ADVERTISEMENT

ವಿವೇಕಾನಂದರ ಚಿಂತನೆ ಪಾಲನೆ: ಯುವಜನರಿಗೆ ‘ಸುಪ್ರಿಂ’ ಸಿಜೆಐ ಸಲಹೆ

ಪಿಟಿಐ
Published 12 ಸೆಪ್ಟೆಂಬರ್ 2021, 12:52 IST
Last Updated 12 ಸೆಪ್ಟೆಂಬರ್ 2021, 12:52 IST
ಎನ್.ವಿ.ರಮಣ
ಎನ್.ವಿ.ರಮಣ   

ಹೈದರಾಬಾದ್: ‘ಧರ್ಮಗಳ ಮೂಲಸತ್ವವೇ ಒಳ್ಳೆಯತನ ಮತ್ತು ತಾಳ್ಮೆ ಹಾಗೂ ಭಾರತ ಪುನರುತ್ಥಾನದ ಕನಸು ನನಸಾಗಿಸುವುದು ಎಂದು ಸ್ವಾಮಿ ವಿವೇಕಾನಂದ ಬಲವಾಗಿ ನಂಬಿದ್ದರು. ಯುವಜನರಲ್ಲಿ ಇಂತಹ ಧ್ಯೇಯವನ್ನು ಬೆಳೆಸಬೇಕಾಗಿದೆ’ ಎಂದು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಎನ್‌.ವಿ.ರಮಣ ಹೇಳಿದರು.

ಇಲ್ಲಿನ ವಿವೇಕಾನಂದ ಮಾನವ ಅಭ್ಯುದಯ ಸಂಸ್ಥೆಯ 22ನೇ ಸ್ಥಾಪನಾ ದಿನ ಮತ್ತು ಚಿಕಾಗೊದಲ್ಲಿ ಸ್ವಾಮಿ ವಿವೇಕಾನಂದರು ಮಾಡಿದ ಭಾಷಣದ 128ನೇ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ವರ್ಚುವಲ್‌ ವೇದಿಕೆಯಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು.

‘ವಿವೇಕಾನಂದ ಅವರು ತಾಳ್ಮೆ ಮತ್ತು ಸಾರ್ವತ್ರಿಕ ಸ್ವೀಕಾರದ ಮಹತ್ವವನ್ನು ಪ್ರತಿಪಾದಿಸಿದ್ದರು. ಅರ್ಥಹೀನ ಸಂಘರ್ಷಗಳು ಸಮಾಜ ಮತ್ತು ದೇಶಕ್ಕೆ ಹೇಗೆ ಹಾನಿಕರವಾಗಲಿದೆ ಎಂದು ಎಚ್ಚರಿಸಿದ್ದರು. ಸಮಕಾಲೀನ ಭಾರತದಲ್ಲಿ ಈ ಚಿಂತನೆಯ ಅಗತ್ಯ ಇಂದು ಹೆಚ್ಚಿದೆ. 1893ರಲ್ಲಿನ ವಿವೇಕಾನಂದರ ಮಾತುಗಳನ್ನು ಇಂದು ಪಾಲಿಸಬೇಕಿದೆ’ ಎಂದರು.

ADVERTISEMENT

‘1893ರಲ್ಲಿ ಸ್ವಾಮಿ ವಿವೇಕಾನಂದ ಅವರು ‘ಧರ್ಮ ಸಂಸತ್ತಿ’ನಲ್ಲಿ ಮಾಡಿದ ಭಾಷಣ ವಿಶ್ವದ ಗಮನ ಸೆಳೆದಿತ್ತು. ಪ್ರೀತಿ, ಕರುಣೆ ಸರ್ವರಿಗೂ ಸಮಾನಗೌರವ ಎಂಬ ಪ್ರಾಯೋಗಿಕ ವೇದಾಂತವನ್ನು ಅವರು ಜನಪ್ರಿಯಗೊಳಿಸಿದ್ದರು. ಆ ತತ್ವ ಈಗ ಹೆಚ್ಚು ಪ್ರಸ್ತುತವಾಗಿದ್ದು, ಸಾಕಾರಗೊಳ್ಳಬೇಕಾಗಿದೆ’ ಎಂದು ಸಿಜೆಐ ಅಭಿಪ್ರಾಯಪಟ್ಟರು.

ಯುವಜನರು ಇಂದು ಸಾಮಾಜಿಕ ವಾಸ್ತವ ಮತ್ತು ಸವಾಲುಗಳನ್ನು ಅರ್ಥೈಸಿಕೊಳ್ಳಬೇಕಾಗಿದೆ. ದೇಶ ಯಾವುದೇ ಬದಲಾವಣೆ ಕಾಣಬೇಕಾದರೂ ಅದು ಯುವಜನರ ಸಕ್ರಿಯ ಭಾಗವಹಿಸುವಿಕೆಯಿಂದ ಮಾತ್ರ ಸಾಧ್ಯ. ಮಾದರಿ ಸಮಾಜ ಮತ್ತು ದೇಶವನ್ನು ನೀವು ಕಟ್ಟಬೇಕಾಗಿದೆ ಎಂದು ಯುವಜನರಿಗೆ ಸಲಹೆ ಮಾಡಿದರು.

ಸ್ವಾತಂತ್ರ್ಯ ಹೋರಾಟ ಮತ್ತು ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಅಸಂಖ್ಯ ಯುವಜನರು ಹೋರಾಡಿದ ಫಲವಾಗಿ ಇಂದು ಪ್ರಜಾಪ್ರಭುತ್ವ ಹಕ್ಕುಗಳು ಸ್ಥಾಪಿತವಾಗಿವೆ. ದೇಶ ಮತ್ತು ಸಮಾಜಕ್ಕಾಗಿ ಅನೇಕ ಯುವಜನರು ತಮ್ಮ ಬದುಕು, ಜೀವವನ್ನು ತ್ಯಾಗ ಮಾಡಿದರು ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಅವರು ಶಿಕ್ಷಣ ಸಂಸ್ಥೆಗಳು ಯುವಜನರಲ್ಲಿ ಅವರ ಹಕ್ಕುಗಳು ಮತ್ತು ಮಿತಿಗಳ ಕುರಿತು ಅರಿವು ಮೂಡಿಸಬೇಕಾಗಿದೆ.ಕಾನೂನು ಸಂಸ್ಕೃತಿ, ಕಾನೂನು ಗೌರವಿಸುವ ಚಿಂತನೆಯನ್ನು ಅವರಲ್ಲಿ ಬೆಳೆಸಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.

ಸಮಾಜದಲ್ಲಿ ಪರಿವರ್ತನೆ ತರುವಂತೆ ಯುವಜನರಲ್ಲಿ ಅವರ ಹಕ್ಕುಗಳು ಮತ್ತು ಕರ್ತವ್ಯಗಳನ್ನು ಕುರಿತು ಅರಿವು ಮೂಡಿಸಬೇಕಾಗಿದೆ ಎಂದು ಮುಖ್ಯ ನ್ಯಾಯಮೂರ್ತಿ ರಮಣ ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.