ADVERTISEMENT

ರಾಜಕೀಯ ಅಪರಾಧೀಕರಣಕ್ಕೆ ಉತ್ತೇಜನ: ಫಡಣವೀಸ್‌ ವಿರುದ್ಧ ಮತ್ತೆ ಮುಗಿಬಿದ್ದ ಮಲಿಕ್‌

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2021, 20:03 IST
Last Updated 10 ನವೆಂಬರ್ 2021, 20:03 IST
ಸಾಂದರ್ಭಿಕ ಚಿತ್ರ (ಪಿಟಿಐ)
ಸಾಂದರ್ಭಿಕ ಚಿತ್ರ (ಪಿಟಿಐ)   

ಮುಂಬೈ: ದೇವೇಂದ್ರ ಫಡಣವೀಸ್‌ ಅವರು ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿದ್ದಾಗ, ಅ‍ಪರಾಧ ಹಿನ್ನೆಲೆಯುಳ್ಳವರನ್ನು ಸರ್ಕಾರದ ಹುದ್ದೆಗಳಿಗೆ ನೇಮಿಸಿ ರಾಜಕೀಯ ಅಪರಾಧೀಕರಣಕ್ಕೆ ಉತ್ತೇಜನ ನೀಡಿದ್ದಾರೆ ಹಾಗೂ ನಕಲಿ ನೋಟು ಜಾಲದಲ್ಲಿರುವರ ರಕ್ಷಣೆ ಮಾಡಿದ್ದಾರೆ ಎಂದು ಮಹಾರಾಷ್ಟ್ರದ ಸಚಿವ, ಎನ್‌ಸಿಪಿ ವಕ್ತಾರ ನವಾಬ್‌ ಮಲಿಕ್‌ ವಾಗ್ದಾಳಿ ನಡೆಸಿದ್ದಾರೆ.

1993ರ ಮುಂಬೈ ಸರಣಿ ಸ್ಫೋಟದ ಸಂಚುಕೋರ ದಾವೂದ್‌ ಇಬ್ರಾಹಿಂನ ಗ್ಯಾಂಗ್‌ನೊಂದಿಗೆ ನಂಟು ಹೊಂದಿರುವ ಸರ್ದಾರ್‌ ಶಾ ವಲಿ ಖಾನ್‌ ಹಾಗೂ ಸಲೀಂ ಪಟೇಲ್‌ ಎಂಬುವವರೊಂದಿಗೆ ಸಚಿವ ಮಲಿಕ್‌ ಕುಟುಂಬದವರು ಭೂ ವ್ಯವಹಾರ ನಡೆಸಿದ್ದಾರೆ ಎಂದು ವಿರೋಧ ಪಕ್ಷದ ನಾಯಕ, ಬಿಜೆಪಿಯ ದೇವೇಂದ್ರ ಫಡಣವೀಸ್ ಮಂಗಳವಾರ ಆರೋಪಿಸಿದ್ದರು. ಇದನ್ನು ತಳ್ಳಿಹಾಕಿದ್ದ ಮಲಿಕ್‌, ಬುಧವಾರ ಸ್ಫೋಟಕ ಮಾಹಿತಿ ಬಹಿರಂಗಪಡಿಸುವುದಾಗಿ ಹೇಳಿದ್ದರು.

‘ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯಕ್ರಮದಲ್ಲಿ, ದಾವೂದ್‌ ಇಬ್ರಾಹಿಂ ಗ್ಯಾಂಗ್‌ನ ರಿಯಾಜ್‌ ಭಾತಿ ಭಾಗಿಯಾಗಿದ್ದು ಹೇಗೆ? ಅವರೊಂದಿಗೆ ಫೋಟೊ ತೆಗೆಸಿಕೊಳ್ಳಲು ಸಾಧ್ಯವಾಗಿದ್ದು ಹೇಗೆ’ ಎಂದು ಮಲಿಕ್‌ ಕೇಳಿದ್ದಾರೆ.

ADVERTISEMENT

‘ರಿಯಾಜ್‌ ಯಾರು? ಈತ ನಕಲಿ ಪಾಸ್‌ಪೋರ್ಟ್‌ನೊಂದಿಗೆ ಸಿಕ್ಕಿಬಿದ್ದವನು. ಅಂಥವನು ನಿಮ್ಮೊಂದಿಗೆ (ಫಡಣವೀಸ್‌) ಸಮಾರಂಭಗಳಲ್ಲಿ, ಬಿಜೆಪಿ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುತ್ತಾನೆ’ ಎಂದು ಮಲಿಕ್ ಆರೋಪಿಸಿ
ದ್ದಾರೆ. ಈ ಬಗ್ಗೆ ಫಡಣವೀಸ್‌ ಪ್ರತಿಕ್ರಿಯಿಸಿಲ್ಲ. ಆದರೆ, ‘ಕೊಳಚೆಯಲ್ಲಿ ಹೊರಳಾಡುವುದನ್ನು ಇಷ್ಟಪಡುವ ಹಂದಿಯೊಂದಿಗೆ ಕಾದಾಟಕ್ಕೆ ನಿಂತರೆ, ಹೊಲಸಾಗುವುದು ನೀವೇ’ ಎಂಬ ಜಾರ್ಜ್‌ ಬರ್ನಾಡ್‌ ಷಾ ಅವರ ಉಕ್ತಿಯನ್ನು ಉಲ್ಲೇಖಿಸಿ ಟ್ವೀಟ್‌ ಮಾಡಿದ್ದಾರೆ.

ಆದರೆ, ಫಡಣವೀಸ್‌ ಅವರ ಆಪ್ತ, ಆಶಿಶ್ ಶೇಲಾರ್‌ ಅವರು ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ, ಅವರ ಪುತ್ರ ಮತ್ತು ಸಚಿವ ಆದಿತ್ಯ ಠಾಕ್ರೆ ಅವರೊಂದಿಗೆ, ಮಾಜಿ ಮುಖ್ಯಮಂತ್ರಿ ಕಾಂಗ್ರೆಸ್‌ನ ಪೃಥ್ವಿರಾಜ್‌ ಚೌಹಾಣ್‌ ಮತ್ತು ಎನ್‌ಸಿಪಿ ಮುಖ್ಯಸ್ಥ ಶರದ್‌ ಪವಾರ್‌ ಅವರೊಂದಿಗೆ ರಿಯಾಜ್‌ ಭಾತಿ ಇರುವ ಚಿತ್ರಗಳನ್ನು ಬಿಡುಗಡೆ ಮಾಡಿದ್ದಾರೆ.

ವಿಚಾರಣೆಗೆ ಸಜ್ನಾನಿ ಹಾಜರು

ಮಾದಕ ವಸ್ತು ವಶಪಡಿಸಿಕೊಂಡ ಪ್ರಕರಣವೊಂದರಲ್ಲಿ ಬಂಧಿಸಲಾದ ಉದ್ಯಮಿ ಕರಣ್ ಸಜ್ನಾನಿ, ಮಾದಕ ವಸ್ತು ನಿಯಂತ್ರಣ ಸಂಸ್ಥೆಯ ವಿಶೇಷ ತನಿಖಾ ತಂಡದ (ಎಸ್‌ಐಟಿ) ಎದುರು ಬುಧವಾರ ವಿಚಾರಣೆಗೆ ಹಾಜರಾದರು.

ಈ ಪ್ರಕರಣದಲ್ಲಿ, ಸಚಿವ ನವಾಬ್ ಮಲಿಕ್ ಅಳಿಯ ಸಮೀರ್‌ ಖಾನ್‌ ಅವರ ಹೆಸರೂ ಇದೆ. ಸಜ್ನಾನಿ ಅವರನ್ನು ಜನವರಿಯಲ್ಲಿ ಬಂಧಿಸಲಾಗಿತ್ತು.

ಸೈಲ್‌ ವಿಚಾರಣೆ: ಐಷಾರಾಮಿ ಹಡಗಿನಲ್ಲಿ ಮಾದಕ ವಸ್ತು ಪತ್ತೆ ಪ್ರಕರಣದಲ್ಲಿ ಸಾಕ್ಷಿಯಾಗಿರುವ ಪ್ರಭಾಕರ್‌ ಸೈಲ್ ಅವರನ್ನು ಎನ್‌ಸಿಬಿಯ ವಿಚಕ್ಷಣಾ ತಂಡದ ಅಧಿಕಾರಿಗಳು ಮಂಗಳವಾರ ತಡರಾತ್ರಿವರೆಗೂ ವಿಚಾರಣೆ ನಡೆಸಿದ್ದಾರೆ. ರಾತ್ರಿ 11.30ರವರೆಗೆ, 11 ಗಂಟೆಗಳ ಕಾಲ ವಿಚಾರಣೆ ನಡೆಯಿತು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.