ನವದೆಹಲಿ: ವೈದ್ಯಕೀಯ ಸ್ನಾತಕೋತ್ತರ ಕೋರ್ಸ್‌ಗಳ ಪ್ರವೇಶಕ್ಕಾಗಿ ನಡೆಯುವ ಪ್ರಸಕ್ತ ಸಾಲಿನ ಪರೀಕ್ಷೆ ‘ನೀಟ್–ಪಿಜಿ’ಯನ್ನು ಜೂನ್ 15ರಂದು ಒಂದೇ ಪಾಳಿಯಲ್ಲಿ ನಡೆಸುವಂತೆ ಸುಪ್ರೀಂ ಕೋರ್ಟ್ ಶುಕ್ರವಾರ ಮಹತ್ವದ ಆದೇಶ ನೀಡಿದೆ.
‘ಪರೀಕ್ಷೆಯನ್ನು ಎರಡು ಪಾಳಿಯಲ್ಲಿ ನಡೆಸುವುದು ಸ್ವೇಚ್ಛೆಗೆ ಆಸ್ಪದ ನೀಡುತ್ತದೆ. ಹೀಗಾಗಿ, ಅದನ್ನು ಒಂದೇ ಪಾಳಿಯಲ್ಲಿ ನಡೆಸಬೇಕು’ ಎಂದು ನ್ಯಾಯಮೂರ್ತಿ ವಿಕ್ರಮನಾಥ್ ನೇತೃತ್ವದ ತ್ರಿಸದಸ್ಯ ಪೀಠ ನಿರ್ದೇಶಿಸಿದೆ.
‘ಪರೀಕ್ಷೆಯನ್ನುಒಂದೇ ಪಾಳಿಯಲ್ಲಿ ನಡೆಸಬೇಕು ಹಾಗೂ ಅದು ಸಂಪೂರ್ಣ ಪಾರದರ್ಶಕವಾಗಿರುವುದನ್ನು ಖಾತ್ರಿಪಡಿಸಬೇಕು’ ಎಂದು ರಾಷ್ಟ್ರೀಯ ವೈದ್ಯಕೀಯ ವಿಜ್ಞಾನಗಳ ಪರೀಕ್ಷೆ ಮಂಡಳಿಗೆ (ಎನ್‌ಬಿಇಎಂಎಸ್) ಪೀಠವು ಸೂಚಿಸಿದೆ.
ನ್ಯಾಯಮೂರ್ತಿಗಳಾದ ಸಂಜಯಕುಮಾರ್ ಹಾಗೂ ಎನ್.ವಿ.ಅಂಜಾರಿಯಾ ಅವರೂ ಈ ಪೀಠದಲ್ಲಿದ್ದಾರೆ.
‘ನೀಟ್–ಪಿಜಿ 2025’ ಅನ್ನು ಎರಡು ಪಾಳಿಗಳಲ್ಲಿ ಸಂಘಟಿಸುವ ಮಂಡಳಿಯ ನಿರ್ಧಾರ ಪ್ರಶ್ನಿಸಿ ಅದಿತಿ ಹಾಗೂ ಇತರರು ಸಲ್ಲಿಸಿರುವ ಅರ್ಜಿಗಳ ವಿಚಾರಣೆ ನಡೆಸಿ, ಪೀಠ ಈ ಆದೇಶ ನೀಡಿದೆ.
‘ಯಾವುದೇ ಎರಡು ಪ್ರಶ್ನೆಪತ್ರಿಕೆಗಳು ಒಂದೇ ಮಟ್ಟದಲ್ಲಿ ಕಠಿಣವಾಗಿ ಇರುವುದಿಲ್ಲ ಅಥವಾ ಸರಳವೂ ಇರುವುದಿಲ್ಲ’ ಎಂದು ಪೀಠ ಹೇಳಿದೆ.
‘ಕಳೆದ ವರ್ಷ ಪರೀಕ್ಷೆಯನ್ನು ಎರಡು ಪಾಳಿಯಲ್ಲಿ ನಡೆಸಲಾಗಿತ್ತು ಹಾಗೂ ಅಂಕಗಳ ಸಾಮಾನ್ಯೀಕರಣ ಪ್ರಕ್ರಿಯೆಗೂ ಅವಕಾಶ ನೀಡಲಾಗಿತ್ತು. ಅಸಾಧಾರಣ ಪ್ರಕರಣಗಳಲ್ಲಿ ಮಾತ್ರ ಅಂಕಗಳ ಸಾಮಾನ್ಯೀಕರಣ ಪ್ರಕ್ರಿಯೆ ಅನುಸರಿಸಬಹದೇ ಹೊರತು ವರ್ಷ–ವರ್ಷವೂ ಇದು ಸಾಧ್ಯವಿಲ್ಲ. ಹೀಗಾಗಿ, ಪರೀಕ್ಷೆಯನ್ನು ಒಂದೇ ಪಾಳಿಯಲ್ಲಿ ನಡೆಸಲು ಮಂಡಳಿ ಪರಿಗಣಿಸಬೇಕಿತ್ತು’ ಎಂದು ಪೀಠ ಹೇಳಿದೆ.
ಅರ್ಜಿದಾರರ ಪರ ವಕೀಲರಾದ ಸುಕೃತಿ ಭಟ್ನಾಗರ್, ತನ್ವಿ ದುಬೆ ಹಾಜರಿದ್ದರು.
‘ಸುಪ್ರೀಂ’ ಆದೇಶದಲ್ಲಿನ ಪ್ರಮುಖ ಅಂಶಗಳು
242678 ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದು ಪ್ರವೇಶ ಪರೀಕ್ಷೆಯು ದೇಶದಾದ್ಯಂತ ನಡೆಯಲಿದೆಯೇ ಹೊರತು ಒಂದೇ ಪರೀಕ್ಷಾ ಕೇಂದ್ರದಲ್ಲಿ ಅಲ್ಲ
ತಂತ್ರಜ್ಞಾನ ಕ್ಷೇತ್ರದಲ್ಲಿನ ಪ್ರಗತಿಯನ್ನು ಗಣನೆಗೆ ತೆಗೆದುಕೊಂಡಲ್ಲಿ ಅಗತ್ಯಕ್ಕೆ ತಕ್ಕಷ್ಟು ಪರೀಕ್ಷಾ ಕೇಂದ್ರಗಳನ್ನು ಗುರುತಿಸಲು ಮಂಡಳಿಗೆ ಸಾಧ್ಯವಾಗಿಲ್ಲ ಎಂಬುದನ್ನು ಒಪ್ಪಲು ಸಾಧ್ಯವಿಲ್ಲ
‘ನೀಟ್–ಪಿಜಿ’ ಜೂನ್ 15ರಂದು ನಿಗದಿಯಾಗಿದೆ. ಒಂದೇ ಪಾಳಿಯಲ್ಲಿ ನಡೆಸುವುದಕ್ಕೆ ಅಗತ್ಯವಿರುವ ಹೆಚ್ಚುವರಿ ಪರೀಕ್ಷಾ ಕೇಂದ್ರಗಳನ್ನು ಗುರುತಿಸಿ ಸಿದ್ಧತೆ ಮಾಡಿಕೊಳ್ಳಲು ಎರಡು ವಾರಗಳಿಗೂ ಹೆಚ್ಚು ಸಮಯ ಇದೆ
ಜೂನ್ 15ರ ಒಳಗಾಗಿ ಅಗತ್ಯಕ್ಕೆ ತಕ್ಕಷ್ಟು ಪರೀಕ್ಷಾ ಕೇಂದ್ರಗಳನ್ನು ಗುರುತಿಸಿ ಸಿದ್ಧತೆ ಮಾಡಿಕೊಳ್ಳಲು ಸಾಧ್ಯವಾಗದಿದ್ದಲ್ಲಿ ಸಮಯ ವಿಸ್ತರಣೆ ಕೋರಿ ಮಂಡಳಿ ಅರ್ಜಿ ಸಲ್ಲಿಸಿದರೆ ಪರಿಗಣಿಸಲಾಗುವುದು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.