ADVERTISEMENT

ಬಿಜೆಪಿ–ಟಿಎಂಸಿ ನಡುವೆ ‘ನೇತಾಜಿ’ ರಾಜಕೀಯ

ಪಿಟಿಐ
Published 23 ಜನವರಿ 2026, 16:06 IST
Last Updated 23 ಜನವರಿ 2026, 16:06 IST
ನೇತಾಜಿ ಸುಭಾಷ್‌ಚಂದ್ರ ಬೋಸ್‌ ಅವರ ಜನ್ಮದಿನದ ಅಂಗವಾಗಿ ಕೋಲ್ಕತ್ತದಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಅವರ ಪ್ರತಿಮೆಗೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪುಷ್ಪನಮನ ಸಲ್ಲಿಸಿದರು–ಪಿಟಿಐ ಚಿತ್ರ
ನೇತಾಜಿ ಸುಭಾಷ್‌ಚಂದ್ರ ಬೋಸ್‌ ಅವರ ಜನ್ಮದಿನದ ಅಂಗವಾಗಿ ಕೋಲ್ಕತ್ತದಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಅವರ ಪ್ರತಿಮೆಗೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪುಷ್ಪನಮನ ಸಲ್ಲಿಸಿದರು–ಪಿಟಿಐ ಚಿತ್ರ   

ಕೋಲ್ಕತ್ತ: 2026ರ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೆ ಕೆಲವು ತಿಂಗಳು ಬಾಕಿ ಉಳಿದಿರುವಂತೆಯೇ, ಆಡಳಿತರೂಢ ತೃಣಮೂಲ ಕಾಂಗ್ರೆಸ್‌ ಹಾಗೂ ವಿರೋಧ ಪಕ್ಷ ಬಿಜೆಪಿ ನಡುವೆ ಮಾತಿನ ವಾಗ್ಬಾಣ ಮುಂದುವರಿದಿದೆ. ನೇತಾಜಿ ಸುಭಾಷ್‌ ಚಂದ್ರ ಬೋಸ್‌ ಅವರ ಪರಂಪರೆಯನ್ನು ತಮ್ಮದಾಗಿಸಿಕೊಳ್ಳಲು ಎರಡೂ ಪಕ್ಷಗಳು ಜನ್ಮದಿನಾಚರಣೆಯನ್ನು ಬಳಸಿಕೊಂಡಿವೆ. 

ಸೆಂಟ್ರಲ್‌ ಕೋಲ್ಕತ್ತದಲ್ಲಿ ರಾಜ್ಯ ಸರ್ಕಾರವು ನೇತಾಜಿ ಅವರ ಅಧಿಕೃತ ಜನ್ಮದಿನ ಕಾರ್ಯಕ್ರಮವನ್ನು ಆಯೋಜಿಸಿತ್ತು. ಬಿಜೆಪಿಯು ನಗರದ ದಕ್ಷಿಣ ಭಾಗದಲ್ಲಿ ಪಾದಯಾತ್ರೆ ಹಾಗೂ ರ‍್ಯಾಲಿಗಳನ್ನು ಹಮ್ಮಿಕೊಂಡಿತ್ತು. ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್‌) ನಡುವೆಯೇ, ನೇತಾಜಿ ಅವರ ಹೆಸರು ಹಾಗೂ 129ನೇ ಜನ್ಮದಿನಾಚರಣೆಯು ರಾಜಕೀಯ ದಾಳವಾಗಿ ಬಳಕೆಯಾಯಿತು. 

ಇಲ್ಲಿನ ಕೆಂಪು ರಸ್ತೆಯಲ್ಲಿ (ರೆಡ್‌ ರೋಡ್‌) ನಡೆದ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಕೇಂದ್ರ ಸರ್ಕಾರ ಹಾಗೂ ಚುನಾವಣಾ ಆಯೋಗದ ವಿರುದ್ಧ ಕಿಡಿಕಾರಿದರು. 

ADVERTISEMENT

‘ಒಂದೊಮ್ಮೆ ನೇತಾಜಿ ಬದುಕಿದ್ದರೆ, ಎಸ್‌ಐಆರ್‌ ವಿಚಾರಣೆಗೆ ಕರೆಸಲಾಗುತ್ತಿತ್ತು. ಇದುವೇ ಈಗಿನ ಪರಿಸ್ಥಿತಿಯಾಗಿದೆ’ ಎಂದು ನೇತಾಜಿ ಅವರ ಮೊಮ್ಮಗ ಚಂದ್ರಕುಮಾರ್‌ ಬೋಸ್‌ ಅವರಿಗೆ ನೋಟಿಸ್‌ ನೀಡಿದ್ದನ್ನು ಉಲ್ಲೇಖಿಸಿ ಕಿಡಿಕಾರಿದರು.

ಬಿಜೆಪಿಯ ಹೆಸರನ್ನು ಉಲ್ಲೇಖಿಸದೇ ಕೇಂದ್ರ ಸರ್ಕಾರ ಹಾಗೂ ಚುನಾವಣಾ ಆಯೋಗದ ವಿರುದ್ಧ ಕಿಡಿಕಾರಿದ ಅವರು, ‘ಎಸ್‌ಐಆರ್‌ ನೆಪದಲ್ಲಿ ಸಾಮಾನ್ಯ ನಾಗರಿಕರಲ್ಲಿ ಭಯ ಹುಟ್ಟಿಸಲಾಗಿದೆ. ಆತಂಕಕ್ಕೆ ಒಳಗಾಗಿ ನೂರಾರು  ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಇದು ಮಾನವೀಯತೆ ಹಾಗೂ ಅನಾಗರಿಕತೆಯ ನಡುವಿನ ಯುದ್ಧವಾಗಿದ್ದು, ಪಾಂಡವರು ಹಾಗೂ ಕೌರವರ ನಡುವಿನ ಹೋರಾಟವಾಗಿದೆ’ ಎಂದರು.

ನೇತಾಜಿ ಜನ್ಮದಿನವನ್ನು ರಾಷ್ಟ್ರೀಯ ರಜಾ ದಿನವಾಗಿ ಘೋಷಿಸಬೇಕು ಎಂಬ ಹಳೆಯ ಬೇಡಿಕೆಯನ್ನು ನೆನಪಿಸಿದ ಮಮತಾ, ‘ಕೇಂದ್ರ ಸರ್ಕಾರವು ದೇಶದ ಸ್ವಾತಂತ್ರ್ಯ ಹೋರಾಟಗಾರರಿಗೆ ಅಗೌರವ ತೋರುತ್ತಿದ್ದು, ದೇಶದ ಇತಿಹಾಸವನ್ನು ಪುನಃ ಬರೆಯುವ ಪ್ರಯತ್ನಕ್ಕೆ ಕೈ ಹಾಕಿದೆ’ ಎಂದರು.

ರಾಷ್ಟ್ರೀಯ ನಾಯಕಿ:

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನೇತಾಜಿ ಅವರ ಮೊಮ್ಮಗ ಚಂದ್ರಕುಮಾರ್‌ ಬೋಸ್‌ ಮಮತಾ ಬ್ಯಾನರ್ಜಿ ಅವರನ್ನು ‘ರಾಷ್ಟ್ರೀಯ ನಾಯಕಿ’ ಎಂದು ಬಣ್ಣಿಸಿದರು.

ಚಂದ್ರಕುಮಾರ್‌ ಅವರು 2016ರ ವಿಧಾನಸಭಾ ಚುನಾವಣೆಯಲ್ಲಿ ಭವಾನಿಪುರ ಕ್ಷೇತ್ರದಿಂದ ಮಮತಾ ಅವರ ವಿರುದ್ಧ ಬಿಜೆಪಿಯಿಂದ ಕಣಕ್ಕಿಳಿದಿದ್ದರು. ಬಿಜೆಪಿಯ ಬಂಗಾಳ ಘಟಕದ ಅಧ್ಯಕ್ಷರಾಗಿ ಜವಾಬ್ದಾರಿ ನಿರ್ವಹಿಸಿದ್ದರು.

ಮಮತಾ ಬ್ಯಾನರ್ಜಿ ಅವರು ಬಂಗಾಳದ ಮುಖ್ಯಮಂತ್ರಿ ಎಂದಷ್ಟೇ ಭಾವಿಸಬಾರದು ಅವರು ದೇಶದ ನಾಯಕಿ. ನೇತಾಜಿ ಸಿದ್ಧಾಂತಗಳು ಮಾತ್ರ ದೇಶವನ್ನು ಕಾಪಾಡಲು ಸಾಧ್ಯ
ಚಂದ್ರಕುಮಾರ್‌ ಬೋಸ್‌, ನೇತಾಜಿ ಮೊಮ್ಮಗ

ಬಿಜೆಪಿಯಿಂದ ಪಾದಯಾತ್ರೆ ರ‍್ಯಾಲಿ

ನೇತಾಜಿ ಪರಂಪರೆ ಬೆಂಬಲಿಸುವ ನಿಟ್ಟಿನಲ್ಲಿ ಬಿಜೆಪಿಯು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿತ್ತು. ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ಅವರು ಭವಾನಿಪುರದಲ್ಲಿರುವ ಶ್ಯಾಮ ಪ್ರಸಾದ್‌ ಮುಖರ್ಜಿ ಅವರ ನಿವಾಸದಿಂದ ನೇತಾಜಿ ಅವರ ನಿವಾಸ ಇರುವ ಎಲ್ಗಿನ್‌ ರಸ್ತೆಯವರೆಗೂ ಶುಕ್ರವಾರ ಪಾದಯಾತ್ರೆ ನಡೆಸಿದರು. ‘ನೇತಾಜಿ ಹುಟ್ಟುಹಬ್ಬವನ್ನು ಕೇವಲ ವೇದಿಕೆಗಷ್ಟೇ ಸೀಮಿತಗೊಳಿಸಿದೆ. ಅವರ ಪ್ರತಿಮೆಗೆ ಹಾಕಿದ್ದ ಹಾರವನ್ನು ಕಾರ್ಯಕ್ರಮ ಮುಗಿದ ತಕ್ಷಣವೇ ತೆಗೆದುಹಾಕಲಾಗಿದೆ. ಜನ್ಮದಿನದ ಕಾರ್ಯಕ್ರಮಗಳು ರಾಜಕೀಯ ಅಸಹಿಷ್ಣುತೆಯಿಂದ ಕೂಡಿದೆ’ ಎಂದು ಆರೋಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.