ಅಡ್ಮಿರಲ್ ದಿನೇಶ್ ಕುಮಾರ್ ತ್ರಿಪಾಠಿ
– ಪಿಟಿಐ ಚಿತ್ರ
ನವದೆಹಲಿ: ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ದಿನೇಶ್ ಕುಮಾರ್ ತ್ರಿಪಾಠಿ ಅವರು ಭಾರತ ಮತ್ತು ಹಲವು ಆಫ್ರಿಕನ್ ರಾಷ್ಟ್ರಗಳ ನೌಕಾಪಡೆಗಳನ್ನು ಒಳಗೊಂಡ ಆರು ದಿನಗಳ ಬೃಹತ್ ಸಮಾರಾಭ್ಯಾಸವನ್ನು ವೀಕ್ಷಿಸಲು ತಾಂಜಾನಿಯಾಕ್ಕೆ ಐದು ದಿನಗಳ ಪ್ರವಾಸವನ್ನು ಶನಿವಾರ ಕೈಗೊಂಡರು.
ಭಾರತೀಯ ನೌಕಾಪಡೆ ಮತ್ತು ತಾಂಜಾನಿಯಾ ಪೀಪಲ್ಸ್ ಡಿಫೆನ್ಸ್ ಫೋರ್ಸ್ ಆತಿಥ್ಯದಲ್ಲಿ ‘ಆಫ್ರಿಕಾ–ಇಂಡಿಯಾ ಕೀ ಮೆರಿಟೈಮ್ ಎಂಗೇಜ್‌ಮೆಂಟ್’ (ಎಐಕೆಇವೈಎಂಇ) ನಡೆಯಲಿದೆ. ಈ ನೌಕಾ ಸಮರಾಭ್ಯಾಸ ದಾರ್-ಎಸ್-ಸಲಾಮ್‌ನಲ್ಲಿ ಭಾನುವಾರ (ಏ.13) ಪ್ರಾರಂಭವಾಗಲಿದೆ. ಸಮರಾಭ್ಯಾಸದಲ್ಲಿ ಭಾರತ, ತಾಂಜಾನಿಯಾ ಜತೆಗೆ ಕೊಮೊರೊಸ್, ಜಿಬೌಟಿ, ಎರಿಟ್ರಿಯಾ, ಕೆನ್ಯಾ, ಮಡಗಾಸ್ಕರ್, ಮಾರಿಷಸ್, ಮೊಜಾಂಬಿಕ್, ಸೀಶೆಲ್ಸ್ ಮತ್ತು ದಕ್ಷಿಣ ಆಫ್ರಿಕಾ ಭಾಗವಹಿಸಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
‘ಅಡ್ಮಿರಲ್ ತ್ರಿಪಾಠಿ ಅವರು ಏಪ್ರಿಲ್ 12ರಿಂದ 1 ರವರೆಗೆ ತಾಂಜಾನಿಯಾದ ಅಧಿಕೃತ ಭೇಟಿಯಲ್ಲಿದ್ದಾರೆ. ಅವರ ಈ ಭೇಟಿಯು ಭಾರತ ಮತ್ತು ತಾಂಜಾನಿಯಾ ನಡುವಿನ ಕಡಲ ಸಹಕಾರ ಮತ್ತು ಕಾರ್ಯತಂತ್ರದ ಸಂಬಂಧಗಳನ್ನು ಬಲಪಡಿಸುವ ಗುರಿ ಹೊಂದಿದೆ. ಇದು ಹಿಂದೂ ಮಹಾಸಾಗರ ಪ್ರದೇಶದಲ್ಲಿ ರಕ್ಷಣಾ ಪಾಲುದಾರಿಕೆಯನ್ನು ಹೆಚ್ಚಿಸುವ ಭಾರತದ ಬದ್ಧತೆಯನ್ನು ಒತ್ತಿಹೇಳುತ್ತದೆ’ ಎಂದು ಭಾರತೀಯ ನೌಕಾಪಡೆಯು ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ತಿಳಿಸಿದೆ.
ಅಭಿವೃದ್ಧಿಶೀಲ ರಾಷ್ಟ್ರಗಳನ್ನು ತೊಡಗಿಸಿಕೊಳ್ಳುವ ಪ್ರಧಾನಿ ನರೇಂದ್ರ ಮೋದಿಯವರ ಹೊಸ ದೃಷ್ಟಿಕೋನಕ್ಕೆ ಅನುಗುಣವಾಗಿ ಆಫ್ರಿಕಾ ಖಂಡದೊಂದಿಗೆ ಭಾರತದ ಕಡಲ ಭದ್ರತಾ ಸಹಕಾರವನ್ನು ಇನ್ನಷ್ಟು ಹೆಚ್ಚಿಸುವುದು ಈ ಯುದ್ಧಾಭ್ಯಾಸದ ಉದ್ದೇಶ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.