ADVERTISEMENT

ವಿಚಾರಣೆ ಇಲ್ಲದೇ ಕೈದಿಗಳ ದೀರ್ಘಾವಧಿ ಬಂಧನ ಪ್ರಶ್ನಾರ್ಹ ಕ್ರಮ: ಸಿಜೆಐ

​ಪ್ರಜಾವಾಣಿ ವಾರ್ತೆ
Published 16 ಜುಲೈ 2022, 13:44 IST
Last Updated 16 ಜುಲೈ 2022, 13:44 IST
ಸಿಜೆಐ ಎನ್‌.ವಿ. ರಮಣ
ಸಿಜೆಐ ಎನ್‌.ವಿ. ರಮಣ   

ಜೈಪುರ: ‘ಯಾವುದೇ ವಿಚಾರಣೆ ಇಲ್ಲದೇ ದೀರ್ಘಾವಧಿಯವರೆಗೆ ಕೈದಿಗಳನ್ನು ಬಂಧನದಲ್ಲಿ ಇಡುವುದು ಪ್ರಶ್ನಾರ್ಹ ಕ್ರಮ. ವಿಚಾರಣಾಧೀನ ಕೈದಿಗಳ ಸಂಖ್ಯೆ ಹೆಚ್ಚಿರುವುದು ಗಂಭೀರ ಸಮಸ್ಯೆ. ಅಪರಾಧ ನ್ಯಾಯ ವ್ಯವಸ್ಥೆಯ ಮೇಲೆ ಪರಿಣಾಮ ಬೀರುವ ಈ ಸಮಸ್ಯೆ ಪರಿಹರಿಸಲು ಅಗತ್ಯ ಕ್ರಮಕೈಗೊಳ್ಳಬೇಕು’ ಎಂದುಸುಪ್ರೀಂಕೋರ್ಟ್‌ ಮುಖ್ಯನ್ಯಾಯಮೂರ್ತಿ (ಸಿಜೆಐ) ಎನ್‌.ವಿ. ರಮಣ ಅವರು ಶನಿವಾರ ಆಗ್ರಹಿಸಿದರು.

ಇಲ್ಲಿ ನಡೆದ ಅಖಿಲ ಭಾರತ ಕಾನೂನು ಸೇವೆಗಳ ಪ್ರಾಧಿಕಾರದ 18ನೇ ಅಧಿವೇಶನ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ರಮಣ, ‘ದೇಶದಲ್ಲಿರುವ 6.10 ಲಕ್ಷ ಕೈದಿಗಳಲ್ಲಿ ಶೇ 80 ಕೈದಿಗಳು ವಿಚಾರಣಾಧೀನ ಕೈದಿಗಳು. ನಮ್ಮ ಕ್ರಿಮಿನಲ್‌ ನ್ಯಾಯ ವ್ಯವಸ್ಥೆಯಲ್ಲಿ ವಿಚಾರಣೆ ಇಲ್ಲದೇ ದೀರ್ಘಾವಧಿ ಬಂಧನದಲ್ಲಿರಿಸುವ ಪ್ರಕ್ರಿಯೆ ಕ್ರಿಮಿನಲ್ ನ್ಯಾಯ ವ್ಯವಸ್ಥೆಯಲ್ಲಿ ‘ಒಂದು ಶಿಕ್ಷೆ’ಯು ಆಗಿದೆ. ಆತುರದ, ವಿವೇಚನೆಯಿಲ್ಲದ ಬಂಧನಗಳಿಂದ ಹಿಡಿದು, ಜಾಮೀನು ಪಡೆಯುವಲ್ಲಿನ ಕಷ್ಟದವರೆಗೆ, ಈ ಪ್ರಕ್ರಿಯೆಯು ವಿಚಾರಣಾಧೀನ ಕೈದಿಗಳ ದೀರ್ಘಾವಧಿಯ ಸೆರೆವಾಸಕ್ಕೆ ಕಾರಣವಾಗುತ್ತದೆ. ಹೊರಗಿನ ಪ್ರಪಂಚ, ನಾಗರಿಕರನ್ನು ನೋಡಲಾಗದೇ ‘ಕತ್ತಲೆ ಕೋಣೆ’ಯಲ್ಲಿ ಜೀವನ ಕಳೆದರೆ ಅವರ ಮೇಲೆ ಎಂತಹ ಪರಿಣಾಮ ಬೀರಬಹುದು?’ ಎಂದು ವಿಷಾದಿಸಿದರು.

ಅಧಿವೇಶನದಲ್ಲಿ ಸಚಿವ ಕಿರಣ್ ರಿಜಿಜು ಅವರು, ದೇಶದಲ್ಲಿ ವಿಚಾರಣೆಗೆ ಬಾಕಿ ಇರುವ ಪ್ರಕರಣಗಳ ಸಂಖ್ಯೆ ಏರಿಕೆ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಕ್ಕೆ ಪ್ರತಿಕ್ರಿಯಿಸಿದ ಸಿಜೆಐ,‘ನ್ಯಾಯಾಲಯಗಳಲ್ಲಿ ಪ್ರಕರಣಗಳು ಇಷ್ಟೊಂದು ಸಂಖ್ಯೆಯಲ್ಲಿ ಬಾಕಿಯಾಗಲು ನ್ಯಾಯಾಂಗಕ್ಕೆ ಅಗತ್ಯ ನೇಮಕಾತಿ ಮಾಡದಿರುವುದು ಮತ್ತು ಮೂಲಸೌಕರ್ಯ ಸುಧಾರಿಸದಿರುವುದೇ ಪ್ರಮುಖ ಕಾರಣ’ ಎಂದು ದೂರಿದರು.

ADVERTISEMENT

‘ನ್ಯಾಯಾಧೀಶರು ವಿದೇಶಗಳಿಗೆ ಭೇಟಿ ಕೊಟ್ಟಾಗ, ಒಂದು ಪ್ರಕರಣ ಇತ್ಯರ್ಥಕ್ಕೆ ಎಷ್ಟು ವರ್ಷಗಳು ಬೇಕು? ಅಷ್ಟೊಂದು ಸಂಖ್ಯೆಯ ಪ್ರಕರಣಗಳ ಬಾಕಿಗೆ ಕಾರಣಗಳು ನಿಮಗೆ ತಿಳಿದಿದೆಯಾ? ಇಂತಹದೇ ಪ್ರಶ್ನೆಗಳನ್ನೂ ಎದುರಿಸುತ್ತೇವೆ. ಕ್ರಿಮಿನಲ್ ನ್ಯಾಯ ವ್ಯವಸ್ಥೆಯ ಆಡಳಿತದಲ್ಲಿ ದಕ್ಷತೆ ಹೆಚ್ಚಿಸಲು ನಮಗೆ ಸಮಗ್ರ ಯೋಜನೆಯ ಅಗತ್ಯವಿದೆ. ನ್ಯಾಯಾಂಗದಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿ ಮಾಡಬೇಕು. ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸಬೇಕು’ ಎಂದು ಸಿಜೆಐ, ಸರ್ಕಾರವನ್ನು ಒತ್ತಾಯಿಸಿದರು.

ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರವು ಕಳೆದ ವರ್ಷ ಸುಮಾರು ಎರಡು ಕೋಟಿ ವ್ಯಾಜ್ಯ ಪೂರ್ವ ಪ್ರಕರಣಗಳು ಮತ್ತು ಒಂದು ಕೋಟಿ ಬಾಕಿ ಪ್ರಕರಣಗಳನ್ನು ಇತ್ಯರ್ಥಪಡಿಸಿರುವುದನ್ನು ಉದಾಹರಣೆ ನೀಡಿದ ಸಿಜೆಐ, ‌‘ನ್ಯಾಯಾಧೀಶರು ಮತ್ತು ಅಧಿಕಾರಿಗಳು ಹೆಚ್ಚುವರಿ ಅವಧಿ ಕೆಲಸ ಮಾಡಿದ್ದರಿಂದ ಇದು ಸಾಧ್ಯವಾಯಿತು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.