ಲಿ ಲಂಕಾದಲ್ಲಿ ನಡೆದ ಸರಣಿ ಬಾಂಬ್ ಸ್ಫೋಟದಲ್ಲಿ 250ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದರು.

ADVERTISEMENT

‘ಭಯೋತ್ಪಾದನೆ ವಿರುದ್ಧದ ಹೋರಾಟದ ವಿಧಾನವನ್ನು ಅರಿಯುವ ಸಲುವಾಗಿ ಶ್ರೀಲಂಕಾದ ಪೊಲೀಸ್ ಅಧಿಕಾರಿಗಳಿಗೆ ಭಾರತದ ಉನ್ನತ ಸಂಸ್ಥೆಗಳಲ್ಲಿ ತರಬೇತಿ ನೀಡಲಾಗುತ್ತಿದೆ. ಉಗ್ರವಾದ ನಿಗ್ರಹದಲ್ಲಿ ಎರಡೂ ದೇಶಗಳ ನಡೆ ಏನಾಗಿರಬೇಕು’ ಎಂಬುದರ ಬಗ್ಗೆ ವಿಸ್ತೃತ ಚರ್ಚೆ ನಡೆಸಲಾಯಿತು ಎಂದು ಮೋದಿ ಹೇಳಿದ್ದಾರೆ.

ಅಧ್ಯಕ್ಷರಾಗಿ ಆಯ್ಕೆಯಾದ 10 ದಿನಗಳ ಬಳಿಕ ಮೊದಲ ವಿದೇಶ ಪ್ರವಾಸದಲ್ಲಿ ಗೋಟಬಯ ಅವರು ಭಾರತಕ್ಕೆ ಗುರುವಾರ ಬಂದಿದ್ದಾರೆ.

ಆರ್ಥಿಕ ಹಾಗೂ ಭದ್ರತಾ ಸಹಕಾರವೇ ಮಾತುಕತೆಯ ಕೇಂದ್ರವಾಗಿತ್ತು ಎಂದು ಗೋಟಬಯ ಹೇಳಿದ್ದಾರೆ.

ಡೊಭಾಲ್ ಭೇಟಿ: ಗುರುವಾರ ರಾತ್ರಿ ದೆಹಲಿಗೆ ಬಂದಿಳಿದ ಗೋಟಬಯ ಅವರು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಡೊಭಾಲ್ ಜತೆ ಮಾತುಕತೆ ನಡೆಸಿದ್ದಾರೆ. ರಾಷ್ಟ್ರೀಯ ಹಿತಾಸಕ್ತಿ ಹಾಗೂ ದ್ವಿಪಕ್ಷೀಯ ಸಹಕಾರ ವಿಷಯಗಳು ಚರ್ಚೆಗೆ ಬಂದವು ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.