ADVERTISEMENT

ಗಡಿ ವಿವಾದ: ಬೊಮ್ಮಾಯಿ ವಿರುದ್ಧ ಕ್ರಮಕ್ಕೆ ಎನ್‌ಸಿಪಿ ಆಗ್ರಹ

ಗಡಿ ವಿವಾದಕ್ಕೆ ಸಂಬಂಧಿಸಿದ ಹೇಳಿಕೆ

ಪಿಟಿಐ
Published 27 ನವೆಂಬರ್ 2022, 13:37 IST
Last Updated 27 ನವೆಂಬರ್ 2022, 13:37 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮುಂಬೈ: ಮಹಾರಾಷ್ಟ್ರ ಮತ್ತು ಕರ್ನಾಟಕದಲ್ಲಿ ಶಾಂತಿ ಕದಡುವ ಹೇಳಿಕೆಗಳನ್ನು ನೀಡುತ್ತಿರುವ ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಎನ್‌ಸಿಪಿ ಭಾನುವಾರ ಕೇಂದ್ರ ಸರ್ಕಾರವನ್ನು ಆಗ್ರಹಿಸಿದೆ.

‘ಕರ್ನಾಟಕದ ಜತೆ ವಿಲೀನಗೊಳಸಬೇಕೆಂದು ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಜತ್‌ ತಾಲ್ಲೂಕಿನ ಕೆಲ ಗ್ರಾಮ ಪಂಚಾಯಿತಿಗಳು ನಿರ್ಣಯ ಅಂಗೀಕರಿಸಿದ್ದವು’ ಎಂದು ಬೊಮ್ಮಾಯಿ ಅವರು ಈಚೆಗೆ ಹೇಳಿದ್ದರು.

‘ಕನ್ನಡ ಮಾತನಾಡುವ ಜನರಿರುವ ಸೊಲ್ಲಾಪುರ ಮತ್ತು ಅಕ್ಕಲಕೋಟೆಯನ್ನು ಕರ್ನಾಟಕಕ್ಕೆ ಸೇರಿಸಬೇಕು’ ಎಂದೂ ಅವರು ಹೇಳಿಕೆ ನೀಡಿದ್ದರು.

ADVERTISEMENT

ಕರ್ನಾಟಕದ ಬಸ್‌ಗಳ ಮೇಲೆ ಈಚೆಗೆ ಮಹಾರಾಷ್ಟ್ರ ಪರ ಬರಹಗಳನ್ನು ಬರೆದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಕೂಡ ಬೊಮ್ಮಾಯಿ ಅವರು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂದೆ ಅವರಿಗೆ ಮನವಿ ಮಾಡಿದ್ದರು.

‘ಬಸ್‌ಗಳ ಮೇಲೆ ಬರೆದವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಅದೇ ರೀತಿ ಗಡಿ ವಿವಾದಕ್ಕೆ ಸಂಬಂಧಿಸಿ ಅನಗತ್ಯ ಹೇಳಿಕೆ ನೀಡಿ ಕೆಲವರು ಕಾನೂನು ಕೈಗೆತ್ತಿಕೊಳ್ಳಲು ಪ್ರೇರಣೆ ನೀಡಿರುವ ಬೊಮ್ಮಾಯಿ ಅವರ ವಿರುದ್ಧವೂ ಕ್ರಮ ಕೈಗೊಳ್ಳಬೇಕು’ ಎಂದು ಎನ್‌ಸಿಪಿ ವಕ್ತಾರ ಕ್ಲೈಡ್‌ ಕ್ರಾಸ್ಟೊ ಹೇಳಿದ್ದಾರೆ.

‘ಬೊಮ್ಮಾಯಿ ಅವರು ಕೆಲ ದಿನಗಳಿಂದ ನೀಡುತ್ತಿರುವ ಹೇಳಿಕೆಗಳು ಜನರ ಭಾವನೆಗಳಿಗೆ ನೋವುಂಟು ಮಾಡುತ್ತಿವೆ ಮತ್ತು ಜನರು ತಮ್ಮ ಭಾವನೆಗಳನ್ನು ನಕಾರಾತ್ಮಕವಾಗಿ ವ್ಯಕ್ತಪಡಿಸುತ್ತಿದ್ದಾರೆ’ ಎಂದೂ ಅವರು ತಿಳಿಸಿದ್ದಾರೆ.

‘ಇಂತಹ ಹೇಳಿಕೆ ನೀಡದಂತೆ ಬಿಜೆಪಿಯ ಕೇಂದ್ರದ ನೇತೃತ್ವ ಬೊಮ್ಮಾಯಿ ಅವರನ್ನು ಯಾಕೆ ತಡೆಯುತ್ತಿಲ್ಲ. ಈ ಹೇಳಿಕೆಗೆ ಅವರ ಸಹಮತವಿದೆಯೇ‘ ಎಂದೂ ಕ್ಲೈಡ್‌ ಕ್ರಾಸ್ಟೊ ಪ್ರಶ್ನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.