ADVERTISEMENT

NCERT | ಸಮಾಜ ವಿಜ್ಞಾನ ಪುಸ್ತಕ: ದೆಹಲಿ ಸುಲ್ತಾನರು, ಮೊಘಲರಿಗೆ ಕೊಕ್‌

7ನೇ ತರಗತಿಗೆ ಹೊಸ ಪಠ್ಯ ಪುಸ್ತಕ ಬಿಡುಗಡೆ * ಮಹಾಕುಂಭ ಮೇಳ, ಜ್ಯೋತಿರ್ಲಿಂಗಗಳ ಉಲ್ಲೇಖ

ಪಿಟಿಐ
Published 27 ಏಪ್ರಿಲ್ 2025, 23:30 IST
Last Updated 27 ಏಪ್ರಿಲ್ 2025, 23:30 IST
7ನೇ ತರಗತಿಯ ಹೊಸ ಪಠ್ಯ ಪುಸ್ತಕ
7ನೇ ತರಗತಿಯ ಹೊಸ ಪಠ್ಯ ಪುಸ್ತಕ   

ನವದೆಹಲಿ: ಏಳನೇ ತರಗತಿಯ ಸಮಾಜ ವಿಜ್ಞಾನ ಪಠ್ಯದಲ್ಲಿದ್ದ ದೆಹಲಿ ಸುಲ್ತಾನರು ಮತ್ತು ಮೊಘಲರ ಆಳ್ವಿಕೆ ಕುರಿತ ಪಾಠಗಳನ್ನು ಕೈಬಿಟ್ಟು ಹೊಸ ಪಠ್ಯ ಪುಸ್ತಕವನ್ನು ರಾಷ್ಟ್ರೀಯ ಶಿಕ್ಷಣ ಸಂಶೋಧನಾ ಮತ್ತು ತರಬೇತಿ ಪರಿಷತ್‌ (ಎನ್‌ಸಿಇಆರ್‌ಟಿ) ಬಿಡುಗಡೆ ಮಾಡಿದೆ.

‘ಭೂಮಿ ಹೇಗೆ ಪವಿತ್ರವಾಗುತ್ತದೆ’ (How the Land Becomes Sacred) ಎಂಬ ಹೊಸ ಪಾಠದಲ್ಲಿ ‘ಮಹಾಕುಂಭ’ ಮೇಳದ ಬಗ್ಗೆ ವಿವರಿಸಲಾಗಿದೆ. ಅಲ್ಲದೆ ಕೇಂದ್ರ ಸರ್ಕಾರದ ‘ಬೇಟಿ ಬಚಾವೊ, ಬೇಟಿ ಪಢಾವೊ’ ಸೇರಿದಂತೆ ವಿವಿಧ ಕಾರ್ಯಕ್ರಮಗಳ ಕುರಿತ ಮಾಹಿತಿಯನ್ನು ಹೊಸ ಪಠ್ಯ ಪುಸ್ತಕದಲ್ಲಿ ಸೇರಿಸಲಾಗಿದೆ.

ಹೊಸ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ಮತ್ತು ಶಾಲಾ ಶಿಕ್ಷಣಕ್ಕೆ ಸಂಬಂಧಿಸಿದ ರಾಷ್ಟ್ರೀಯ ಶಿಕ್ಷಣ ಚೌಕಟ್ಟು (ಎನ್‌ಸಿಎಫ್‌ಎಸ್‌ಇ) ಆಧರಿಸಿ ಎನ್‌ಸಿಇಆರ್‌ಟಿ ಕೆಲ ದಿನಗಳ ಹಿಂದೆಯಷ್ಟೇ ಹೊಸ ವಿನ್ಯಾಸವನ್ನು ಒಳಗೊಂಡ ಹೊಸ ಪಠ್ಯವನ್ನು ಬಿಡುಗಡೆ ಮಾಡಿದೆ. ಶಾಲಾ ಶಿಕ್ಷಣದಲ್ಲಿ ಭಾರತೀಯ ಸಂಪ್ರದಾಯ, ತತ್ವಜ್ಞಾನ, ಜ್ಞಾನ ವ್ಯವಸ್ಥೆ ಮತ್ತು ಸ್ಥಳೀಯ ವಿಷಯಗಳಿಗೆ ಆದ್ಯತೆ ನೀಡಬೇಕು ಎಂಬ ಆಶಯವನ್ನು ಈ ಮೂಲಕ ಒತ್ತಿ ಹೇಳಲಾಗಿದೆ.

ADVERTISEMENT

‘ಪ್ರಸ್ತುತ ಪುಸ್ತಕದ ಮೊದಲ ಭಾಗ ಮಾತ್ರ ಬಂದಿದೆ. ಎರಡನೇ ಭಾಗ ಮುಂದಿನ ದಿನಗಳಲ್ಲಿ ಬರಲಿದೆ’ ಎಂದು ಎನ್‌ಸಿಇಆರ್‌ಟಿ ಅಧಿಕಾರಿಗಳು ಪ್ರತಿಕ್ರಿಯಿಸಿದ್ದಾರೆ. ಆದರೆ ಹಿಂದಿನ ಪಠ್ಯದಿಂದ ಕೈಬಿಟ್ಟಿರುವ ಪಾಠಗಳನ್ನು ಎರಡನೇ ಭಾಗ ಒಳಗೊಂಡಿರುತ್ತದೆಯೇ ಎಂಬ ಪ್ರಶ್ನೆಗೆ ಅವರು ಪ್ರತಿಕ್ರಿಯಿಸಲಿಲ್ಲ.

ಕೋವಿಡ್‌–19ರ ಸಾಂಕ್ರಾಮಿಕದ ಸಂದರ್ಭದಲ್ಲಿ, ಗುಲಾಮಿ, ಖಿಲ್ಜಿ, ತುಘಲಕ್‌ ಮತ್ತು ಲೋದಿ ಸಂತತಿಗಳನ್ನು ಒಳಗೊಂಡಂತೆ ದೆಹಲಿ ಸುಲ್ತಾನರು ಮತ್ತು ಮೊಘಲ್‌ ಚಕ್ರವರ್ತಿಗಳ ಸಾಧನೆಗಳ ಕುರಿತ ಮಾಹಿತಿಯನ್ನು ಎನ್‌ಸಿಇಆರ್‌ಟಿ ಕಡಿತಗೊಳಿಸಿತ್ತು. ಆದರೆ ಈಗಿನ ಹೊಸ ಪಠ್ಯ ಪುಸ್ತಕದಲ್ಲಿ ಈ ರಾಜವಂಶಸ್ಥರ ಎಲ್ಲ ಉಲ್ಲೇಖಗಳನ್ನು ತೆಗೆಯಲಾಗಿದೆ. 

ಎನ್‌ಸಿಇಆರ್‌ಟಿ ಪಠ್ಯಪುಸ್ತಕಗಳ ಪರಿಷ್ಕರಣೆಯು ಟೀಕಿಸಿರುವ ವಿರೋಧ ಪಕ್ಷಗಳು, ‘ಕೇಸರೀಕರಣ ಜತೆ ಸಮೀಕರಿಸಿವೆ.

ಹೊಸ ಪಠ್ಯ ಪುಸ್ತಕದಲ್ಲಿ ಏನೇನಿದೆ?

* ‘ಎಕ್ಸ್‌ಪ್ಲೋರಿಂಗ್‌ ಸೊಸೈಟಿ: ಇಂಡಿಯಾ ಅಂಡ್‌ ಬಿಯಾಂಡ್‌’ ಎಂಬ ಶೀರ್ಷಿಕೆಯನ್ನು ಒಳಗೊಂಡಿರುವ ಸಮಾಜ ವಿಜ್ಞಾನ ಪುಸ್ತಕವು ಮಗಧ ಮೌರ್ಯ ಶುಂಗ ಮತ್ತು ಶಾತವಾಹನರನ್ನು ಒಳಗೊಂಡಂತೆ ಪ್ರಾಚೀನ ಕಾಲದ ರಾಜವಂಶಸ್ಥರ ಆಳ್ವಿಕೆ ಕುರಿತ ಪಾಠಗಳನ್ನು ಹೊಂದಿದೆ.

* ‘ಭೂಮಿ ಹೇಗೆ ಪವಿತ್ರವಾಗುತ್ತದೆ’ ಎಂಬ ಹೊಸ ಪಾಠವನ್ನು ಪರಿಚಯಿಸಲಾಗಿದೆ. ಇದರಲ್ಲಿ ಭಾರತ ಮತ್ತು ವಿದೇಶಗಳಲ್ಲಿರುವ ಹಿಂದೂ ಇಸ್ಲಾಂ ಕ್ರೈಸ್ತ ಜೈನ ಭೌಧ ಸಿಖ್‌ ಯಹೂದಿ ಜೂಡಾಯಿಸಂ ಪಾರ್ಸಿ ಧರ್ಮಗಳ ಪವಿತ್ರ ಯಾತ್ರಾ ಕ್ಷೇತ್ರಗಳ ಪರಿಚಯ ನೀಡಲಾಗಿದೆ.

* ‘ಪವಿತ್ರ ಭೂಗೋಳ’ (sacred geography) ಪರಿಕಲ್ಪನೆಯಲ್ಲಿ 12 ಜ್ಯೋತಿರ್ಲಿಂಗಗಳು ಚಾರ್‌ಧಾಮ್‌ ಯಾತ್ರೆ ಮತ್ತು ‘ಶಕ್ತಿ ಪೀಠ‘ಗಳ ಬಗ್ಗೆ ಉಲ್ಲೇಖಿಸಲಾಗಿದೆ. ಈ ಕ್ಷೇತ್ರಗಳ ಬಳಿಯ ನದಿಗಳು ಪರ್ವತಗಳು ಮತ್ತು ಅರಣ್ಯ ಪ್ರದೇಶಗಳ ಬಗ್ಗೆಯೂ ಪ್ರಸ್ತಾಪಿಸಲಾಗಿದೆ. ‘ಭಾರತವು ತೀರ್ಥಕ್ಷೇತ್ರಗಳ ಭೂಮಿಯಾಗಿದ್ದು ಬದರಿನಾಥ ಮತ್ತು ಅಮರನಾಥದ ಹಿಮಾವೃತ ಶಿಖರಗಳಿಂದ ಹಿಡಿದು ದಕ್ಷಿಣದ ತುದಿಯ ಕನ್ಯಾಕುಮಾರಿಯನ್ನು ಒಳಗಿಗೊಂಡಿದೆ’ ಎಂದು ದೇಶದ ಮೊದಲ ಪ್ರಧಾನಿ ಜವಹರಲಾಲ್‌ ನೆಹರೂ ಅವರ ವ್ಯಾಖ್ಯಾನವನ್ನೂ ಪಠ್ಯ ಒಳಗೊಂಡಿದೆ.

* ವರ್ಣ ಮತ್ತು ಜಾತಿ ವ್ಯವಸ್ಥೆಯು ಆರಂಭದಕ್ಕು ಸಾಮಾಜಿಕ ಸ್ಥಿರತೆಯಿಂದ ಕೂಡಿತ್ತು. ಕ್ರಮೇಣ ಕಠಿಣಗೊಳ್ಳುತ್ತಾ ಸಾಗಿತು. ಬ್ರಿಟಿಷರ ಆಳ್ವಿಕೆಯಲ್ಲಿ ಅಸಮಾನತೆ ತೀವ್ರವಾಯಿತು.

* ಈ ವರ್ಷದ ಆರಂಭದಲ್ಲಿ ಪ್ರಯಾಗರಾಜ್‌ನಲ್ಲಿ ನಡೆದ ‘ಮಹಾಕುಂಭ’ ಮೇಳದಲ್ಲಿ ಸುಮಾರು 66 ಕೋಟಿ ಜನರು ಭಾಗವಹಿಸಿದ್ದರ ಕುರಿತ ಪ್ರಸ್ತಾಪವೂ ಇದೆ. ಆದರೆ ಮೇಳದಲ್ಲಿ ಕಾಲ್ತುಳಿತದಿಂದ 30 ಜನರು ಮೃತಪಟ್ಟು ಹಲವು ಮಂದಿ ಗಾಯಗೊಂಡಿದ್ದರ ಬಗ್ಗೆ ಉಲ್ಲೇಖವಿಲ್ಲ.

* ‘ಬೇಟಿ ಬಚಾವೊ ಬೇಟಿ ಪಢಾವೊ’ ಅಟಲ್‌ ಸುರಂಗ ಮಾರ್ಗ ಸೇರಿದಂತೆ ವಿವಿಧ ಯೋಜನೆಗಳ ಕುರಿತ ಮಾಹಿತಿ ನೀಡಲಾಗಿದೆ.

* ಭಾರತ ಸಂವಿಧಾನದ ಕುರಿತ ಪಾಠದಲ್ಲಿ ‘ಹಿಂದೆ ಜನರು ತಮ್ಮ ಮನೆಗಳ ಮೇಲೆ ರಾಷ್ಟ್ರ ಧ್ವಜವನ್ನು ಹಾರಿಸುವಂತೆ ಇರಲಿಲ್ಲ. ಇದನ್ನು 2004ರಲ್ಲಿ ನಾಗರಿಕರೊಬ್ಬರು ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದರು. ‘ಧ್ವಜ ಹಾರಿಸುವುದು ಮೂಲಭೂತ ಹಕ್ಕಿನ ಅಭಿವ್ಯಕ್ತಿ ಸ್ವಾತಂತ್ರ್ಯದ ಭಾಗವಾಗಿದೆ’ ಎಂದು ಸುಪ್ರೀಂ ಕೋರ್ಟ್‌ ತೀರ್ಪು ನೀಡಿತು. ಹೀಗಾಗಿ ‘ನಾವೀಗ ತ್ರಿವರ್ಣ ಧ್ವಜವನ್ನು ಹೆಮ್ಮೆಯಿಂದ ಹಾರಿಸಬಹುದು. ಆದರೆ ಧ್ವಜವನ್ನು ಎಂದಿಗೂ ಅವಮಾನಿಸಬಾರದು ಎಂಬುದನ್ನು ಮನಸ್ಸಿನಲ್ಲಿ ಇಟ್ಟುಕೊಂಡಿರಬೇಕು’ ಎಂದು ಹೇಳಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.