ADVERTISEMENT

ಚುನಾವಣಾ ಹೊಸ್ತಿಲಲ್ಲಿ ನಕ್ಸಲ್‌ ಅಟ್ಟಹಾಸ

ದಾಂತೇವಾಡದಲ್ಲಿ ಹೊಂಚು ದಾಳಿ * ದೆಹಲಿ ಡಿ.ಡಿ ಕ್ಯಾಮೆರಾಮನ್‌ ಸೇರಿ ಮೂರು ಸಾವು

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2018, 20:19 IST
Last Updated 30 ಅಕ್ಟೋಬರ್ 2018, 20:19 IST
ದಾಂತೇವಾಡ ಅರಣ್ಯದಲ್ಲಿ ಮಂಗಳವಾರ ಮಾವೊವಾದಿಗಳ ಗುಂಡಿಗೆ ಬಲಿಯಾದ ಪೊಲೀಸ್‌ ಪೇದೆ –ಪಿಟಿಐ ಚಿತ್ರ
ದಾಂತೇವಾಡ ಅರಣ್ಯದಲ್ಲಿ ಮಂಗಳವಾರ ಮಾವೊವಾದಿಗಳ ಗುಂಡಿಗೆ ಬಲಿಯಾದ ಪೊಲೀಸ್‌ ಪೇದೆ –ಪಿಟಿಐ ಚಿತ್ರ   

ರಾಯಪುರ: ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿಯೇ ಛತ್ತೀಸಗಡದಲ್ಲಿ ಮಂಗಳವಾರ ನಕ್ಸಲರ ಅಟ್ಟಹಾಸಕ್ಕೆ ಇಬ್ಬರು ಪೊಲೀಸರು ಮತ್ತು ದೆಹಲಿ ದೂರದರ್ಶನ ಸುದ್ದಿವಾಹಿನಿ ಕ್ಯಾಮೆರಾಮನ್‌ ಸೇರಿ ಮೂವರು ಬಲಿಯಾಗಿದ್ದಾರೆ.

ನಕ್ಸಲರ ಪ್ರಭಾವವಿರುವ ದಾಂತೇವಾಡ ಜಿಲ್ಲೆಯ ದಟ್ಟ ಅರಣ್ಯ ಪ್ರದೇಶದಲ್ಲಿ ದ್ವಿಚಕ್ರ ವಾಹನಗಳಲ್ಲಿ ಗಸ್ತು ಹೊರಟಿದ್ದ ಪೊಲೀಸರ ಮೇಲೆ ಮುಂಜಾನೆ 11 ಗಂಟೆ ವೇಳೆಗೆ ನಕ್ಸಲರು ಏಕಾಏಕಿ ಗುಂಡಿನ ದಾಳಿ ನಡೆಸಿದರು.

ಇದೇ ವೇಳೆ ಚುನಾವಣಾ ವರದಿಗಾಗಿ ಈ ಮಾರ್ಗವಾಗಿ ನಿಲ್‌ವಾಯಾ ಗ್ರಾಮಕ್ಕೆ ತೆರಳುತ್ತಿದ್ದ ದೂರದರ್ಶನ ಸುದ್ದಿವಾಹಿನಿ ಸಿಬ್ಬಂದಿ ಪೈಕಿ ಒಬ್ಬರು ಗುಂಡು ತಾಗಿ ಸ್ಥಳದಲ್ಲಿ ಮೃತಪಟ್ಟಿದ್ದಾರೆ.

ADVERTISEMENT

ಬಿಹಾರದ ಬೆಗುಸರಾಯ್‌ನ ದೂರದರ್ಶನ ಪತ್ರಕರ್ತ ಧೀರಜ್‌ ಕುಮಾರ್‌ ಮತ್ತು ಮತ್ತೊಬ್ಬ ಸಿಬ್ಬಂದಿ ಸುರಕ್ಷಿತವಾಗಿ ಪಾರಾಗಿದ್ದಾರೆ.

ಗುಂಡಿನ ಚಕಮಕಿಯಲ್ಲಿ ಸಬ್ ಇನ್‌ಸ್ಪೆಕ್ಟರ್ ರುದ್ರಪ್ರತಾಪ್‌ ಸಿಂಗ್‌, ಸಹಾಯಕ ಕಾನ್‌ಸ್ಟೆಬಲ್‌ ಮಂಗಳು ಮತ್ತು ದೂರದರ್ಶನ ಸುದ್ದಿವಾಹಿನಿ ಕ್ಯಾಮೆರಾಮನ್‌ ಅಚ್ಯುತಾನಂದ ಸಾಹು ಮೃತಪಟ್ಟಿದ್ದಾರೆ. ಗಾಯಗೊಂಡಿರುವ ಇಬ್ಬರು ಪೊಲೀಸರನ್ನು ದಾಂತೇವಾಡ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸಿಆರ್‌ಪಿಎಫ್‌ ಕ್ಯಾಂಪ್‌ ಇರುವ ಸಮೇಲಿ ಎಂಬ ಸ್ಥಳದಿಂದ ಕೇವಲ ಐದು ಕಿ.ಮೀ ದೂರದಲ್ಲಿರುವ ಅರಾನಪುರ ಗ್ರಾಮದ ಬಳಿ ಈ ಘಟನೆ ನಡೆದಿದೆ.

ಸುದ್ದಿ ತಿಳಿಯುತ್ತಲೇ ಸ್ಥಳಕ್ಕೆ ದೌಡಾಯಿಸಿದ ಸಿಆರ್‌ಪಿಎಫ್‌, ಎಸ್‌ಟಿಎಫ್‌ ಮತ್ತು ಜಿಲ್ಲಾ ಸಶಸ್ತ್ರ ಪಡೆ ಸಿಬ್ಬಂದಿ ಅರಣ್ಯದಲ್ಲಿ ನಕ್ಸಲರಿಗಾಗಿ ಶೋಧ ನಡೆಸುತ್ತಿದ್ದಾರೆ.

ಕಳೆದ ವಾರ ಬಿಜಾಪುರದಲ್ಲಿ ಮಾವೊವಾದಿಗಳ ಶಕ್ತಿಶಾಲಿ ನೆಲಬಾಂಬ್‌ ಸ್ಫೋಟಕ್ಕೆ ನಾಲ್ವರು ಸಿಆರ್‌ಪಿಎಫ್‌ ಯೋಧರು ಬಲಿಯಾಗಿದ್ದರು. ಮೇ ತಿಂಗಳಲ್ಲಿ ದಾಂತೇವಾಡದಲ್ಲಿ ಪೊಲೀಸ್‌ ವಾಹನವನ್ನು ನೆಲಬಾಂಬ್ ಸ್ಫೋಟಿಸಿ ಉಡಾಯಿಸಲಾಗಿತ್ತು.

ಛತ್ತೀಸಗಡ ವಿಧಾನಸಭಾ ಚುನಾವಣೆಗೆ ನ.12 ಮತ್ತು ನ.20ರಂದು ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ.

ಖಂಡನೆ: ಮಾವೊವಾದಿಗಳ ದಾಳಿಯನ್ನು ಮುಖ್ಯಮಂತ್ರಿ ರಮಣ್‌ ಸಿಂಗ್‌, ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ರಾಜ್ಯವರ್ಧನ್ ಸಿಂಗ್‌ ರಾಠೋಡ್‌ ಖಂಡಿಸಿದ್ದಾರೆ.

ಪರಿಹಾರ: ಅಚ್ಯುತಾನಂದ ಸಾಹು ಕುಟುಂಬಕ್ಕೆ ರಾಜ್ಯವರ್ಧನ್ ಸಿಂಗ್‌ ಅವರು ₹15 ಲಕ್ಷ ಪರಿಹಾರ ಘೋಷಿಸಿದ್ದಾರೆ.

’ಪೊಲೀಸ್‌ ಅಧಿಕಾರಿಗಳ ಅನುಮತಿ ಇತ್ತು’

ಛತ್ತೀಸಗಡದ ನಿಲ್‌ವಾಯಾ ಗ್ರಾಮದಲ್ಲಿ ಹೊಸದಾಗಿ ಸ್ಥಾಪಿಸಲಾಗಿರುವ ಮತಗಟ್ಟೆ ಬಗ್ಗೆ ವರದಿ ಮಾಡಲು ದೂರದರ್ಶನ ಸುದ್ದಿವಾಹಿನಿ ತಂಡ ಅರಣ್ಯ ಮಾರ್ಗದ ಮೂಲಕ ತೆರಳುತ್ತಿತ್ತು.

ನಕ್ಸಲರ ಪ್ರಭಾವವಿರುವ ದಾಂತೇವಾಡ ಅರಣ್ಯ ಪ್ರದೇಶದಲ್ಲಿರುವ ಈ ಗ್ರಾಮದಲ್ಲಿ 1998ರಿಂದ ಯಾರೊಬ್ಬರೂ ಮತ ಚಲಾಯಿಸಿಲ್ಲ.

ದಾಂತೇವಾಡ ಜಿಲ್ಲಾ ಪೊಲೀಸ್‌ ವರಿಷ್ಠರ ಅನುಮತಿ ಪಡೆದು ಪೊಲೀಸ್‌ ಬೆಂಗಾವಲಿನಲ್ಲಿ ವರದಿಗಾಗಿ ಹೊರಟಾಗ ಈ ಘಟನೆ ನಡೆದಿದೆ ಎಂದು ದಾಳಿಯಲ್ಲಿ ಸುರಕ್ಷಿತವಾಗಿ ಪಾರಾಗಿ ಬಂದ ದೂರದರ್ಶನ ಸುದ್ದಿವಾಹಿನಿ ಪತ್ರಕರ್ತ ಧೀರಜ್‌ ಕುಮಾರ್‌ ಅನುಭವ ಹಂಚಿಕೊಂಡಿದ್ದಾರೆ.

ಪೊಲೀಸ್‌ ಬೆಂಗಾವಲಿನಲ್ಲಿ ದ್ವಿಚಕ್ರ ವಾಹನಗಳಲ್ಲಿ ನಮ್ಮ ತಂಡ ಅರಣ್ಯ ಮಾರ್ಗವಾಗಿ ತೆರಳುತ್ತಿದ್ದಾಗ ಪೊದೆಗಳ ಮರೆಯಿಂದ ನಕ್ಸಲರು ಗುಂಡಿನ ದಾಳಿ ನಡೆಸಿದರು.ಕಾರು ಮತ್ತು ವ್ಯಾನ್‌ಗಳನ್ನು ನಕ್ಸಲರು ನೆಲಬಾಂಬ್‌ ಇಟ್ಟು ಸ್ಫೋಟಿಸುತ್ತಾರೆ ಎಂಬ ಭೀತಿಯಿಂದ ಪೊಲೀಸ್‌ ಸಿಬ್ಬಂದಿ ಜತೆ ಆರು ದ್ವಿಚಕ್ರ ವಾಹನಗಳಲ್ಲಿ ತೆರಳುತ್ತಿದ್ದೆವು ಎಂದು ಅವರು ತಿಳಿಸಿದ್ದಾರೆ.

ಎಲ್ಲಕ್ಕಿಂತ ಮುಂದೆ ಹೊರಟಿದ್ದ ಬೈಕ್‌ನ ಹಿಂಬದಿಯಲ್ಲಿ ಕುಳಿತಿದ್ದ ಕ್ಯಾಮೆರಾಮನ್‌ ಸಾಹು ಗುಂಡು ತಾಗಿ ನೆಲಕ್ಕುರುಳಿದರು.

‘ಸಮತೋಲನ ಕಳೆದುಕೊಂಡ ನಮ್ಮ ದ್ವಿಚಕ್ರ ವಾಹನ ಪಕ್ಕದ ಕಂದಕಕ್ಕೆ ಉರುಳಿತು. ಅಲ್ಲಿಯೇ ಅಡಗಿ ಕುಳಿತೆವು. ಅಲ್ಲಿಂದ ಮುಂದೆ ನಮ್ಮ ಕಣ್ಣೆದುರು 45 ನಿಮಿಷ ನಡೆದದ್ದು ಭಯಾನಕ ಗುಂಡಿನ ಮೊರೆತ ಮತ್ತು ರಕ್ತಪಾತ’ ಎಂದು ಧೀರಜ್‌ ಕುಮಾರ್‌ ತಿಳಿಸಿದರು.

ದಾಂತೇವಾಡ ಪೊಲೀಸ್‌ ವರಿಷ್ಠ ಅಭಿಷೇಕ್‌ ಪಲ್ಲವ್‌ ಪ್ರತಿಕ್ರಿಯೆಗೆ ಸಿಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.