ADVERTISEMENT

ಮಹಾರಾಷ್ಟ್ರ: ಡಿ. 30 ರಂದು ಸಂಪುಟ ವಿಸ್ತರಣೆ

ಉಪಮುಖ್ಯಮಂತ್ರಿಯಾಗಿ ಅಜಿತ್‌ ಪವಾರ್‌ ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆ

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2019, 15:51 IST
Last Updated 24 ಡಿಸೆಂಬರ್ 2019, 15:51 IST
ಅಜಿತ್ ಪವಾರ್
ಅಜಿತ್ ಪವಾರ್    

ಮುಂಬೈ: ಶಿವಸೇನಾ, ಎನ್‌ಸಿಪಿ ಹಾಗೂ ಕಾಂಗ್ರೆಸ್‌ ಮೈತ್ರಿಕೂಟದ ಮಹಾರಾಷ್ಟ್ರದ ಮಹಾ ವಿಕಾಸ ಆಘಾಡಿ (ಎಂವಿಎ) ಸರ್ಕಾರದ ಸಂಪುಟ ವಿಸ್ತರಣೆ ಡಿಸೆಂಬರ್‌ 30ಕ್ಕೆ ನಡೆಯಲಿದೆ ಎಂದು ಶಿನಸೇನಾ ಮುಖವಾಣಿ ‘ಸಾಮ್ನಾ’ ಹೇಳಿದೆ.

ವಿಸ್ತರಣೆಯಲ್ಲಿ ಶಿವಸೇನಾ ಹಾಗೂ ಎನ್‌ಸಿಪಿ ತಲಾ 13 ಮಂದಿ ಸಚಿವರು ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಇದರಲ್ಲಿ ತಲಾ 10 ಮಂದಿ ಸಂಪುಟ ದರ್ಜೆ ಹಾಗೂ ಮೂವರು ರಾಜ್ಯ ಸಚಿವರು ಸೇರಿದ್ದಾರೆ ಎಂದು ‘ಸಾಮ್ನಾ’ ಮಂಗಳವಾರ ತನ್ನ ಮುಖಪುಟದ ಲೇಖನದಲ್ಲಿ ಹೇಳಿದೆ.

ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಅವರೊಟ್ಟಿಗೆ ನವೆಂಬರ್‌ನಲ್ಲಿ ಶಿವಸೇನಾ, ಎನ್‌ಸಿಪಿ ಮತ್ತು ಕಾಂಗ್ರೆಸ್‌ನ ತಲಾ ಇಬ್ಬರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಅವರಿಗೆ ಇತ್ತೀಚೆಗೆ ಖಾತೆಗಳನ್ನು ಹಂಚಿಕೆ ಮಾಡಿದ್ದರೂ, ಅದು ಅಂತಿಮವಲ್ಲ, ನಂತರ ನಿರ್ಧರಿಸಲಾಗುವುದು ಎಂದೂ ಹೇಳಲಾಗಿತ್ತು.

ADVERTISEMENT

ವಿಧಾನಸಭೆ ಅಧಿವೇಶನದ ನಂತರ, ಅಂದರೆ ಡಿಸೆಂಬರ್‌ 21ರ ನಂತರ ಸಂಪುಟ ವಿಸ್ತರಣೆ ನಡೆಯಲಿದೆ ಎಂದು ಎನ್‌ಸಿಪಿ ನಾಯಕರು ಹೇಳಿದ್ದರು. ಮಂಗಳವಾರ ವಿಸ್ತರಣೆಯಾಗಲಿದೆ ಎಂಬ ಬಗ್ಗೆ ಸೋಮವಾರ ಊಹಾಪೋಹಗಳು ಬಲವಾಗಿ ಕೇಳಿಬಂದಿದ್ದವು. ಉದ್ಧವ್‌ ಠಾಕ್ರೆ ಅವರು ಎನ್‌ಸಿಪಿ ಮುಖ್ಯಸ್ಥ ಶರದ್‌ ಪವಾರ್‌ ಅವರೊಂದಿಗೆ ಸಭೆ ಸಹ ನಡೆಸಿದ್ದರು. ಆದರೆ, ಕಾಂಗ್ರೆಸ್‌ ತನ್ನ ಸಚಿವರ ಪಟ್ಟಿಯನ್ನು ಇನ್ನೂ ಅಂತಿಮಗೊಳಿಸಿಲ್ಲ. ಆದ್ದರಿಂದ ಸಂಪುಟ ವಿಸ್ತರಣೆ ಮುಂದಕ್ಕೆ ಹೋಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಇನ್ನೆರಡು ದಿನಗಳೊಳಗೆ ತಮ್ಮ ಪಕ್ಷದ ನೂತನ ಸಚಿವರ ಹೆಸರನ್ನು ಅಂತಿಮಗೊಳಿಸಲಿದ್ದಾರೆ ಎಂದು ಹೇಳಲಾಗಿದೆ.

ಉಪಮುಖ್ಯಮಂತ್ರಿಯಾಗಿ ಅಜಿತ್‌ ಪವಾರ್‌?:ಸಚಿವ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಎನ್‌ಸಿಪಿ ಮುಖ್ಯಸ್ಥ ಶರದ್‌ ಪವಾರ್‌ ಅವರ ಸೋದರ ಸಂಬಂಧಿ ಅಜಿತ್‌ ಪವಾರ್‌ ಅವರು ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಮೂಲಗಳು ಹೇಳಿವೆ.

ಕಳೆದ ತಿಂಗಳು ನಡೆದ ನಾಟಕೀಯ ಬೆಳವಣಿಗೆಯಲ್ಲಿ ಅಜಿತ್‌ ಪವಾರ್‌ ಬಿಜೆಪಿ ಜೊತೆ ಕೈಜೋಡಿಸಿ ಸರ್ಕಾರ ರಚನೆ ಮಾಡಿದ್ದರು. ಆ ಸಂದರ್ಭದಲ್ಲಿ ಬೆಳಗಿನ ಜಾವ ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. 80 ಗಂಟೆಗಳ ಅವಧಿಯಲ್ಲಿಯೇ ಆ ಸರ್ಕಾರ ಬಿದ್ದಿತ್ತು. ಆದರೆ, ಈ ಬಾರಿ ಮಹಾ ವಿಕಾಸ ಅಘಾಡಿ ಸರ್ಕಾರದಲ್ಲಿ ಉಪಮುಖ್ಯಮಂತ್ರಿಯಾಗಲಿದ್ದಾರೆ.

ಕೋಟ್‌

ಅಜಿತ್‌ ಪವಾರ್‌ ಅವರು ಉಪಮುಖ್ಯಮಂತ್ರಿಯಾಗುವ ವಿಷಯ ಕುರಿತು ಪಕ್ಷದ ನಾಯಕರೊಂದಿಗೆ ಚರ್ಚಿಸಬೇಕಾಗಿದೆ. ಪಕ್ಷದ ಹೆಚ್ಚಿನ ಸದಸ್ಯರು ಅವರ ಬಗ್ಗೆ ಅಪಾರ ಗೌರವ ಹೊಂದಿದ್ದಾರೆ

ಶರದ್‌ ಪವಾರ್‌, ಎನ್‌ಸಿಪಿ ಮುಖ್ಯಸ್ಥ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.