ADVERTISEMENT

ನೀಟ್‌: ಪರಿಶಿಷ್ಟ ಜಾತಿ ಆಕಾಂಕ್ಷಿಗೆ ಕೃಪಾಂಕ ನೀಡಲು ಹೈಕೋರ್ಟ್ ಸೂಚನೆ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2022, 14:12 IST
Last Updated 21 ಅಕ್ಟೋಬರ್ 2022, 14:12 IST

ಚೆನ್ನೈ : ಎಂಬಿಬಿಎಸ್‌ ಕೋರ್ಸ್‌ಗೆ ಪ್ರವೇಶ ಪಡೆಯಲು ವಿಫಲವಾಗಿದ್ದಪರಿಶಿಷ್ಟ ಜಾತಿಯ ಆಕಾಂಕ್ಷಿಯೊಬ್ಬರಿಗೆ, ನಿಗದಿತ ಪರೀಕ್ಷೆಯಲ್ಲಿ ತಪ್ಪು ಪ್ರಶ್ನೆ ನೀಡಿದ್ದಕ್ಕಾಗಿ 4 ಕೃಪಾಂಕವನ್ನು ನೀಡಬೇಕು ಎಂದು ಮದ್ರಾಸ್‌ ಹೈಕೋರ್ಟ್‌ ಶುಕ್ರವಾರ ಆದೇಶಿಸಿದೆ.

ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ನಡೆಸಿದ್ದ ಪರೀಕ್ಷೆಯಲ್ಲಿ ಪ್ರಶ್ನೆ ಸಂಖ್ಯೆ 97ಕ್ಕೆ ನೀಡಿದ್ದ ಎಲ್ಲ ಉತ್ತರಗಳು ತಪ್ಪಾಗಿದ್ದವು. 1 ಅಂಕ ಕಡಿತವಾಗುವ ಆತಂಕದಿಂದ ಉತ್ತರಿಸಿರಲಿಲ್ಲ. ಆದಾಗ್ಯೂ, ಅವರು 720 ಕ್ಕೆ 92 ಅಂಕ ಪಡೆದುಕೊಂಡಿದ್ದರು. ಪರಿಶಿಷ್ಟ ಜಾತಿ ವರ್ಗಕ್ಕೆ ಕಟ್-ಆಫ್ ಅಂಕ 93ಕ್ಕೆ ನಿಂತಿತ್ತು. ಒಂದು ಅಂಕ ಕೊರತೆಯಿಂದ ಅಭ್ಯರ್ಥಿ ಎಂಬಿಬಿಎಸ್‌ ಕೋರ್ಸ್‌ಗೆ ಪ್ರವೇಶ ಪಡೆಯಲು ವಿಫಲರಾಗಿದ್ದರು.

ಈ ಸಂಬಂಧ ಅಭ್ಯರ್ಥಿ ಟಿ.ಉದಯಕುಮಾರ್‌ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಟಿ.ರಾಜಾ ಮತ್ತು ನ್ಯಾಯಮೂರ್ತಿ ಡಿ.ಕೃಷ್ಣಕುಮಾರ್ ಅವರಿದ್ದ ಪೀಠವು, ಇದನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ ಕೃಪಾಂಕ ನೀಡಲು ಆದೇಶಿಸಿತು.

ADVERTISEMENT

ವಿಳಂಬ ಮಾಡದೇ ಮೇಲ್ಮನವಿ ಸಲ್ಲಿಸಿದ್ದಾರೆ ಎಂಬ ಹಿನ್ನೆಲೆಯಲ್ಲಿ ಅರ್ಜಿದಾರರಿಗೆ ಸೀಮಿತವಾಗಿ ಕೃಪಾಂಕ ನೀಡಬೇಕು ಎಂದು ಪೀಠ ಇದೇ ಸಂದರ್ಭದಲ್ಲಿ ಸ್ಪಷ್ಟಪಡಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.