
ಶ್ರೀನಗರ: ನೌಗಾಮ್ ಪೊಲೀಸ್ ಠಾಣೆಯೊಳಗೆ ಶುಕ್ರವಾರ ಸಂಭವಿಸಿದ ಆಕಸ್ಮಿಕ ಸ್ಫೋಟದಿಂದ ಮೃತಪಟ್ಟವರಲ್ಲಿ ಸ್ಥಳೀಯ ಟೈಲರ್ ಮೊಹಮ್ಮದ್ ಶಫಿ ಪ್ಯಾರೆ (47) ಕೂಡ ಒಬ್ಬರು. ಹರಿಯಾಣದ ಫರೀದಾಬಾದ್‌ನಿಂದ ವಶಪಡಿಸಿಕೊಂಡ ಸ್ಫೋಟಕ ವಸ್ತುವಿನ ಮಾದರಿಗಳ ಸಂಗ್ರಹದಲ್ಲಿ ಪೊಲೀಸರಿಗೆ ನೆರವಾಗಲು ಅವರು ಶುಕ್ರವಾರ ಠಾಣೆಗೆ ತೆರಳಿದ್ದರು.
ಕರ್ತವ್ಯ ಮತ್ತು ಧರ್ಮನಿಷ್ಠ ವ್ಯಕ್ತಿಯಾಗಿದ್ದ ಪ್ಯಾರೆ ಅವರು ಸ್ಥಳೀಯ ಮಸೀದಿ ಸಮಿತಿ ಅಧ್ಯಕ್ಷರಾಗಿದ್ದರು. ಶುಕ್ರವಾರ ಮುಂಜಾನೆಯೇ ಪೊಲೀಸ್ ತನಿಖಾಧಿಕಾರಿಗಳ ಜೊತೆಗೆ ಅವರು ಸೇರಿಕೊಂಡಿದ್ದರು. ಅಂದಿನ ತಮ್ಮ ದಿನವನ್ನು ಭಾಗಶಃ ನೌಗಮ್ ಪೊಲೀಸ್ ಠಾಣೆಯಲ್ಲೇ ಕಳೆದಿದ್ದ ಪ್ಯಾರೆ, ಶುಕ್ರವಾರದ ಪ್ರಾರ್ಥನೆಗೆ ಮತ್ತು ಊಟಕ್ಕೆಂದು ಮಾತ್ರವೇ ಮನೆಗೆ ಮರಳಿದ್ದರು.
‘ಅವರು ಧಾವಂತದಲ್ಲಿ ಊಟ ಮಾಡಿದರು ಮತ್ತು ಉಳಿದಿದ್ದ ಮಾದರಿಗಳ ಸಂಗ್ರಹ ಪೂರ್ಣಗೊಳಿಸಲು ಸಹಾಯ ಮಾಡಲು ಹಿಂತಿರುಗಬೇಕೆಂದು ಹೇಳಿದರು’ ಎಂದು ಅವರ ಸಂಬಂಧಿಕರೊಬ್ಬರು ನೆನಪಿಸಿಕೊಂಡರು. ಚಳಿಗಾಲವಾದ್ದರಿಂದ ಬೆಚ್ಚಗಿನ ಬಟ್ಟೆಗಳನ್ನು ಧರಿಸಿದ್ದ ಅವರು, ಮಗಳ ತಲೆಗೆ ಸಿಹಿಮುತ್ತಿಕ್ಕಿ, ಪುತ್ರರಿಗೆ ಬೇಗನೆ ಮಲಗಲು ಹೇಳಿ ರಾತ್ರಿ ಠಾಣೆಗೆ ಹೋಗಿದ್ದರು ಎಂದು ತಿಳಿಸಿದರು.
‘ಪ್ಯಾರೆ ಸಜ್ಜನ. ಸದಾ ಕೆಲಸ ಮಾಡುವ ಉಮೇದು. ಅವರದ್ದು ಸೌಮ್ಯ ಸ್ವಭಾವ. ಪರೋಪಕಾರಿ ವ್ಯಕ್ತಿತ್ವ. ಅವರಿಗೆ ಭಯೋತ್ಪಾದಕ ಜಾಲ, ತನಿಖೆ ಅಥವಾ ಸ್ಫೋಟಕಗಳೊಂದಿಗೆ ಯಾವುದೇ ಸಂಬಂಧವಿರಲಿಲ್ಲ. ಅವರು ಅಪ್ಪಟ ದರ್ಜಿಯಾಗಿಯೇ ಇದ್ದರು. ಪೊಲೀಸರು ಅವರ ಸಹಾಯ ಕೇಳಿದ್ದಕ್ಕೆ ಈ ಕೆಲಸಕ್ಕೆ ಒಪ್ಪಿಕೊಂಡರು. ಆದರೆ, ಅದೇ ಅವರ ಸಾವಿಗೆ ಕಾರಣವಾಯಿತು’ ಎಂದು ನೆರೆಯ ವ್ಯಕ್ತಿಯೊಬ್ಬರು ಹೇಳಿದರು.
ಸ್ಫೋಟದ ನಂತರ ಕುಟುಂಬದವರು ಪ್ಯಾರೆ ಬಗ್ಗೆ ಪೊಲೀಸರಲ್ಲಿ ವಿಚಾರಿಸಿದ್ದು, ಮೊದಲು ಅವರು ಗಾಯಗೊಂಡಿದ್ದಾರೆ ಎಂದು ತಿಳಿಸಲಾಗಿತ್ತು. ಶನಿವಾರ ಮುಂಜಾನೆ ಪ್ಯಾರೆ ಅವರು ಮೃತಪಟ್ಟಿದ್ದಾರೆ ಎಂದು ಕುಟುಂಬಕ್ಕೆ ತಿಳಿಸಿದ ಪೊಲೀಸರು ಶವವನ್ನು ಗುರುತಿಸುವಂತೆ ಕೇಳಿಕೊಂಡರು.
ಕುಟುಂಬದ ಏಕಮಾತ್ರ ಜೀನವಾಧಾರವಾಗಿದ್ದ ಪ್ಯಾರೆ ಅವರು ಹತ್ತಿರದ ವನಬಲ್ ಚೌಕ್‌ನಲ್ಲಿ ಅಂಗಡಿಯನ್ನು ನಡೆಸುತ್ತಿದ್ದರು. ಅವರಿಗೆ ಪತ್ನಿ ಮತ್ತು ಮೂವರು ಅವಿವಾಹಿತ ಮಕ್ಕಳಿದ್ದಾರೆ. ಮಗನಿಗೆ ಉದ್ಯೋಗ ನೀಡುವ ಮೂಲಕ ಅವರ ಕುಟುಂಬಕ್ಕೆ ಸರ್ಕಾರ ನೆರವಾಗಬೇಕು ಎಂದು ಲೆಫ್ಟಿನೆಂಟ್ ಗವರ್ನರ್‌ಗೆ ಸ್ಥಳೀಯರು ವಿನಂತಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.