ADVERTISEMENT

ಪಂಜಾಬ್‌ನಲ್ಲಿ ಉಚಿತ ವಿದ್ಯುತ್‌ ಪೂರೈಸಿ: ನವಜೋತ್‌ಸಿಂಗ್‌ ಸಿಧು ಒತ್ತಾಯ

ಪಿಟಿಐ
Published 4 ಜುಲೈ 2021, 9:20 IST
Last Updated 4 ಜುಲೈ 2021, 9:20 IST
ನವಜೋತ್‌ಸಿಂಗ್‌ ಸಿಧು
ನವಜೋತ್‌ಸಿಂಗ್‌ ಸಿಧು   

ಚಂಡೀಗಡ: ಪಂಜಾಬ್‌ನಲ್ಲಿ 300 ಯೂನಿಟ್‌ ಉಚಿತ ವಿದ್ಯುತ್‌ ಪೂರೈಕೆ ಮಾಡಬೇಕು ಎಂದು ಕಾಂಗ್ರೆಸ್‌ ನಾಯಕ ನವಜೋತ್‌ಸಿಂಗ್‌ ಸಿಧು ಅವರು ಒತ್ತಾಯಿಸಿದ್ದಾರೆ.

ಪಂಜಾಬ್‌ ಮುಖ್ಯಮಂತ್ರಿ ಅಮರಿಂದರ್‌ ಸಿಂಗ್‌ ಮತ್ತು ಸಿಧು ನಡುವೆ ರಾಜಕೀಯ ಭಿನ್ನ‍ಪ್ರಾಯ ಏರ್ಪಟ್ಟಿದೆ. ಈ ನಡುವೆ ನವಜೋತ್‌ಸಿಂಗ್‌ ಅವರು ನೀಡಿರುವ ಈ ಹೇಳಿಕೆಯು ಮಹತ್ವ ಪಡೆದಿದೆ.

‘ದೇಶೀಯ ಮತ್ತು ಕೈಗಾರಿಕಾ ಗ್ರಾಹಕರಿಗೆ ಅಗ್ಗದ ದರದಲ್ಲಿ ವಿದ್ಯುತ್ ನೀಡಬೇಕು. ಪಂಜಾಬ್‌ ಸರ್ಕಾರ ಈಗಾಗಲೇ 9000 ಕೋಟಿಯನ್ನು ಸಬ್ಸಿಡಿಗೆ ಒದಗಿಸುತ್ತಿದೆ. ದೇಶಿಯ ಮತ್ತು ಕೈಗಾರಿಕಾ ಗ್ರಾಹಕರಿಗೆ ಯೂನಿಟ್‌ಗೆ ₹10–12ರಂತೆ ವಿದ್ಯುತ್‌ ದರ ವಿಧಿಸಲಾಗುತ್ತಿದೆ. ಅದರ ಬದಲಿಗೆ ಅವರಿಗೆ ಯೂನಿಟ್‌ಗೆ ₹3–5ರ ದರದಲ್ಲಿ ವಿದ್ಯುತ್‌ ಪೂರೈಕೆ ಮಾಡಬೇಕು. ಕಡಿತವಿಲ್ಲದೇ 24 ಗಂಟೆಗಳ ಕಾಲ ವಿದ್ಯುತ್‌ ಪೂರೈಸಬೇಕು ಎಂದು ಸಿಧು ಟ್ವೀಟ್‌ ಮಾಡಿದ್ದಾರೆ.

ADVERTISEMENT

ಈ ಹಿಂದೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಕೂಡ ಮುಂಬರುವ ಪಂಜಾಬ್‌ ವಿಧಾನಸಭಾ ಚುನಾವಣೆಯಲ್ಲಿ ಎಎಪಿ ಗೆದ್ದರೆ, ರಾಜ್ಯದಲ್ಲಿ ಉಚಿತ ವಿದ್ಯುತ್‌ ಪೂರೈಕೆ ಮಾಡುವುದಾಗಿ ಭರವಸೆ ನೀಡಿದ್ದರು.

‘ಎಸ್‌ಎಡಿ–ಬಿಜೆಪಿ ಆಡಳಿತದ ಅವಧಿಯಲ್ಲಿ ಸಹಿ ಹಾಕಲಾದ ದೋಷಪೂರಿತ ವಿದ್ಯುತ್‌ ಖರೀದಿ ಒಪ್ಪಂದವನ್ನು ಕಾನೂನಿನ ಮೂಲಕ ರದ್ದುಗೊಳಿಸಬೇಕು’ ಎಂದು ಸಿಧು ಒತ್ತಾಯಿಸಿದ್ದಾರೆ.

‘ಪಂಜಾಬ್‌ ವಿಧಾನಸಭೆಯಲ್ಲಿ ಹೊಸ ಕಾನೂನು ಜಾರಿಗೊಳಿಸುವ ಮೂಲಕ ಬಾದಲ್‌ ಅವಧಿಯ ವಿದ್ಯುತ್‌ ಖರೀದಿ ಒಪ್ಪಂದವನ್ನು ರದ್ದುಗೊಳಿಸೋಣ. ಕಾಂಗ್ರೆಸ್‌ ಹೈಕಮಾಂಡ್‌ನ ಜನಪರವಾದ 18 ಅಜೆಂಡಾಗಳನ್ನು ಬೆಂಬಲಿಸೋಣ’ ಎಂದು ಅವರು ಟ್ವೀಟ್‌ನಲ್ಲಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.