ADVERTISEMENT

ನ್ಯಾಯಮಂಡಳಿ ಮೊರೆ ಹೋದ ವಿಮಲ್‌ ವರ್ಮಾ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2019, 20:19 IST
Last Updated 8 ಏಪ್ರಿಲ್ 2019, 20:19 IST

ನವದೆಹಲಿ: ಭಾರತೀಯ ನೌಕಾಪಡೆಯ ಮುಂದಿನ ಮುಖ್ಯಸ್ಥರಾಗಿ ವೈಸ್‌ ಅಡ್ಮಿರಲ್‌ ಕರಮ್‌ಬೀರ್‌ ಸಿಂಗ್‌ ಅವರ ನೇಮಕ ಪ್ರಶ್ನಿಸಿ, ಅಂಡಮಾನ್‌ – ನಿಕೋಬಾರ್‌ನ ಮುಖ್ಯ ಕಮಾಂಡರ್‌ ವೈಸ್‌ ಅಡ್ಮಿರಲ್‌ ವಿಮಲ್‌ ವರ್ಮಾ, ಶಸ್ತ್ರಾಸ್ತ್ರ ಪಡೆಗಳ ನ್ಯಾಯಮಂಡಳಿ ಮೊರೆ ಹೋಗಿದ್ದಾರೆ ಎಂದು ವಿಶ್ವಸನೀಯ ಮೂಲಗಳು ಸೋಮವಾರ ತಿಳಿಸಿವೆ.

‘ವೃತ್ತಿಯಲ್ಲಿ ಸೇವಾ ಹಿರಿತನ ಹೊಂದಿದ್ದರೂ, ನನ್ನನ್ನು ಕಡೆಗಣಿಸಿ ಕರಮ್‌ಬೀರ್‌ ಅವರನ್ನು ಮುಖ್ಯಸ್ಥರನ್ನಾಗಿ ನೇಮಕ ಮಾಡಲಾಗಿದೆ’ ಎಂದು ವಿಮಲ್‌ ವರ್ಮಾ ಅರ್ಜಿಯಲ್ಲಿ ತಿಳಿಸಿದ್ದಾರೆ.

ಸದ್ಯ, ನೌಕಾಪಡೆಯ ಮುಖ್ಯಸ್ಥರಾಗಿರುವ ಅಡ್ಮಿರಲ್‌ ಸುನೀಲ್‌ ಲಾಂಬಾ ಮೇ 30ಕ್ಕೆ ನಿವೃತ್ತರಾಗಲಿದ್ದು, ಕರಮ್‌ಬೀರ್‌ ಸಿಂಗ್‌ ಅವರ ಉತ್ತರಾಧಿಕಾರಿಯಾಗಿ ನೇಮಕಗೊಂಡಿದ್ದಾರೆ. ಆದರೆ, ಸಿಂಗ್‌ ಅವರಿಗಿಂತ ವರ್ಮಾ ಸೇವಾ ಹಿರಿತನ ಹೊಂದಿದ್ದಾರೆ.

ADVERTISEMENT

‘ಸರ್ಕಾರವು ನನ್ನ ಸೇವಾ ಹಿರಿತನವನ್ನು ಏಕೆ ನಿರ್ಲಕ್ಷಿಸಿದೆ’ ಎಂದು ವರ್ಮಾ ನ್ಯಾಯಮಂಡಳಿಯಲ್ಲಿ ಪ್ರಶ್ನಿಸಿದ್ದಾರೆ ಎನ್ನಲಾಗಿದೆ. ನ್ಯಾಯಮಂಡಳಿಯು ಈ ಅರ್ಜಿಯನ್ನು ಮಂಗಳವಾರ (ಏ.9) ವಿಚಾರಣೆಗೆ ಕೈಗೆತ್ತಿಕೊಳ್ಳುವ ಸಾಧ್ಯತೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.