
ಸಾಂದರ್ಭಿಕಚಿತ್ರ
ಕೇಂದ್ರ ಸರ್ಕಾರವು ರೂಪಿಸಿರುವ ನಾಲ್ಕು ಕಾರ್ಮಿಕ ಸಂಹಿತೆಗಳು ಕಾರ್ಮಿಕ ಕಲ್ಯಾಣದ ದೃಷ್ಟಿಯಿಂದ ಮಹತ್ವದ ಪಾತ್ರ ವಹಿಸುವ ನಿರೀಕ್ಷೆ ಮೂಡಿದೆ. ವೇತನ ಸಂಹಿತೆ (2019), ಕೈಗಾರಿಕಾ ಸಂಪರ್ಕ ಸಂಹಿತೆ (2020), ಸಾಮಾಜಿಕ ಭದ್ರತಾ ಸಂಹಿತೆ (2020), ಉದ್ಯೋಗ ಭದ್ರತೆ, ಆರೋಗ್ಯ ಮತ್ತು ಕೆಲಸದ ಸ್ಥಿತಿಗತಿಗಳ ಸಂಹಿತೆ (2020) ಜಾರಿಗೆ ಬಂದಿದ್ದು, ಕಾರ್ಮಿಕರ ಜೀವನ ಮಟ್ಟವನ್ನು ಸುಧಾರಿಸುವ ದಿಸೆಯಲ್ಲಿ ಇವುಗಳನ್ನು ರೂಪಿಸಲಾಗಿದೆ ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ ಪ್ರತಿಪಾದಿಸಿದೆ.
ಇದುವರೆಗೂ ಅಸ್ತಿತ್ವದಲ್ಲಿದ್ದ 29 ಕಾರ್ಮಿಕ ಕಾನೂನುಗಳನ್ನು ಪರಾಮರ್ಶಿಸಿ, ನಿಯಮಾವಳಿಗಳನ್ನು ಆಧುನೀಕರಿಸಿ ಹೊಸ ಸಂಹಿತೆಗಳನ್ನು ರೂಪಿಸಲಾಲಾಗಿದೆ. ಪ್ರಗತಿ ಪಥದಲ್ಲಿ ಸಾಗುತ್ತಿರುವ ದೇಶದ ಉದ್ಯಮ ರಂಗಕ್ಕೆ ತಕ್ಕಂತೆ ಕಾರ್ಮಿಕ ವ್ಯವಸ್ಥೆಯನ್ನು ಸಜ್ಜುಗೊಳಿಸುವ ಆಶಯ ಇವುಗಳ ಹಿಂದಿದೆ ಎಂದು ಕೇಂದ್ರವು ಹೇಳಿದೆ.
ಏನು ಬದಲಾವಣೆ?
ಉದ್ಯೋಗವನ್ನು ಅಧಿಕೃತಗೊಳಿಸುವುದು: ಇದುವರೆಗೆ ನೇಮಕಾತಿ ಪತ್ರವು ಕಡ್ಡಾಯವಾಗಿರಲಿಲ್ಲ. ಹೊಸ ಸಂಹಿತೆಯಲ್ಲಿ ಇದು ಕಡ್ಡಾಯವಾಗಿದ್ದು, ಪಾರದರ್ಶಕತೆ, ಉದ್ಯೋಗ ಭದ್ರತೆ ಮತ್ತು ನಿಶ್ಚಿತ ಉದ್ಯೋಗವನ್ನು ಖಾತ್ರಿಪಡಿಸುತ್ತದೆ
ಸಾಮಾಜಿಕ ಭದ್ರತೆಯ ವ್ಯಾಪ್ತಿ: ಇದುವರೆಗೂ ಸಾಮಾಜಿಕ ಭದ್ರತೆಯ ವ್ಯಾಪ್ತಿಯು ಸೀಮಿತವಾಗಿತ್ತು. ಹೊಸ ಸಂಹಿತೆಯಲ್ಲಿ ಎಲ್ಲ ಕಾರ್ಮಿಕರಿಗೂ (ಗಿಗ್ ಮತ್ತು ಫ್ಲಾಟ್‌ಫಾರ್ಮ್ ಕಾರ್ಮಿಕರು ಸೇರಿದಂತೆ) ಸಾಮಾಜಿಕ ಭದ್ರತೆ ಒದಗಿಸಲಾಗಿದೆ. ಪಿಎಫ್, ಇಎಸ್‌ಐಸಿ, ವಿಮೆ ಮತ್ತು ಇತರ ಸಾಮಾಜಿಕ ಭದ್ರತಾ ಸೌಲಭ್ಯಗಳು ಲಭ್ಯ
ಕನಿಷ್ಠ ವೇತನ: ಇದುವರೆಗೆ ನಿರ್ದಿಷ್ಟ ಉದ್ಯಮ/ಕಾರ್ಮಿಕರಿಗೆ ಮಾತ್ರ ಕನಿಷ್ಠ ವೇತನ ನಿಯಮ ಅನ್ವಯವಾಗುತ್ತಿತ್ತು. ಹೆಚ್ಚಿನವರು ನಿಯಮದಿಂದ ಹೊರಗಿದ್ದರು. ನೂತನ ವೇತನ ಸಂಹಿತೆ 2019ರಂತೆ, ಕನಿಷ್ಠ ಮತ್ತು ಸಕಾಲಿಕ ವೇತನವು ಪ್ರತಿಯೊಬ್ಬ ಕಾರ್ಮಿಕನ ಶಾಸನಬದ್ಧ ಹಕ್ಕಾಗಿದೆ
ಆರೋಗ್ಯ ರಕ್ಷಣೆ: ಇದುವರೆಗಿನ ನಿಯಮಗಳಲ್ಲಿ, ವಾರ್ಷಿಕ ಉಚಿತ ಆರೋಗ್ಯ ತಪಾಸಣೆ ಕಡ್ಡಾಯವಾಗಿರಲಿಲ್ಲ. ಪ್ರಸ್ತುತ ಸಂಹಿತೆಯ ಪ್ರಕಾರ, 40 ವರ್ಷ ದಾಟಿದ ಪ್ರತಿಯೊಬ್ಬ ಕಾರ್ಮಿಕನಿಗೂ ವಾರ್ಷಿಕ ಆರೋಗ್ಯ ತಪಾಸಣೆ ಮಾಡಿಸಬೇಕು
ಮಹಿಳಾ ಕಾರ್ಮಿಕರ ಪಾಲ್ಗೊಳ್ಳುವಿಕೆ: ರಾತ್ರಿ ಪಾಳಿಯಲ್ಲಿ ಮತ್ತು ಕೆಲವು ವಲಯಗಳಲ್ಲಿ ಮಹಿಳಾ ಕಾರ್ಮಿಕರು ಕೆಲಸ ಮಾಡುವುದನ್ನು ನಿರ್ಬಂಧಿಸಲಾಗಿತ್ತು. ಪ್ರಸ್ತುತ ಆ ನಿರ್ಬಂಧವನ್ನು ತೆಗೆದುಹಾಕಲಾಗಿದ್ದು, ಎಲ್ಲ ಪಾಳಿಗಳಲ್ಲಿ ಮತ್ತು ಎಲ್ಲ ವಲಯಗಳಲ್ಲಿ (ಮಹಿಳಾ ಕಾರ್ಮಿಕರ ಒಪ್ಪಿಗೆ ಮತ್ತು ಅಗತ್ಯ ಸುರಕ್ಷತೆಯ ಕ್ರಮಗಳಿಗೆ ಒಳಪಟ್ಟು) ಮಹಿಳೆಯರು ಕೆಲಸ ಮಾಡಲು ಅವಕಾಶ ಕಲ್ಪಿಸಲಾಗಿದೆ. ಮಹಿಳಾ ಕಾರ್ಮಿಕರಿಗೆ ಇದು ಸಮಾನ ಅವಕಾಶಗಳನ್ನು ಕಲ್ಪಿಸುತ್ತದೆ
ಇಎಸ್‌ಐಸಿ: ಇದುವರೆಗೆ ನಿರ್ದಿಷ್ಟ ವಲಯಗಳ ಕಾರ್ಮಿಕರಿಗೆ ಮಾತ್ರ ಇಎಸ್‌ಐಸಿ ಸೌಲಭ್ಯ ಇತ್ತು. ಅದನ್ನು ಬದಲಾಯಿಸಲಾಗಿದ್ದು, ದೇಶದಾದ್ಯಂತ ಎಲ್ಲ ವಲಯಗಳ ಕಾರ್ಮಿಕರಿಗೂ (10 ಕಾರ್ಮಿಕರಿಗಿಂತ ಕಡಿಮೆ ಇದ್ದರೂ) ಸೌಲಭ್ಯ ವಿಸ್ತರಿಸಲಾಗಿದೆ
ಏಕ, ಸರಳೀಕೃತ ವ್ಯವಸ್ಥೆ: ಇದುವರೆಗಿನ ನಿಯಮಗಳಲ್ಲಿ ಹಲವು ನೋಂದಣಿಗಳು, ಹಲವು ಪರವಾನಗಿಗಳು ಅಗತ್ಯವಾಗಿದ್ದವು. ಪ್ರಸ್ತುತ ಸಂಹಿತೆಗಳಲ್ಲಿ ಅದನ್ನು ಸರಳೀಕರಿಸಲಾಗಿದ್ದು, ದೇಶದಾದ್ಯಂತ ಒಂದು ನೋಂದಣಿ, ಒಂದು ಪರವಾನಗಿ ಸಾಕು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.