ADVERTISEMENT

ಮುಖಪುಟ ಖಾಲಿ ಪ್ರಕಟಿಸಿದ ಕಾಶ್ಮೀರ ಪತ್ರಿಕೆಗಳು

ಪಿಟಿಐ
Published 10 ಮಾರ್ಚ್ 2019, 19:38 IST
Last Updated 10 ಮಾರ್ಚ್ 2019, 19:38 IST

ಶ್ರೀನಗರ: ಜಮ್ಮು ಮತ್ತು ಕಾಶ್ಮೀರ ರಾಜ್ಯ ಸರ್ಕಾರ ಎರಡು ದಿನಪತ್ರಿಕೆಗಳಿಗೆ ಜಾಹೀರಾತು ನೀಡಲು ‘ವಿವರಿಸಲಾಗದ ನಿರಾಕರಣೆ’ ತೋರಿರುವುದನ್ನು ವಿರೋಧಿಸಿ ಕಾಶ್ಮೀರ ಕಣಿವೆಯ ಬಹುತೇಕ ಎಲ್ಲ ದಿನ ಪತ್ರಿಕೆಗಳು ಭಾನುವಾರ ತಮ್ಮ ಮುಖಪುಟ ಖಾಲಿ ಪ್ರಕಟಿಸುವ ಮೂಲಕ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿವೆ.

ಇಂಗ್ಲಿಷ್‌ ಮತ್ತು ಉರ್ದು ಭಾಷೆಯ ಬಹುತೇಕ ಪತ್ರಿಕೆಗಳು ಭಾನುವಾರದ ಸಂಚಿಕೆಯ ಮುಖಪುಟವನ್ನು ಖಾಲಿ ಬಿಟ್ಟಿವೆ.

ಸ್ಥಳೀಯ ಮಟ್ಟ‌ದಲ್ಲಿ ದೊಡ್ಡ ಪತ್ರಿಕೆಗಳಾಗಿ ಗುರುತಿಸಿಕೊಂಡಿರುವ ಗ್ರೇಟರ್‌ ಕಾಶ್ಮೀರ್‌ ಮತ್ತು ಕಾಶ್ಮೀರ್‌ ರೀಡರ್‌ ಪತ್ರಿಕೆಗಳಿಗೆ ರಾಜ್ಯ ಸರ್ಕಾರ ಕಳೆದ ತಿಂಗಳಿನಿಂದ ಜಾಹೀರಾತು ನೀಡುವುದನ್ನು ಸ್ಥಗಿತಗೊಳಿಸಿದೆ ಎಂದು ಕಾಶ್ಮೀರ ಎಡಿಟರ್ಸ್‌ ಗಿಲ್ಡ್‌ (ಕೆಇಜಿ) ಆರೋಪಿಸಿದೆ.

ADVERTISEMENT

‘ಜಮ್ಮು ಮತ್ತು ಕಾಶ್ಮೀರ ಸರ್ಕಾರವು ಎರಡು ಪ್ರಮುಖ ದಿನಪತ್ರಿಕೆಗಳಿಗೆ ರಾಜ್ಯ ಸರ್ಕಾರದ ಜಾಹೀರಾತುಗಳನ್ನು ನಿಲ್ಲಿಸಿರುವುದು ಅತ್ಯಂತ ವಿಷಾದನೀಯ. ಜಾಹೀರಾತು ಸ್ಥಗಿತಗೊಳಿಸಿರುವುದಕ್ಕೆ ಔಪಚಾರಿಕವಾಗಿಯೂ ಸರ್ಕಾರ ಯಾವುದೇ ವಿವರಣೆ ನೀಡಿಲ್ಲ’ ಎಂದು ಅದುದೂಷಿಸಿದೆ.

‘ಗ್ರೇಟರ್‌ ಕಾಶ್ಮೀರ್‌ ಮತ್ತು ಕಾಶ್ಮೀರ ರೀಡರ್‌ ಪತ್ರಿಕೆಗಳಿಗೆ ಸರ್ಕಾರಿ ಜಾಹೀರಾತುಗಳನ್ನು ‘ವಿವರಿಸಲಾಗದ ನಿರಾಕರಣೆ’ ಮಾಡಿರುವುದಕ್ಕೆ ಈ ಪ್ರತಿಭಟನೆ’ ಎನ್ನುವ ಸಂದೇಶವನ್ನು ಮಾತ್ರ ಈ ಪತ್ರಿಕೆಗಳು ಮುಖಪುಟದ ಖಾಲಿ ಜಾಗದಲ್ಲಿ ಪ್ರಕಟಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.