ADVERTISEMENT

ನ್ಯಾಷನಲ್ ಹೆರಾಲ್ಡ್: ಜುಲೈ ಅಂತ್ಯದಲ್ಲಿ ಹೇಳಿಕೆ ನೀಡಲು ಸೋನಿಯಾಗೆ ಇ.ಡಿ ಸೂಚನೆ

​ಪ್ರಜಾವಾಣಿ ವಾರ್ತೆ
Published 23 ಜೂನ್ 2022, 13:24 IST
Last Updated 23 ಜೂನ್ 2022, 13:24 IST
ಸೋನಿಯಾ ಗಾಂಧಿ
ಸೋನಿಯಾ ಗಾಂಧಿ   

ನವದೆಹಲಿ: ನ್ಯಾಷನಲ್‌ ಹೆರಾಲ್ಡ್‌ಪತ್ರಿಕೆಗೆ ಸಂಬಂಧಿಸಿದ ಹಣಅಕ್ರಮ ವರ್ಗಾವಣೆ ಪ್ರಕರಣದ ವಿಚಾರಣೆಗೆ ಹಾಜರಾಗುವ ದಿನಾಂಕ ಮುಂದೂಡುವಂತೆಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ ಅವರು ಸಲ್ಲಿಸಿದ್ದ ಮನವಿಯನ್ನು ಜಾರಿ ನಿರ್ದೇಶನಾಲಯ (ಇ.ಡಿ) ಪುರಸ್ಕರಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘ಈ ಪ್ರಕರಣ ಸಂಬಂಧ ಸೋನಿಯಾ ಅವರ ವಿಚಾರಣೆಯನ್ನು ನಾಲ್ಕು ವಾರಗಳವರೆಗೆ ಮುಂದೂಡಲಾಗಿದೆ. ಜುಲೈ ಕೊನೆ ವಾರದಲ್ಲಿ ಇ.ಡಿ ಮುಂದೆ ಹಾಜರಾಗಿ ಹೇಳಿಕೆ ದಾಖಲಿಸಲು ಅವರಿಗೆ ಸೂಚಿಸಲಾಗಿದೆ’ ಎಂದು ಕೇಂದ್ರ ತನಿಖಾ ಸಂಸ್ಥೆಯ ಮೂಲಗಳು ಹೇಳಿವೆ.

ಸೋನಿಯಾ ಅವರಿಗೆ ಜೂನ್‌ 5ರಂದು ವಿಚಾರಣೆಗೆ ಹಾಜರಾಗುವಂತೆ ಇ.ಡಿ ಮೊದಲ ನೋಟಿಸ್‌ ನೀಡಿತ್ತು. ಸೋನಿಯಾ ಅವರಿಗೆ ಕೋವಿಡ್‌ ಸೋಂಕು ಇರುವುದು ದೃಢಪಟ್ಟ ನಂತರ ವಿಚಾರಣೆ ಮುಂದೂಡಿ, ಜೂನ್ 23ರಂದು ವಿಚಾರಣೆಗೆ ಹಾಜರಾಗಲು ಇ.ಡಿ ಎರಡನೇ ನೋಟಿಸ್‌ ನೀಡಿತ್ತು.ಆದರೆ, ಕೋವಿಡ್ ಮತ್ತು ಶ್ವಾಸಕೋಶದ ಸೋಂಕಿನಿಂದ ಬಳಲುತ್ತಿರುವ ಸೋನಿಯಾ ಅವರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದು, ವೈದ್ಯರು ಅವರಿಗೆ ಮನೆಯಲ್ಲಿಯೇ ಇದ್ದು ವಿಶ್ರಾಂತಿ ಪಡೆಯಲು ಸಲಹೆ ನೀಡಿದ್ದಾರೆ.

ADVERTISEMENT

ಇದೇ ಪ್ರಕರಣ ಸಂಬಂಧ ಸೋನಿಯಾ ಅವರ ಪುತ್ರ ಮತ್ತು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರನ್ನು ಇ.ಡಿ 5 ದಿನಗಳ ಕಾಲ, ಒಟ್ಟು 54 ಗಂಟೆ ವಿಚಾರಣೆ ನಡೆಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.