ಕೋಟಾ: ರಾಜಸ್ಥಾನದ ಕೋಟಾದಲ್ಲಿ ’ನೀಟ್‘ಗೆ ಸಿದ್ಧತೆ ನಡೆಸುತ್ತಿದ್ದ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಹರಿಯಾಣದ ರೋಹಟಕ್‌ನ ಸುಮಿತ್ ಪಂಚಾಲ್ (20) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ.
ಮೇ5ರಂದು ವೈದ್ಯಕೀಯ ಪ್ರವೇಶ ಪರೀಕ್ಷೆ ನಡೆಯುವ ಮುನ್ನವೇ ಈ ಘಟನೆ ನಡೆದಿದೆ. ಕಳೆದ ಒಂದು ವರ್ಷದಿಂದ ಕೋಟಾದಲ್ಲಿ ಸುಮಿತ್ ’ನೀಟ್‘ಗೆ ಸಿದ್ಧತೆ ನಡೆಸುತ್ತಿದ್ದ. ಭಾನುವಾರ, ಹಾಸ್ಟೆಲ್‌ನ ಕೊಠಡಿಯಲ್ಲಿ ಸೀಲಿಂಗ್ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಭಾನುವಾರ ಮಧ್ಯಾಹ್ನ ಊಟದ ನಂತರ ಸುಮಿತ್ ನಾಪತ್ತೆಯಾಗಿದ್ದ. ಪೋಷಕರ ಕರೆಗೂ ಉತ್ತರಿಸಿರಲಿಲ್ಲ. ಗಾಬರಿಯಿಂದ ಪೋಷಕರು ಹಾಸ್ಟೆಲ್ ವಾರ್ಡನ್‌ಗೆ ಕರೆ ಮಾಡಿ ವಿಚಾರಿಸಿದಾಗ, ರಾತ್ರಿ 9 ಗಂಟೆಗೆ ವಾರ್ಡನ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಕೊಠಡಿಯ ಬಾಗಿಲು ಒಡೆದಾಗ ಸುಮಿತ್ ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಗಿದೆ.
’ಸುಮಿತ್ ಆತ್ಮಹತ್ಯೆ ಮಾಡಿಕೊಂಡಿಲ್ಲ, ಆತನನ್ನು ಕೊಲೆ ಮಾಡಲಾಗಿದೆ‘ ಎಂದು ಪೋಷಕರು ಆರೋಪಿಸಿದ್ದಾರೆ.
‘ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆಯುವಂತೆ ನಾವು ಸುಮಿತ್‌ಗೆ ಒತ್ತಡ ಹೇರಿರಲಿಲ್ಲ. ನಮ್ಮೊಂದಿಗೆ ಅವನು ಚೆನ್ನಾಗಿಯೇ ಮಾತನಾಡಿದ್ದ. ಅವನಿಗೆ ಯಾವುದೇ ಖಿನ್ನತೆ ಇರಲಿಲ್ಲ. ಇದು ಕೊಲೆ. ಅವನ ಸಾವಿನ ಕುರಿತು ತನಿಖೆ ನಡೆಸಬೇಕು’ ಎಂದು ಸುಮಿತ್ ಪೋಷಕರು ಒತ್ತಾಯಿಸಿದ್ದಾರೆ.
ಘಟನೆ ಕುರಿತು ಅಸ್ವಾಭಾವಿಕ ಸಾವಿನ ಪ್ರಕರಣ ದಾಖಲಿಸಲಾಗಿದೆ. ಆತ್ಮಹತ್ಯೆಗೆ ಕಾರಣವೇನು ಎಂಬುದು ತಿಳಿದು ಬಂದಿಲ್ಲ ಎಂದು ಪೊಲೀಸರು ಹೇಳಿದ್ದಾರೆ.
2023ರಲ್ಲಿ ಕೋಟಾದಲ್ಲಿ ನೀಟ್ ಮತ್ತು ಜೆಇಇಗೆ ಸಿದ್ಧತೆ ನಡೆಸುತ್ತಿದ್ದ 26 ವಿದ್ಯಾರ್ಥಿಗಳು ಆತ್ಮಹತ್ಯೆಗೆ ಶರಣಾಗಿದ್ದರು. ಈ ವರ್ಷ ಇದುವರೆಗೆ ಎಂಟು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.