ADVERTISEMENT

ನೀಟ್‌ನಿಂದ ರಿಯಾಯಿತಿ; ಪೂರ್ವಭಾವಿ ಷರತ್ತು ವಿಧಿಸುವ ಧೈರ್ಯವಿದೆಯೇ?: ಸ್ಟಾಲಿನ್‌

ಎಡಪ್ಪಾಡಿ ಪಳನಿಸ್ವಾಮಿಗೆ ಸವಾಲೆಸೆದ ತಮಿಳುನಾಡು ಸಿ.ಎಂ ಸ್ಟಾಲಿನ್‌

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2025, 15:47 IST
Last Updated 21 ಏಪ್ರಿಲ್ 2025, 15:47 IST
ಎಂ.ಕೆ.ಸ್ಟಾಲಿನ್–ಪಿಟಿಐ ಚಿತ್ರ
ಎಂ.ಕೆ.ಸ್ಟಾಲಿನ್–ಪಿಟಿಐ ಚಿತ್ರ   

ಚೆನ್ನೈ: ‘2026ರ ವಿಧಾನಸಭಾ ಚುನಾವಣೆಗೂ ಮುನ್ನ ಬಿಜೆಪಿ ಎದುರು ‘ನೀಟ್‌’ ಪರೀಕ್ಷೆಯಿಂದ ರಾಜ್ಯಕ್ಕೆ ರಿಯಾಯಿತಿ ಪಡೆಯುವ ಪೂರ್ವಭಾವಿ ಷರತ್ತು ವಿಧಿಸಲು ಧೈರ್ಯವಿದೆಯೇ?’ ಎಂದು ಎಐಡಿಎಂಕೆ ಪಕ್ಷವನ್ನು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್‌ ಪ್ರಶ್ನಿಸಿದ್ದಾರೆ.

ವಿಧಾನಸಭಾ ಅಧಿವೇಶನದಲ್ಲಿ ಆರೋಗ್ಯ ಇಲಾಖೆಗೆ ಹೆಚ್ಚಿನ ಅನುದಾನ ಬಿಡುಗಡೆ ಕೋರಿ ನಡೆದ ಚರ್ಚೆ ವೇಳೆ, ವಿರೋಧ ಪಕ್ಷದ ನಾಯಕ ಹಾಗೂ ಎಐಡಿಎಂಕೆ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ. ಪಳನಿಸ್ವಾಮಿ ಅವರಿಗೆ ಈ ಪ್ರಶ್ನೆ ಕೇಳಿದ್ದಾರೆ.  

‘2011ರಿಂದ 2021ರ ಅವಧಿಯಲ್ಲಿ ಎಐಎಡಿಎಂಕೆ ಸರ್ಕಾರದ ಅವಧಿಯಲ್ಲಿ ರಾಜ್ಯದಲ್ಲಿ 11 ವೈದ್ಯಕೀಯ ಕಾಲೇಜುಗಳು ಸ್ಥಾಪನೆಯಾಗಿದ್ದು, ಸ್ಟಾಲಿನ್  ಆಡಳಿತದಲ್ಲಿ ಕೇವಲ ನಾಲ್ಕು ವೈದ್ಯಕೀಯ ಕಾಲೇಜುಗಳು ಆರಂಭಗೊಂಡಿದೆ ಎಂದು ಪಳನಿಸ್ವಾಮಿ ಆರೋಪಿಸಿದರು.

ADVERTISEMENT

ಇದಕ್ಕೆ ಉತ್ತರಿಸಿದ ಸಾರಿಗೆ ಸಚಿವ ಎಸ್‌.ಎಸ್‌.ಶಿವಶಂಕರ್‌, ‘ಪಳನಿಸ್ವಾಮಿ ಅವರು ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ನೀಟ್‌ ಪರೀಕ್ಷೆ ಜಾರಿಗೆ ರಾಜ್ಯದಲ್ಲಿಯೂ ಅವಕಾಶ ಮಾಡಿಕೊಟ್ಟಿದ್ದರಿಂದಲೇ ಸಾಧ್ಯವಾಯಿತು’ ಎಂದು ತಿರುಗೇಟು ನೀಡಿದರು. 

ಇದಕ್ಕೆ ಸದನದಲ್ಲಿಯೇ ತಿರುಗೇಟು ನೀಡಿದ ಪಳನಿಸ್ವಾಮಿ, ‘2010ರಲ್ಲಿ ‘ನೀಟ್‌’ ಜಾರಿ ವೇಳೆ ಯುಪಿಎ–2 ಸರ್ಕಾರದಲ್ಲಿ ಡಿಎಂಕೆ ಪಕ್ಷವೂ ಇತ್ತು.  ನೀಟ್‌ ಪರವಾಗಿ ಆಗಿನ ಕೇಂದ್ರ ಹಣಕಾಸು ಸಚಿವರಾಗಿದ್ದ ಪಿ.ಚಿದಂಬರಂ ಪತ್ನಿಯೇ ಸುಪ್ರೀಂಕೋರ್ಟ್‌ನಲ್ಲಿ ವಾದ ಮಂಡಿಸಿದ್ದರು’ ಎಂದು ಉತ್ತರಿಸಿದರು.

ಈ ವೇಳೆ ಮಧ್ಯಪ್ರವೇಶಿಸಿ ಮಾತನಾಡಿದ ಸ್ಟಾಲಿನ್‌, ‘ಮುಂದಿನ ವರ್ಷ ನಡೆಯುವ ವಿಧಾನಸಭಾ ಚುನಾವಣೆಗೆ ಬಿಜೆಪಿ ಜೊತೆಗೂಡಿ ಚುನಾವಣೆ ಎದುರಿಸಲು ಎಐಡಿಎಂಕೆ ಸಿದ್ಧತೆ ನಡೆಸಿದ್ದು, ನಿಮಗೀಗ ಹೆಚ್ಚಿನ ಅವಕಾಶಗಳ ಬಾಗಿಲು ತೆರೆದಿದೆ. ಇದುವರೆಗೂ ನಡೆದ ಬೆಳವಣಿಗೆಯೂ ತಪ್ಪು–ಸರಿ ಎಂದು ಹೇಳುವುದಿಲ್ಲ. ಒಂದೊಮ್ಮೆ ಬಿಜೆಪಿ ಜೊತೆಗಿನ ಮೈತ್ರಿಗೂ ಮುನ್ನವೇ ನೀಟ್‌ ಪರೀಕ್ಷೆಯಿಂದ ತಮಿಳುನಾಡಿಗೆ ರಿಯಾಯಿತಿ ಕೇಳುವ ಧೈರ್ಯ ಇದೆಯೇ’ ಎಂದು ಪಳನಿಸ್ವಾಮಿಯನ್ನು ಪ್ರಶ್ನಿಸಿದರು.

ಇದಕ್ಕೆ ಉತ್ತರಿಸಿದ ಪಳನಿಸ್ವಾಮಿ, ‘ನೀಟ್‌ ವಿಚಾರವು ನ್ಯಾಯಾಲಯದ ಅಧೀನದಲ್ಲಿದೆ. ಸುಪ್ರೀಂಕೋರ್ಟ್‌ ನೀಡುವ ತೀರ್ಪಿಗೆ ಎಲ್ಲರೂ ಬದ್ಧರಾಗಿರಬೇಕು’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.