ADVERTISEMENT

ಅರ್ಪಿತಾ ಮುಖರ್ಜಿ ಮನೆಯಲ್ಲಿ ಅಂದಾಜು ₹50 ಕೋಟಿ ಹಣ, ಕೆ.ಜಿಗಟ್ಟಲೆ ಚಿನ್ನ ವಶ

ಪಿಟಿಐ
Published 28 ಜುಲೈ 2022, 8:27 IST
Last Updated 28 ಜುಲೈ 2022, 8:27 IST
ಐಎಎನ್‌ಎಸ್ ಚಿತ್ರ
ಐಎಎನ್‌ಎಸ್ ಚಿತ್ರ   

ಕೋಲ್ಕತ್ತ: ಪಶ್ಚಿಮ ಬಂಗಾಳದ ಶಿಕ್ಷಕರ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಶೋಧ ಮುಂದುವರಿಸಿದ್ದು, ಇನ್ನಷ್ಟು ಅಕ್ರಮ ಸಂಪತ್ತು ಪತ್ತೆಯಾಗುತ್ತಿದೆ.

ಹಗರಣಕ್ಕೆ ಸಂಬಂಧಿಸಿದಂತೆ ಇ.ಡಿ ವಶದಲ್ಲಿರುವ ಸಚಿವ ಪಾರ್ಥ ಚಟರ್ಜಿ ಅವರ ಆಪ್ತೆ ಅರ್ಪಿತಾ ಮುಖರ್ಜಿಅವರ ಬೆಲ್‌ಘಾರಿಯಾ ಅಪಾರ್ಟ್‌ಮೆಂಟ್‌ನಲ್ಲಿ ಬುಧವಾರ ರಾತ್ರಿ ₹ 27.9 ಕೋಟಿ ನಗದು ವಶಕ್ಕೆ ಪಡೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರಾತ್ರಿಯೆಲ್ಲ ಅಧಿಕಾರಿಗಳು ಹಣದ ಎಣಿಕೆ ನಡೆಸಿದ್ದಾರೆ. ಇದರ ಜೊತೆಗೆ, ಕೆ.ಜಿಗಟ್ಟಲೆ ಚಿನ್ನವನ್ನು ವಶಕ್ಕೆ ಪಡೆದಿರುವ ಅಧಿಕಾರಿಗಳು ಅದರ ಮೌಲ್ಯ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ.

ದಕ್ಷಿಣ ಕೋಲ್ಕತ್ತದ ಟೋಲಿಗಂಜ್ ಪ್ರದೇಶದಲ್ಲಿ ಮುಖರ್ಜಿ ಅವರ ಮತ್ತೊಂದು ಫ್ಲಾಟ್‌ನಿಂದ ₹ 21 ಕೋಟಿಗೂ ಹೆಚ್ಚು ನಗದು, ಆಭರಣ ಮತ್ತು ವಿದೇಶಿ ವಿನಿಮಯವನ್ನು ವಶಪಡಿಸಿಕೊಂಡ ಐದು ದಿನಗಳ ನಂತರ ಮತ್ತೆ ಅಪಾರ ಪ್ರಮಾಣದ ಹಣ ಮತ್ತು ಚಿನ್ನ ಪತ್ತೆಯಾಗಿದೆ.

ADVERTISEMENT

ಇದುವರೆಗೆ ಅರ್ಪಿತಾ ಅವರ ಬಳಿ ಸರಿ ಸುಮಾರು ₹ 50 ಕೋಟಿಯಷ್ಟು ಹಣ ವಶಕ್ಕೆ ಪಡೆಯಲಾಗಿದೆ.

ದಕ್ಷಿಣ ಕೋಲ್ಕತ್ತದ ರಾಜ್‌ದಂಗಾ ಮತ್ತು ಉತ್ತರದ ಅಂಚಿನಲ್ಲಿರುವ ಬೆಲ್‌ಘಾರಿಯಾದಲ್ಲಿನ ವಿವಿಧ ಸ್ಥಳಗಳ ಮೇಲೆ ಇಡಿ ಅಧಿಕಾರಿಗಳು ಬುಧವಾರ ಸಂಘಟಿತ ದಾಳಿ ನಡೆಸಿದ್ದರು.

ವಿಚಾರಣೆ ವೇಳೆ, ಈ ಸ್ಥಳಗಳ ಬಗ್ಗೆ ಅರ್ಪಿತಾ ಬಾಯ್ಬಿಟ್ಟಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಎರಡೂ ಸ್ಥಳಗಳಲ್ಲಿ ಬೀಗ ಒಡೆದು ಇ.ಡಿ ಅಧಿಕಾರಿಗಳು ಅಪಾರ್ಟ್‌ಮೆಂಟ್ ಬಾಗಿಲು ತೆರೆದಿದ್ದಾರೆ.

ಇವನ್ನೂ ಓದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.