ADVERTISEMENT

ನರೇಂದರ್‌ ಸರೆಂಡರ್‌: ರಾಹುಲ್‌ ಹೇಳಿಕೆಗೆ ಬಿಜೆಪಿ ಖಂಡನೆ, ಕಾಂಗ್ರೆಸ್‌ ಸಮರ್ಥನೆ

ನೆಹರೂ– ಗಾಂಧಿ ಕುಟುಂಬದ್ದು ಶರಣಾಗುವ ಇತಿಹಾಸ: ಬಿಜೆಪಿ | ಬಿಜೆಪಿ– ಆರ್‌ಎಸ್‌ಎಸ್‌ನದ್ದು ಹೇಡಿತನದ ಇತಿಹಾಸ: ಕಾಂಗ್ರೆಸ್‌

ಪಿಟಿಐ
Published 4 ಜೂನ್ 2025, 15:44 IST
Last Updated 4 ಜೂನ್ 2025, 15:44 IST
   

ನವದೆಹಲಿ: ಭಾರತ ಮತ್ತು ಪಾಕಿಸ್ತಾನ ನಡುವಿನ ಸೇನಾ ಸಂಘರ್ಷದ ವೇಳೆ ಅಮೆರಿಕದಿಂದ ದೂರವಾಣಿ ಕರೆ ಬಂದ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಅವರು ಶರಣಾದರು (ನರೇಂದರ್‌ ಸರೆಂಡರ್‌) ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಮಂಗಳವಾರ ನೀಡಿದ್ದ ಹೇಳಿಕೆಯನ್ನು ವಿರೋಧಿಸಿರುವ ಬಿಜೆಪಿ ನಾಯಕರು ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಇನ್ನೊಂದೆಡೆ ರಾಹುಲ್‌ ಹೇಳಿಕೆಯನ್ನು ಸಮರ್ಥಿಸಿಕೊಂಡಿರುವ ಕಾಂಗ್ರೆಸ್‌, ಬಿಜೆಪಿ ವಿರುದ್ಧ ಟೀಕೆಗಳನ್ನು ಮಾಡಿದೆ.

ಬಿಜೆಪಿ ರಾಷ್ಟ್ರೀಯ ವಕ್ತಾರ ಸುಧಾಂಶು ತ್ರಿವೇದಿ ಮತ್ತು ಕಾಂಗ್ರೆಸ್‌ನ ಮಾಧ್ಯಮ ಮತ್ತು ಪ್ರಚಾರ ವಿಭಾಗದ ಮುಖ್ಯಸ್ಥ ಪವನ್‌ ಖೇರಾ ಅವರು ಬುಧವಾರ ಪ್ರತ್ಯೇಕವಾಗಿ ಸುದ್ದಿಗೋಷ್ಠಿ ನಡೆಸಿ ವಾಕ್‌ ಸಮರ ನಡೆಸಿದರು. ಅದರ ಪ್ರಮುಖಾಂಶಗಳು ಇಲ್ಲಿವೆ...

ADVERTISEMENT

ಬಿಜೆಪಿ ವಾಗ್ದಾಳಿ

  • ‘ಮೋದಿ ಶರಣಾಗಿದ್ದಾರೆ’ ಎಂದು ಹೇಳುವ ಮೂಲಕ ರಾಹುಲ್‌ ಗಾಂಧಿ ದೇಶದ ಸಶಸ್ತ್ರ ಪಡೆಗಳನ್ನು ಅವಮಾನಿಸಿದ್ದಾರೆ. ಈ ಮೂಲಕ ಅವರು ‘ಆಪರೇಷನ್‌ ಸಿಂಧೂರ’ದ ಯಶಸ್ಸನ್ನು ದುರ್ಬಲಗೊಳಿಸಿರುವುದರ ಜತೆಗೆ ನೆರೆಯ ಪಾಕಿಸ್ತಾನವೂ ಮಾಡದ ಆರೋಪಗಳನ್ನು ಮಾಡಿದ್ದಾರೆ.

  • ರಾಹುಲ್‌ ಅವರ ಈ ಟೀಕೆಗಳು ಅವರ ಅನಾರೋಗ್ಯಕರ ಮತ್ತು ಅಪಾಯಕಾರಿ ಮನಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ. ಅವರು ಪಾಕಿಸ್ತಾನದ ಸೇನಾ ಮುಖ್ಯಸ್ಥ ಅಲ್ಲಿನ ಪ್ರಧಾನಿ ಮತ್ತು ಭಯೋತ್ಪಾದಕ ಸೂತ್ರಧಾರರನ್ನೂ ಮೀರಿಸಿದ್ದಾರೆ.

  • ಭಾರತದ ವಿಭಜನೆ ಬಳಿಕ ಚೀನಾ ಮತ್ತು ಪಾಕಿಸ್ತಾನಗಳು ಭಾರತದ ಭೂ ಪ್ರದೇಶದ ಕೆಲವು ಭಾಗಗಗಳನ್ನು ಆಕ್ರಮಿಸಿಕೊಂಡಿವೆ. ಇತಿಹಾಸವು ನೆಹರೂ– ಗಾಂಧಿ ಕುಟುಂಬದ ಶರಣಾಗತಿಗಳಿಂದಲೇ ತುಂಬಿದೆ. ಆದರೆ ಪ್ರಧಾನಿ ಮೋದಿ ಅವರು ‘ಭಾರತ ಮಾತೆಯ ಸಿಂಹ’.

  • ರಾಹುಲ್‌ ಗಾಂಧಿ ಮತ್ತು ಕಾಂಗ್ರೆಸ್‌ ಶರಣಾಗತಿಯ ಇತಿಹಾಸವನ್ನು ಹೊಂದಿರಬಹುದು. ಆದರೆ ಭಾರತ ಯಾರ ಮುಂದೆಯೂ ಶರಣಾಗುವುದಿಲ್ಲ.

  • ವಿರೋಧ ಪಕ್ಷಗಳರ ಮೈತ್ರಿಯಲ್ಲಿ ‘ಇಂಡಿಯಾ’ ಹೆಸರಿರಬಹುದು ಆದರೆ ಅವರ ಹೃದಯದಲ್ಲಿ ಇರುವುದು ಪಾಕಿಸ್ತಾನ.

  • ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಇತ್ತೀಚೆಗೆ ಪಿತೂರಿ ಸಿದ್ಧಾಂತದ ಕುರಿತು ತಮ್ಮ ಸಾಮಾಜಿಕ ಜಾಲತಾಣ ‘ಟ್ರೂಥ್‌ ಸೋಷಿಯಲ್‌’ನಲ್ಲಿ ಪೋಸ್ಟ್‌ ಮಾಡಿದ್ದರು. ಅದರಲ್ಲಿ ಅವರು ‘ಹಿಂದಿನ ಅಧ್ಯಕ್ಷರಾಗಿದ್ದ ಜೋ ಬೈಡನ್‌ ಅವರನ್ನು 2020ರಲ್ಲೇ ಕೊಲ್ಲಲಾಗಿತ್ತು. ಅವರ ಸ್ಥಾನದಲ್ಲಿ ರೋಬೋಟಿಕ್‌ ಕ್ಲೋನ್‌ ಅನ್ನು ಬಳಸಲಾಯಿತು ಎಂದು ಹೇಳಿದ್ದರು. ಹೀಗೆಲ್ಲ ಹೇಳುವ ಟ್ರಂಪ್‌ ಅವರನ್ನು ಯಾರಿಂದಲಾದರೂ ನಂಬಲು ಸಾಧ್ಯವೇ. ಅಮೆರಿಕ ಸರ್ಕಾರ ಸಹ ಇದಕ್ಕೆ ಸ್ಪಷ್ಟನೆ ನೀಡಬೇಕು.

  • ಹೀಗೆಲ್ಲ ಹೇಳಿಕೆಗಳನ್ನು ನೀಡುವ ಟ್ರಂಪ್‌ ಅವರನ್ನು ರಾಹುಲ್‌ ಗಾಂಧಿ ನಂಬುತ್ತಾರೆಯೇ ಎಂಬುದನ್ನೂ ಸ್ಪಷ್ಟಪಡಿಬೇಕು. ಸೇನಾ ಸಂಘರ್ಷ ಶಮನಕ್ಕೆ ಯಾರ ಮಧ್ಯಸ್ಥಿಕೆಯೂ ಇರಲಿಲ್ಲ ಎಂಬುದಾಗಿ ಈಗಾಗಲೇ ಭಾರತದ ಸಶಸ್ತ್ರ ಪಡೆಗಳು ಮತ್ತು ವಿದೇಶಾಂಗ ವ್ಯವಹಾರಗಳ ಸಚಿವರು ಹಲವು ಭಾರಿ ಸ್ಪಷ್ಟಪಡಿಸಿದ್ದಾರೆ.

  • ದೇಶದ ಸಶಸ್ತ್ರ ಪಡೆಗಳ ಶೌರ್ಯವನ್ನು ಕುಗ್ಗಿಸುವ ರೀತಿ ಹೇಳಿಕೆಗಳನ್ನು ನೀಡುತ್ತಿರುವ ರಾಹುಲ್‌ ಗಾಂಧಿ ಅವರು ‘ರಾಹುಲ್‌ ಮುನಿರ್‌’ ಮತ್ತು ‘ರಾಹುಲ್ ಶರೀಫ್‌’ ಆಗಿದ್ದಾರೆ. ಕಾಂಗ್ರೆಸ್‌ನವರ ಹೆಸರಿನಲ್ಲಷ್ಟೇ ಭಾರತ ಇದೆ ಆದರೆ ಹೃದಯದಲ್ಲಿ ಪಾಕಿಸ್ತಾನ ಇದೆ.

ಕಾಂಗ್ರೆಸ್‌ ಪ್ರತಿ ವಾಗ್ದಾಳಿ

  • ನರೇಂದ್ರ ಮೋದಿ ಎಂದರೆ ಭಾರತ ಮತ್ತು ಭಾರತ ಎಂದರೆ ನರೇಂದ್ರ ಮೋದಿ ಎಂಬುದು ಬಿಜೆಪಿಯ ತಪ್ಪು ತಿಳುವಳಿಕೆ. ಮೋದಿ ಅವರು ಪ್ರಧಾನಿಯಾಗಿ ಚತುರತೆಯಿಂದ ಮತ್ತು ‘ವಿಶ್ವಗುರು’ವಾಗಿ ಹೇಗೆ ರಾಷ್ಟ್ರೀಯ ಹಿತಾಸಕ್ತಿ ವಿಚಾರಗಳಲ್ಲಿ ಪದೇ ಪದೇ ಶರಣಾಗಿದ್ದಾರೆ ಎಂಬುದನ್ನು ರಾಹುಲ್‌ ಅವರ ‘ನರೇಂದರ್‌ ಸರೆಂಡರ್‌’ ಹೇಳಿಕೆ ಒಳಗೊಂಡಿದೆ.

  • ಬಿಜೆಪಿ ಮತ್ತು ಆರ್‌ಎಸ್‌ಎಸ್‌ ಜನರ ಇತಿಹಾಸವೇ ಹೇಡಿತನದಿಂದ ಕೂಡಿದೆ.

  • ಶೌರ್ಯದಿಂದ ಹೋರಾಡಿದ ಭಾರತೀಯ ಸೇನೆಯು ಪಾಕಿಸ್ತಾನವವನ್ನು ಮಂಡಿಯೂರುವಂತೆ ಮಾಡಿತ್ತು. ಆದರೆ ಟ್ರಂಪ್‌ ಕರೆ ಬಂದ ಕೂಡಲೇ ಮೋದಿ ಶರಣಾದರು. ‘ವ್ಯಾಪಾರದ ವಿಷಯವನ್ನು ಪ್ರಸ್ತಾಪಿಸಿ ಕದನ ವಿರಾಮ ಮಾಡಿಸಿದ್ದೇನೆ’ ಎಂದು ಟ್ರಂಪ್‌ ಈಗಾಗಲೇ ಹಲವು ಸಾರಿ ಹೇಳಿದ್ದಾರೆ. ಇದಕ್ಕೆ ಮೋದಿ ಕಡೆಯಿಂದ ಇಲ್ಲಿಯವರೆಗೂ ಉತ್ತರ ಬಂದಿಲ್ಲ. ಅವರು ಉತ್ತರಿಸುವುದೂ ಇಲ್ಲ. ಏಕೆಂದರೆ ಅವರ ಕೆಲಸವೇ ಶರಣಾಗುವುದಾಗಿದೆ. 

  • ನರೇಂದ್ರ ಮೋದಿ ಅವರು ದೇಶದ ಪ್ರಧಾನಿ ಆಗಿರಬಹುದು. ಆದರೇ ದೇಶವೇ ಪ್ರಧಾನಿಯಲ್ಲ. ಪ್ರಧಾನಿಯಾದವರು ದೇಶದ ಸೇವಕರು. ನಮ್ಮ ದೇಶಕ್ಕೆ ಜಂಬೂದ್ವೀಪ ಹಿಂದೂಸ್ತಾನ ಭಾರತ ಇಂಡಿಯಾ ಎಂದೆಲ್ಲ ಹೆಸರುಗಳಿವೆಯೇ ಹೊರತು ನರೇಂದ್ರ ಮೋದಿ ಎಂಬ ಹೆಸರಿಲ್ಲ.

  • 11 ವರ್ಷಗಳಲ್ಲಿ ಪ್ರತಿ ಬಾರಿಯೂ ಮೋದಿ ಶರಣಾಗಿದ್ದಾರೆ. ಕಪ್ಪು ಹಣವನ್ನು ಹಿಂದಕ್ಕೆ ತರುವಲ್ಲಿ ನಿರುದ್ಯೋಗ ಸಮಸ್ಯೆ ನಿವಾರಿಸುವಲ್ಲಿ ರೈತರ ಆದಾಯ ದುಪ್ಪಟ್ಟು ಹೆಚ್ಚಿಸುವ ವಿಷಯಗಳಲ್ಲಿ ಮೋದಿ ಶರಣಾಗಿದ್ದಾರೆ.

  • ಅಲ್ಲದೆ ಚೀನಾಗೆ ದಿಟ್ಟ ಉತ್ತರ ನೀಡುವಲ್ಲಿಯೂ ಮೋದಿ ವಿಫಲರಾಗಿ ಶರಣಾಗಿದ್ದಾರೆ. ಚೀನಾಕ್ಕೆ ಸಡ್ಡು ಹೊಡೆಯಬೇಕೆಂದಿದ್ದರೆ ಅವರೇಕೆ ಇಲ್ಲಿಯವರೆಗೂ ಚೀನಾದಿಂದ ಸರಕುಗಳನ್ನು ಖರೀದಿಸುವುದಿಲ್ಲ ಎಂಬ ನೀತಿಯನ್ನು ತಂದಿಲ್ಲ.

ರಾಹುಲ್‌ ಗಾಂಧಿ ಅವರ ಹೇಳಿಕೆಯು ದೇಶದ್ರೋಹಕ್ಕೆ ಕಡಿಮೆಯೇನಲ್ಲ. ಶರಣಾಗತಿ ಎಂಬುದು ಕಾಂಗ್ರೆಸ್‌ ಪಕ್ಷದ ನಿಘಂಟು ಮತ್ತು ಡಿಎನ್‌ಎನಲ್ಲಿಯೇ ಇದೆ. ನೀವು ಭಯೋತ್ಪಾದನೆಗೆ ಶರಣಾಗಿದ್ದೀರಿ ಶರ್ಮ್‌–ಅಲ್‌–ಶೇಖ್‌ಗೆ ಶರಣಾಗಿದ್ದೀರಿ 1971ರ ಯುದ್ಧ ಗೆದ್ದ ನಂತರ ಶಿಮ್ಲಾದ ಮೇಜಿನ ಬಳಿ ಶರಣಾಗಿದ್ದೀರಿ ಸಿಂಧೂ ಜಲ ಒಪ್ಪಂದದಲ್ಲಿ ಶರಣಾಗಿದ್ದೀರಿ ದೇಶದ ಸ್ವಾತಂತ್ರ್ಯದ ಸಮಯದಲ್ಲಿ ಮುಸ್ಲಿಂ ಲೀಗ್‌ಗೆ ಶರಣಾಗಿದ್ದೀರಿ
– ಜೆ.ಪಿ. ನಡ್ಡಾ ಬಿಜೆಪಿ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.