
ನವದೆಹಲಿ: ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (ಎನ್‌ಇಇಟಿ)– ಸ್ನಾತಕೋತ್ತರ (ಪಿಜಿ) ಪರೀಕ್ಷೆಗಳಿಗೆ ಕೀ–ಉತ್ತರಗಳನ್ನು ಪ್ರಕಟಿಸುವ ಬಗ್ಗೆ ತನ್ನ ನೀತಿಯನ್ನು ಬಹಿರಂಗಪಡಿಸುವಂತೆ ಸುಪ್ರೀಂ ಕೋರ್ಟ್ ರಾಷ್ಟ್ರೀಯ ಪರೀಕ್ಷಾ ಮಂಡಳಿಗೆ (ಎನ್‌ಬಿಇ) ಶುಕ್ರವಾರ ನಿರ್ದೇಶನ ನೀಡಿದೆ.
ನ್ಯಾಯಮೂರ್ತಿಗಳಾದ ಪಿ.ಎಸ್.ನರಸಿಂಹ ಮತ್ತು ವಿಪುಲ್ ಪಾಂಚೋಲಿ ಅವರ ಪೀಠವು, ಪ್ರಮಾಣಪತ್ರ ಸಲ್ಲಿಸಿ ತನ್ನ ನಿಲುವನ್ನು ಸ್ಪಷ್ಟಪಡಿಸುವಂತೆ ಎನ್‌ಬಿಇ ಪರ ವಕೀಲರಿಗೆ ಸೂಚಿಸಿದೆ.
ನೀಟ್–ಪಿಜಿ ಪರೀಕ್ಷೆಗಳಿಗೆ ಸಂಬಂಧಿಸಿದಂತೆ ವಿವಿಧ ಸಮಸ್ಯೆಗಳ ಕುರಿತು ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನಡೆಸುತ್ತಿದೆ. ಇದರಲ್ಲಿ, ಪಾರದರ್ಶಕತೆ ಕಾಯ್ದುಕೊಳ್ಳಲು ಕೀ–ಉತ್ತರಗಳನ್ನು ಬಹಿರಂಗಪಡಿಸುವುದೂ ಸೇರಿದೆ.
ವಿಚಾರಣೆಯ ಸಮಯದಲ್ಲಿ ಎನ್‌ಬಿಇ ಪರ ವಕೀಲರು, ‘ಪ್ರಶ್ನೆಪತ್ರಿಕೆಗಳ ಕೀ–ಉತ್ತರಗಳನ್ನು ಪಡೆಯುವ ಉದ್ದೇಶದಿಂದ ಕೋಚಿಂಗ್ ಸಂಸ್ಥೆಗಳು ಕೋರ್ಟ್‌ಗೆ ಅರ್ಜಿಗಳನ್ನು ಸಲ್ಲಿಸಿವೆ. ಇದು ಪರೀಕ್ಷೆಯ ಗುಣಮಟ್ಟಕ್ಕೆ ಧಕ್ಕೆ ತರುತ್ತದೆ’ ಎಂದು ವಾದಿಸಿದರು.
ಸೆಪ್ಟೆಂಬರ್ 26ರಂದು ನ್ಯಾಯಮೂರ್ತಿಗಳಾದ ಜೆ.ಬಿ. ಪಾರ್ದಿವಾಲಾ ಮತ್ತು ಕೆ.ವಿ. ವಿಶ್ವನಾಥನ್ ಅವರನ್ನೊಳಗೊಂಡ ಪೀಠವು, ನೀಟ್–ಪಿಜಿ 2025ರ ಕೀ ಉತ್ತರಗಳನ್ನು ಪ್ರಕಟಿಸುವಂತೆ ಕೋರಿ ಸಲ್ಲಿಸಲಾದ ಅರ್ಜಿಗಳ ಕುರಿತು ಕೇಂದ್ರ ಮತ್ತು ರಾಷ್ಟ್ರೀಯ ವೈದ್ಯಕೀಯ ವಿಜ್ಞಾನಗಳ ಪರೀಕ್ಷೆ ಮಂಡಳಿಗೆ ನೋಟಿಸ್ ಜಾರಿ ಮಾಡಿತ್ತು.
ಕೀ–ಉತ್ತರಗಳ ಪ್ರಕಟಣೆ ಸೇರಿದಂತೆ ನೀಟ್–ಪಿಜಿ ಪರೀಕ್ಷೆಯಲ್ಲಿ ಹೆಚ್ಚಿನ ಪಾರದರ್ಶಕತೆಯನ್ನು ಖಚಿತಪಡಿಸಿಕೊಳ್ಳಲು ಕ್ರಮ ಕೈಗೊಳ್ಳಬೇಕೆಂದು ಕೋರಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆಯನ್ನು ಕೋರ್ಟ್ ನಡೆಸುತ್ತಿದೆ.
ಅಂಕಗಳು, ಕೀ–ಉತ್ತರಗಳ ಪ್ರಕಟಣೆ ಮತ್ತು ಸೂಕ್ತವಾದ ಪರೀಕ್ಷಾ ಸೂತ್ರಗಳನ್ನು ರೂಪಿಸಲು ಸುಪ್ರೀಂ ಕೋರ್ಟ್ ಏಪ್ರಿಲ್ 29ರಂದು ನಿರ್ದೇಶಿಸಿತ್ತು.