ADVERTISEMENT

ಕೋವಿಡ್‌ ಲಸಿಕೆಯ ಒಂದೂ ಡೋಸ್‌ ಪಡೆದಿಲ್ಲ ದೇಶದ ಶೇ 20ರಷ್ಟು ಜನ

ಪಿಟಿಐ
Published 12 ನವೆಂಬರ್ 2021, 16:21 IST
Last Updated 12 ನವೆಂಬರ್ 2021, 16:21 IST
ಗುವಾಗತಿಯಲ್ಲಿ ಕೋವಿಡ್‌–19 ಲಸಿಕೆ ಹಾಕಿಸಿಕೊಳ್ಳುತ್ತಿರುವ ಮಹಿಳೆ
ಗುವಾಗತಿಯಲ್ಲಿ ಕೋವಿಡ್‌–19 ಲಸಿಕೆ ಹಾಕಿಸಿಕೊಳ್ಳುತ್ತಿರುವ ಮಹಿಳೆ   

ನವದೆಹಲಿ: ಕೋವಿಡ್‌–19 ಲಸಿಕೆ ಪಡೆಯಲು ಅರ್ಹರಾಗಿರುವ ಭಾರತದ ವಯಸ್ಕರ ಪೈಕಿ ಶೇಕಡ 80ರಷ್ಟು ಜನರು ಮೊದಲ ಡೋಸ್‌ ಲಸಿಕೆ ಹಾಕಿಸಿಕೊಂಡಿದ್ದರೆ, ಶೇಕಡ 38ರಷ್ಟು ಜನರು ಎರಡೂ ಡೋಸ್‌ ಲಸಿಕೆ ಹಾಕಿಸಿಕೊಂಡಿರುವುದಾಗಿ ಕೇಂದ್ರ ಆರೋಗ್ಯ ಸಚಿವಾಲಯ ಶುಕ್ರವಾರ ಹೇಳಿದೆ.

'ಹರ್‌ ಘರ್‌ ದಸ್ತಕ್‌ ' ಅಭಿಯಾನದ ಅಂಗವಾಗಿ ನಡೆದ ವೆಬಿನಾರ್‌ನಲ್ಲಿ ಮಾತನಾಡಿದ ಕೇಂದ್ರ ಆರೋಗ್ಯ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಮನೋಹರ್‌ ಅಗ್ನಾನಿ, ಅಭಿಯಾನದ ಮೂಲಕ ನವೆಂಬರ್‌ 30ರೊಳಗೆ ದೇಶದಲ್ಲಿ ಕೋವಿಡ್‌–19 ಮೊದಲ ಡೋಸ್‌ ಲಸಿಕೆ ಹಾಕಿಸಿಕೊಂಡವರ ಪ್ರಮಾಣ ಶೇಕಡ 90ರಷ್ಟು ಮುಟ್ಟುವಂತೆ ಮಾಡಲು ಸರ್ಕಾರ ಉದ್ದೇಶಿಸಿದೆ ಎಂದರು.

ಕೋವಿಡ್‌ ಲಸಿಕೆ ಹಾಕಿಸಿಕೊಳ್ಳದ ಮತ್ತು ಎರಡನೇ ಡೋಸ್‌ ತೆಗೆದುಕೊಳ್ಳಬೇಕಾದ ಅವಧಿ ಮೀರಿರುವ ಜನರಿಗೆ ಮನೆ ಮನೆಗೆ ಹುಡುಕಿಕೊಂಡು ಹೋಗಿ ಲಸಿಕೆ ಹಾಕುವ 'ಹರ್‌ ಘರ್‌ ದಸ್ತಕ್‌' ಅಭಿಯಾನಕ್ಕೆ ಸರ್ಕಾರ ಇತ್ತೀಚೆಗೆ ಚಾಲನೆ ನೀಡಿದೆ.

ADVERTISEMENT

ಈವರೆಗೂ ಶೇಕಡ 80ರಷ್ಟು ಜನರು ಲಸಿಕೆಯ ಮೊದಲ ಡೋಸ್‌ ಹಾಗೂ ಶೇಕಡ 38ರಷ್ಟು ಜನರು ಎರಡೂ ಡೋಸ್‌ ಲಸಿಕೆ ಹಾಕಿಸಿಕೊಂಡಿರುವುದಾಗಿ ತಿಳಿಸಿದರು. 2021ರ ಜನವರಿ 16ರಿಂದ ದೇಶದಲ್ಲಿ ಕೋವಿಡ್‌ ಲಸಿಕೆ ಅಭಿಯಾನ ಆರಂಭವಾಗಿದೆ.

ಹಲವು ರಾಜ್ಯಗಳಲ್ಲಿ ಶೇಕಡ 100ರಷ್ಟು ವಯಸ್ಕರು ಲಸಿಕೆಯ ಮೊದಲ ಡೋಸ್‌ ಹಾಕಿಸಿಕೊಂಡಿದ್ದಾರೆ. 12 ಕೋಟಿ ಜನರು ಎರಡನೇ ಡೋಸ್‌ ಲಸಿಕೆ ಬಾಕಿ ಉಳಿಸಿಕೊಂಡಿದ್ದಾರೆ. ಲಸಿಕೆ ಹಾಕುವ ಕಾರ್ಯವನ್ನು ಚುರುಗೊಳಿಸುವಂತೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಆರೋಗ್ಯ ಸಚಿವಾಲಯವು ಪತ್ರ ರವಾನಿಸಿದೆ.

ರಾಷ್ಟ್ರ ರಾಜಧಾನಿಯಲ್ಲಿ ಹರ್‌ ಘರ್‌ ದಸ್ತಕ್‌ ಅಭಿಯಾನ ಆರಂಭವಾಗಿದೆ. ದೆಹಲಿ ಸರ್ಕಾರ ಹೊರಡಿಸಿರುವ ಪ್ರಕಟಣೆಯ ಪ್ರಕಾರ, ಇಂದಿನಿಂದ27ರವರೆಗೆ ಈ ಅಭಿಯಾನ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.