ADVERTISEMENT

ಬಾಬರ್ ಸೇನಾಧಿಪತಿ ಮಾಡಿದ್ದನ್ನೇ ಬಾಂಗ್ಲಾದಲ್ಲೂ ಮಾಡಲಾಗುತ್ತಿದೆ: ಯೋಗಿ ಆದಿತ್ಯನಾಥ

ಪಿಟಿಐ
Published 5 ಡಿಸೆಂಬರ್ 2024, 14:37 IST
Last Updated 5 ಡಿಸೆಂಬರ್ 2024, 14:37 IST
ಯೋಗಿ ಆದಿತ್ಯನಾಥ
ಯೋಗಿ ಆದಿತ್ಯನಾಥ   

ಅಯೋಧ್ಯೆ: ‘ಅಯೋಧ್ಯೆ ಹಾಗೂ ಸಂಭಲ್‌ನಲ್ಲಿ 500 ವರ್ಷಗಳ ಹಿಂದೆ ಮೊಘಲ್‌ ದೊರೆ ಬಾಬರ್‌ನ ಸೇನಾಧಿಪತಿ ಏನು ಮಾಡಿದ್ದನೊ ಅದೇ ಸ್ವರೂಪದ, ಅದೇ ಉದ್ದೇಶದ ಘಟನೆಗಳು ಬಾಂಗ್ಲಾದೇಶದಲ್ಲಿಯೂ ನಡೆಯುತ್ತಿವೆ’ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಗುರುವಾರ ಹೇಳಿದರು. 

43ನೇ ರಾಮಾಯಣ ಮೇಳವನ್ನು ಇಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು.

‘ಸಮಾಜದಲ್ಲಿ ಹಗೆತನ ಬಿತ್ತುವ ರಾಷ್ಟ್ರದ ಶತ್ರುಗಳ ಕಾರ್ಯಯೋಜನೆಯನ್ನು ತಡೆಯುವ ಮತ್ತು ದೇಶದಲ್ಲಿ ಒಗ್ಗಟ್ಟು ಸದಾ ಉಳಿಯುವಂತೆ ನೋಡಿಕೊಳ್ಳುವುದಕ್ಕೆ ನಾವು ಎಂದಾದರೂ ಮಹತ್ವ ನೀಡಿದ್ದೇವೆಯೇ? ಹೀಗೆ ಮಾಡಿದ್ದರೆ, ನಮ್ಮ ದೇಶ ಎಂದಿಗೂ ಬೇರೆಯವರ ಅಡಿಗಳಲ್ಲಿ ಇರುತ್ತಲೇ ಇರಲಿಲ್ಲ. ನಮ್ಮ ಪವಿತ್ರ ಸ್ಥಳಗಳು ಅಪವಿತ್ರಗೊಳ್ಳುತ್ತಿರಲಿಲ್ಲ’ ಎಂದರು.

ADVERTISEMENT

‘ನಾವು ಒಗ್ಗಟ್ಟಿನಿಂದ ಇದ್ದಿದ್ದರೆ, ಕೆಲವು ಆಕ್ರಮಣಕಾರರು ನಮ್ಮ ಮೇಲೆ ದಾಳಿ ನಡೆಸುವುದಕ್ಕೆ ಭಯ ಪಡುತ್ತಿದ್ದರು ಮತ್ತು ನಮ್ಮ ಸೈನಿಕರು ಅವರನ್ನು ಮಣ್ಣು ಮುಕ್ಕಿಸುತ್ತಿದ್ದರು. ನಮ್ಮ ಸಮಾಜದೊಳಗೇ ಇದ್ದುಕೊಂಡು ತೊಂದರೆ ಕೊಡುವವರೂ ಯಶಸ್ವಿಯಾಗಿದ್ದಾರೆ. ಅವರ ವಂಶವಾಹಿಗಳು ಈಗಲೂ ನಮ್ಮೊಂದಿಗಿದ್ದಾವೆ. ಅವರು ಸಮಾಜವನ್ನು ಒಡೆಯಲು ಜಾತಿ ರಾಜಕಾರಣದಲ್ಲಿ ತೊಡಗಿಕೊಂಡಿದ್ದಾರೆ’ ಎಂದರು.

‘ಬಾಂಗ್ಲಾದೇಶದಲ್ಲಿ ನಮ್ಮ ಶ್ರತ್ರುಗಳು ನಡೆಸುತ್ತಿರುವ ಕೃತ್ಯಗಳನ್ನೇ ನೋಡಿ. ಬಾಬರ್‌ನ ಸೇನಾಧಿಪತಿ ಅಯೋಧ್ಯೆ ಹಾಗೂ ಸಂಭಲ್‌ನಲ್ಲಿ ಮಾಡಿದ್ದನ್ನೇ ಇಂದು ಬಾಂಗ್ಲಾದೇಶದಲ್ಲಿ ಮಾಡುತ್ತಿದ್ದಾರೆ. ಈ ಎಲ್ಲದರ ಸ್ವರೂಪ, ಇದನ್ನು ಮಾಡುತ್ತಿರುವವ ಡಿಎನ್‌ಎ ಒಂದೇ ಆಗಿದೆ’ ಎಂದು ಹೇಳಿದರು.

‘ವಿರೋಧ ಪಕ್ಷಗಳು ಸಮಾಜವನ್ನು ವಿಭಜಿಸಲು ಯತ್ನಿಸುತ್ತಿವೆ. ಜೊತೆಗೆ, ಕೆಲವು ವಿಭಜನಕಾರಿ ವ್ಯಕ್ತಿಗಳು ಈಗಾಗಲೇ ನಿಮ್ಮನ್ನು ವಿಭಜಿಸಲು ಎಲ್ಲ ಸಿದ್ಧತೆ  ಮಾಡಿಕೊಂಡಿದ್ದಾರೆ. ಅವರು ಬೇರೆ ಬೇರೆ ದೇಶಗಳಲ್ಲಿ ಈಗಾಗಲೇ ಆಸ್ತಿಗಳನ್ನು ಖರೀದಿಸಿದ್ದಾರೆ. ದೇಶದಲ್ಲಿ ಬಿಕ್ಕಟ್ಟು ಎದುರಾದರೆ, ನಿಮ್ಮನ್ನು ಇಲ್ಲಿಯೇ ಬಳಲುವುದಕ್ಕೆ ಬಿಟ್ಟು ದೇಶಾಂತರ ಹೋಗುತ್ತಾರೆ’ ಎಂದರು.

ಬಿಜೆಪಿಯ ಹಿರಿಯ ನಾಯಕನಾಗಿ ದೊಡ್ಡ ರಾಜ್ಯವೊಂದರ ಮುಖ್ಯಮಂತ್ರಿಯಾಗಿ ಇಂಥ ಭಾಷೆ ಬಳಸುವುದನ್ನು ನೋಡಿದರೆ ಬೇಸರವಾಗುತ್ತದೆ. ಅವರು ಜನರನ್ನು ವಿಭಜಿಸುವ ಕೆಲಸ ಮಾಡುತ್ತಿದ್ದಾರೆ
ತಾರೀಕ್‌ ಅನ್ವರ್‌ ಕಾಂಗ್ರೆಸ್ ಸಂಸದ
ಮುಗ್ಧರು ಸಂಕಷ್ಟ ಎದುರಿಸುತ್ತಿದ್ದಾರೆ. ಸಂಭಲ್‌ನಲ್ಲಿ ಐವರು ಮೃತಪಟ್ಟಿದ್ದಾರೆ. ವಿರೋಧ ಪಕ್ಷದ ನಾಯಕನನ್ನು ಸಂಭಲ್‌ಗೆ ಭೇಟಿ ನೀಡದಂತೆ ತಡೆಯಲಾಗುತ್ತಿದೆ. ಸರ್ಕಾರ ನ್ಯಾಯ ನೀಡಬೇಕು
ಮೊಹಮ್ಮದ್‌ ಜಾವೇದ್‌ ಕಾಂಗ್ರೆಸ್‌ ಸಂಸದ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.