ಸಾವು
(ಪ್ರಾತಿನಿಧಿಕ ಚಿತ್ರ)
ಕೋಟಾ(ರಾಜಸ್ಥಾನ): ಡಕನೀಯಾ ರೈಲು ನಿಲ್ದಾಣದ ಸಮೀಪ ರೈಲು ಹಳಿಗಳ ಮೇಲೆ 17 ವರ್ಷ ವಯಸ್ಸಿನ ನೀಟ್ ಆಕಾಂಕ್ಷಿ ಯುವಕನ ಶವ ವಿರೂಪಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿದೆ. ಯುವಕ ಪ್ರೇಮ ಪ್ರಕರಣದಿಂದ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ದೆಹಲಿ–ಮುಂಬೈ ಮಾರ್ಗದ ರೈಲು ಹಳಿ ಮೇಲೆ ಬುಧವಾರ ತಡರಾತ್ರಿ ಶವ ಪತ್ತೆಯಾಗಿದೆ. ಗುರುತಿನ ಚೀಟಿ ಆಧರಿಸಿ, ಆತನನ್ನು ಬಿಹಾರದ ಬಕ್ಸರ್ ನಿವಾಸಿ ಹಿಮಾಂಶು ಸಿಂಗ್ ರಜಪೂತ್ ಎಂದು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ರಜಪೂತ್ ನೀಟ್ ಆಕಾಂಕ್ಷಿಯಾಗಿದ್ದು, ಕೋಟಾದಲ್ಲಿ ತರಬೇತಿ ಕೇಂದ್ರದಲ್ಲಿ ಪರೀಕ್ಷೆ ತರಬೇತಿ ಪಡೆಯುತ್ತಿದ್ದ. ರಜಪೂತ್ ಪ್ರೇಯಸಿ ಐಐಟಿಯಲ್ಲಿ ಓದುತ್ತಿದ್ದು, ಆತನ ಸ್ನೇಹಿತರಿಗೆ ಕರೆ ಮಾಡಿ ರಜಪೂತ್ ಜೀವಕ್ಕೆ ಅಪಾಯ ತಂದುಕೊಳ್ಳಬಹುದು ಎಂದು ಆತಂಕ ವ್ಯಕ್ತಪಡಿಸಿದ್ದರು. ಸ್ನೇಹಿತರು ರಜಪೂತ್ ಇರುವ ಮನೆ ಬಳಿಗೆ ಬರುವಷ್ಟರಲ್ಲಿ ಆತ ಅಲ್ಲಿಂದ ನಿರ್ಗಮಿಸಿದ್ದ ಎನ್ನುವ ಮಾಹಿತಿ ಲಭಿಸಿದೆ ಎಂದು ರೈಲ್ವೆ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪ್ರಕರಣದ ಬಗ್ಗೆ ತನಿಖೆ ನಡೆಯುತ್ತಿದೆ. ಅಗತ್ಯಬಿದ್ದರೆ, ಪ್ರೇಮ ಪ್ರಕರಣದ ಆಯಾಮದಿಂದಲೂ ತನಿಖೆ ನಡೆಸಲಾಗುವುದು ಎಂದು ಕೋಟಾ ರೈಲ್ವೆ ಪೊಲೀಸ್‌ನ ಡಿಎಸ್‌ಪಿ ಶಂಕರ್ ಲಾಲ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.