
ನವದೆಹಲಿ: ನಾಲ್ಕು ಕಾರ್ಮಿಕ ಸಂಹಿತೆಗಳನ್ನು ವಿರೋಧಿಸಿ ವಿವಿಧ ಕಾರ್ಮಿಕ ಸಂಘಟನೆಗಳು ಗುರುವಾರ ಕರೆ ನೀಡಿದ್ದ ಸಾರ್ವತ್ರಿಕ ಮುಷ್ಕರದಲ್ಲಿ ದೇಶದಾದ್ಯಂತ 30 ಕೋಟಿಗೂ ಅಧಿಕ ಕಾರ್ಮಿಕರು ಹಾಗೂ ರೈತರು ಭಾಗಿಯಾಗಿದ್ದರು ಎಂದು ಕಾರ್ಮಿಕ ಸಂಘಟನೆಗಳು ತಿಳಿಸಿವೆ.
ಕಾರ್ಮಿಕ ವಿರೋಧಿ, ರೈತ ವಿರೋಧಿ ಹಾಗೂ ಕಾರ್ಪೋರೇಟ್ ಸಂಸ್ಥೆಗಳ ಪರವಾದ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ಹಿಂದಕ್ಕೆ ಪಡೆಯುವಂತೆ ಒತ್ತಾಯಿಸಿ ದೇಶದಾದ್ಯಂತ ನಡೆದ ಪ್ರತಿಭಟನೆಗೆ ಕೆಲವೆಡೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು.
ಮುಷ್ಕರಕ್ಕೆ ಕೇರಳದಲ್ಲಿ ದೊಡ್ಡ ಮಟ್ಟದ ಬೆಂಬಲ ವ್ಯಕ್ತವಾಯಿತು. ಉಳಿದಂತೆ, ಒಡಿಶಾ, ತಮಿಳುನಾಡು, ಗೋವಾ, ಜಾರ್ಖಂಡ್, ಛತ್ತೀಸ್‌ಗಢ, ಮಧ್ಯಪ್ರದೇಶ, ಪಂಜಾಬ್‌ನಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು. ಹಲವು ಪ್ರದೇಶಗಳಲ್ಲಿ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಮೇಲೆ ಪರಿಣಾಮ ಬೀರಿತು. ಮಾರುಕಟ್ಟೆಗಳು, ಶೈಕ್ಷಣಿಕ ಸಂಸ್ಥೆ, ಉದ್ಯಮ ಸಂಸ್ಥೆಗಳ ಮೇಲೂ ಪರಿಣಾಮ ಬೀರಿತು. ನಗರದ ಪ್ರಮುಖ ರಸ್ತೆಗಳು, ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿಗಳಲ್ಲಿ ವಾಹನಗಳನ್ನು ತಡೆಹಿಡಿಯಲಾಗಿತ್ತು.
ಮುಷ್ಕರ ನಿರತ ಕಾರ್ಮಿಕರು ಹಾಗೂ ರೈತರನ್ನು ಬೆಂಬಲಿಸಿ ವಿರೋಧ ಪಕ್ಷದ ಸಂಸದರು ಸಂಸತ್ ಆವರಣದಲ್ಲಿ ಪ್ರತಿಭಟನೆ ನಡೆಸಿದರು.
ದೇಶದಾದ್ಯಂತ 30 ಕೋಟಿ ಕಾರ್ಮಿಕರು, ರೈತರು, ಇತರೆ ಕ್ಷೇತ್ರಗಳಲ್ಲಿ ಕೆಲಸ ಮಾಡುವ ಕಾರ್ಮಿಕರು ಸಾರ್ವತ್ರಿಕ ಮುಷ್ಕರದಲ್ಲಿ ಕೈ ಜೋಡಿಸಿದ್ದು, ಔಪಚಾರಿಕ, ಅನೌಪಾಚಾರಿಕ , ಸರ್ಕಾರಿ, ಸಾರ್ವಜನಿಕ ಸ್ವಾಮ್ಯ, ಕೈಗಾರಿಕೆ, ಗ್ರಾಮೀಣ ಹಾಗೂ ನಗರ ಭಾಗದ ಕಾರ್ಮಿಕರು ಕೈ ಜೋಡಿಸಿದ್ದರಿಂದ ಪ್ರತಿಭಟನೆ ಯಶಸ್ವಿಯಾಗಿದೆ’ ಎಂದು ಕಾರ್ಮಿಕ ಸಂಘಟನೆಗಳು ಬಿಡುಗಡೆಗೊಳಿಸಿರುವ ಪ್ರಕಟಣೆಯಲ್ಲಿ ತಿಳಿಸಿದೆ.
ಒಡಿಶಾದಲ್ಲೂ ಪ್ರತಿಭಟನೆಗೆ ಉತ್ತಮ ಬೆಂಬಲ ವ್ಯಕ್ತವಾಯಿತು. ಜಾರ್ಖಂಡ್‌ನಲ್ಲಿ ಕಾಂಗ್ರೆಸ್ ಹಾಗೂ ಎಡಪಕ್ಷಗಳು ಮುಷ್ಕರಕ್ಕೆ ಬೆಂಬಲ ಸೂಚಿಸಿದ ಕಾರಣ, ಬ್ಯಾಂಕಿಂಗ್, ವಿಮಾ ಹಾಗೂ ಕಲ್ಲಿದ್ದಲು ಕ್ಷೇತ್ರದ ನೌಕರರು ಕರ್ತವ್ಯಕ್ಕೆ ಗೈರಾದರು ಎಂದು ಕಾರ್ಮಿಕ ಸಂಘಟನೆಯ ನಾಯಕರು ತಿಳಿಸಿದ್ದಾರೆ.
ಛತ್ತೀಸಗಢದಲ್ಲಿ ಗಣಿಗಳಲ್ಲಿ ಕೆಲ ಕಾರ್ಮಿಕರು ಕೆಲಸಕ್ಕೆ ಹಾಜರಾಗದೇ, ಮುಷ್ಕರಕ್ಕೆ ಕೈ ಜೋಡಿಸಿದರು. ರಾಷ್ಟ್ರೀಕೃತ ಬ್ಯಾಂಕ್‌ಗಳು, ವಿಮಾ ಕಂಪನಿಗಳು, ಅಂಚೆ ಕಚೇರಿಯ ನೌಕರರು ಕೂಡ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಸಾರಿಗೆ ಬಸ್ ಸೇರಿದಂತೆ ವಾಹನಗಳು ಎಂದಿನಂತೆ ಸಂಚಾರ ನಡೆಸಿದವು.
ತಮಿಳುನಾಡಿನ ತೂತುಕುಡಿ ಹಾಗೂ ಚೆನ್ನೈನ ಬಂದರಿನಲ್ಲಿ ನೌಕರರು ಪ್ರತಿಭಟನೆ ನಡೆಸಿದ್ದರಿಂದ ದೈನಂದಿನ ಚಟುವಟಿಕೆಯ ಮೇಲೂ ಪರಿಣಾಮ ಬೀರಿತು. ರಾಜ್ಯದ ಅತೀ ದೊಡ್ಡ ಕೈಗಾರಿಕಾ ಕೇಂದ್ರವಾದ ಶ್ರೀ ಪೆರಬಂದೂರಿನಲ್ಲಿ ನೌಕರರು ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ನಡೆಸಿದ್ದರಿಂದ ಉತ್ಪಾದನಾ ಚಟುವಟಿಕೆ ಸ್ಥಗಿತಗೊಂಡಿತ್ತು. ಗೋವಾದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು. ಬ್ಯಾಂಕಿಂಗ್ ಚಟುವಟಿಕೆಗಳು ಸ್ಥಗಿತಗೊಂಡಿದ್ದರೆ, ಅಗತ್ಯ ಸೇವೆಗಳ ಮೇಲೂ ಪರಿಣಾಮ ಬೀರಿತು.
ಮಧ್ಯಪ್ರದೇಶದ ರಕ್ಷಣಾ ಉತ್ಪನ್ನಗಳ ತಯಾರಿಕಾ ಕೇಂದ್ರಗಳ 25 ಸಾವಿರಕ್ಕೂ ಅಧಿಕ ನೌಕರರು ಒಂದು ತಾಸು ತಡವಾಗಿ ಕೆಲಸ ಆಗಮಿಸುವ ಮೂಲಕ ಪ್ರತಿಭಟನೆಗೆ ಬೆಂಬಲ ಸೂಚಿಸಿದರು. ರಾಜ್ಯದಾದ್ಯಂತ ಶಾಲಾ, ಕಾಲೇಜುಗಳು, ಬ್ಯಾಂಕ್ ಕಚೇರಿಗಳು ಎಂದಿನಂತೆ ಕಾರ್ಯನಿರ್ವಹಿಸಿದವು. ಪಶ್ಚಿಮ ಬಂಗಾಳ ಹಾಗೂ ತ್ರಿಪುರಾದಲ್ಲಿ ಮುಷ್ಕರಕ್ಕೆ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು. ಬ್ಯಾಂಕಿಂಗ್, ಶಿಕ್ಷಣ ಕಚೇರಿ, ಮಾರುಕಟ್ಟೆಗಳು ಎಂದಿನಂತೆ ತೆರೆದಿತ್ತು. ರೈಲು ಸೇವೆಗಳಲ್ಲಿ ಯಾವುದೇ ವ್ಯತ್ಯಯ ಉಂಟಾಗಲಿಲ್ಲ.
ರಾಹುಲ್ ಗಾಂಧಿ ಬೆಂಬಲ
ಸಾರ್ವತ್ರಿಕ ಮುಷ್ಕರಕ್ಕೆ ಲೋಕಸಭೆಯ ವಿರೋಧ ಪಕ್ಷದ ನಾಯಕ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಕೂಡ ಬೆಂಬಲ ಸೂಚಿಸಿದರು.
‘ನಾಲ್ಕು ಕಾರ್ಮಿಕ ಸಂಹಿತೆಗಳು ಹಕ್ಕುಗಳನ್ನು ದುರ್ಬಲಗೊಳಿಸಲಿವೆ ಎಂದು ಕಾರ್ಮಿಕರು ಆತಂಕಗೊಂಡಿದ್ದಾರೆ. ವ್ಯಾಪಾರ ಒಪ್ಪಂದಗಳು ನಮ್ಮ ಜೀವನೋಪಾಯಕ್ಕೆ ಹೊಡೆತ ನೀಡಬಹುದು ಎಂದು ರೈತರು ಆತಂಕಗೊಂಡಿದ್ದಾರೆ. ಭವಿಷ್ಯದ ಕುರಿತು ನಿರ್ಧಾರ ತೆಗೆದುಕೊಳ್ಳುವ ಸಂದರ್ಭದಲ್ಲಿ ಕಾರ್ಮಿಕರ ಧ್ವನಿಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ. ಮೋದಿ ಅವರೇ ಈಗಲಾದರೂ ಕೂಡ ಕೇಳಿಸಿಕೊಳ್ಳುತ್ತೀರಾ? ಅವರ ‘ಹಿಡಿತ’ ಬಲವಾಗಿದೆಯೇ? ತಮ್ಮ ಹಕ್ಕುಗಳಿಗಾಗಿ ಹೋರಾಡುತ್ತಿರುವ ಕಾರ್ಮಿಕರು ಹಾಗೂ ರೈತರ ಜೊತೆಗೆ ನಾನು ಧೃಡವಾಗಿ ನಿಲ್ಲುತ್ತೇನೆ’ ಎಂದು ‘ಎಕ್ಸ್’ನಲ್ಲಿ ಫೋಸ್ಟ್ ಮಾಡಿದ್ದಾರೆ.
ಕೇರಳ: ಜನಜೀವನ ಅಸ್ತವ್ಯಸ್ತ
ಕಾರ್ಮಿಕ ಕಾಯ್ದೆ ವಿರೋಧಿಸಿ ಕೇರಳದ ವಿವಿಧೆಡೆ ಹಿಂಸಾಚಾರ ಸಂಭವಿಸಿದ್ದು ಜನಜೀವನ ಅಸ್ತವ್ಯಸ್ತಗೊಂಡಿತು. ಕಚೇರಿಗಳಿಗೆ ಹಾಜರಾಗುವಂತೆ ನೌಕರರಿಗೆ ಕೇರಳ ಸರ್ಕಾರ ಮುಂಚಿತವಾಗಿ ಸೂಚಿಸಿತ್ತು. ಕರ್ತವ್ಯಕ್ಕೆ ಗೈರಾದರೆ ಆ ದಿನದ ವೇತನ ನೀಡುವುದಿಲ್ಲ ಎಂದು ಕೇರಳ ಸರ್ಕಾರವು ಘೋಷಿಸಿತ್ತು. ಹೀಗಿದ್ದರೂ ಕೂಡ ತಿರುವನಂತಪುರದಲ್ಲಿ ವಿಧಾನಸಭೆ ಸೇರಿದಂತೆ ಹಲವು ಕಚೇರಿಗಳಲ್ಲಿ ನೌಕರರ ಹಾಜರಾತಿ ಕಡಿಮೆ ಇತ್ತು. ಸರ್ಕಾರಿ ಬಸ್‌ಗಳ ಸಂಚಾರ ಕಡಿಮೆ ಇದ್ದ ಕಾರಣ ಜನ ಜೀವನದ ಮೇಲೂ ವ್ಯತ್ಯಯ ಉಂಟಾಯಿತು. ಉಳಿದಂತೆ ಸರ್ಕಾರಿ ಕಚೇರಿ ಬ್ಯಾಂಕ್ ಅಂಗಡಿ ಮುಂಗಟ್ಟುಗಳು ಮುಚ್ಚಿದ್ದವು. ಇದರಿಂದ ದೂರ ಊರುಗಳಿಂದ ಪ್ರಯಾಣಿಕರು ಬಸ್ ನಿಲ್ದಾಣದಲ್ಲಿಯೇ ಉಳಿಯುವಂತಾಯಿತು. ಗುರುವಾರದಿಂದ ಶಬರಿಮಲೆಯಲ್ಲಿ ಕುಂಭಮ್ ಮಾಸಿಕ ಪೂಜೆ ಆರಂಭಗೊಂಡಿದ್ದರಿಂದ ಭಕ್ತಾದಿಗಳಿಗೆ ತಿರುವನಂತಪುರ ಚೆಂಗನೂರು ಕೊಟ್ಟಾಯಂ ಪತ್ತನಂಮಿಟ್ಟ ಪಟ್ಟಣಗಳಿಂದ ವಿಶೇಷ ಬಸ್ ವ್ಯವಸ್ಥೆ ಮಾಡಲಾಗಿತ್ತು. ಕೊಚ್ಚಿ ಮೆಟ್ರೊ ರೈಲು ಸೇವೆ ಆನ್‌ಲೈನ್ಸ್ ಟ್ಯಾಕ್ಸಿ ಸೇವೆಯೂ ಎಂದಿನಂತಿತ್ತು. ರಾಜ್ಯದಾದ್ಯಂತ ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಿಸಲಾಗಿತ್ತು.
ತಮಿಳುನಾಡಿನ ತಿರುಚಿರಾಪಳ್ಳಿಯಲ್ಲಿ ರೈಲು ಸಂಚಾರಕ್ಕೆ ಅಡ್ಡಿಪಡಿಸಲು ಯತ್ನಿಸಿದ ಕಾರ್ಮಿಕರನ್ನು ಪೊಲೀಸರು ತಡೆದರು.
ನಾಲ್ಕು ಕಾರ್ಮಿಕ ಸಂಹಿತೆಗಳನ್ನು ಹಿಂಪಡೆಯುವಂತೆ ಒತ್ತಾಯಿಸಿ ಹೈದರಾಬಾದ್‌ನಲ್ಲಿ ಎಡಪಕ್ಷಗಳ ಜಂಟಿ ವೇದಿಕೆ ಕರೆ ನೀಡಿದ್ದ ಪ್ರತಿಭಟನೆಯಲ್ಲಿ ಸಾವಿರಾರು ಕಾರ್ಮಿಕರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.