ADVERTISEMENT

ಕೆರೆಗಳ ಪುನಶ್ಚೇತನ ಕಾಮಗಾರಿ ತ್ವರಿತವಾಗಿ ಮುಗಿಸಲು ಆದೇಶ

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2020, 20:20 IST
Last Updated 17 ಆಗಸ್ಟ್ 2020, 20:20 IST
ಬೆಳ್ಳಂದೂರು ಕೆರೆ (ಸಂಗ್ರಹ ಚಿತ್ರ)
ಬೆಳ್ಳಂದೂರು ಕೆರೆ (ಸಂಗ್ರಹ ಚಿತ್ರ)   

ನವದೆಹಲಿ: ಬೆಂಗಳೂರಿನ ಬೆಳ್ಳಂದೂರು, ವರ್ತೂರು ಮತ್ತು ಅಗರ ಕೆರೆಗಳ ಪುನಶ್ಚೇತನದ ಬಾಕಿ ಕಾಮಗಾರಿಗಳನ್ನು ತ್ವರಿತವಾಗಿ ಮುಗಿಸುವಂತೆ ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿಯು (ಎನ್‌ಜಿಟಿ) ಕರ್ನಾಟಕ ಸರ್ಕಾರಕ್ಕೆ ಸೋಮವಾರ ಸೂಚಿಸಿದೆ.

ಈ ಕಾಮಗಾರಿಗಳನ್ನು ಪರಿಶೀಲಿಸುವ ಜವಾಬ್ದಾರಿಯನ್ನು ನಿವೃತ್ತ ನ್ಯಾಯಮೂರ್ತಿ ಸಂತೋಷ ಹೆಗ್ಡೆ ನೇತೃತ್ವದ ಉಸ್ತುವಾರಿ ಸಮಿತಿಗೆ ವಹಿಸಿದೆ.

ಮಲಿನಗೊಂಡಿರುವ ಬೆಂಗಳೂರಿನ ಕೆರೆ, ಕಟ್ಟೆಗಳು ಮತ್ತು ಜಲಮೂಲಗಳ ಪುನಶ್ಚೇತನಕ್ಕೆ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮತ್ತು ಸಂಬಂಧಿಸಿದ ಇತರ ಇಲಾಖೆಗಳು ಕೈಗೊಂಡ ಕ್ರಮಗಳ ಬಗ್ಗೆ ಪರಾಮರ್ಶೆ ನಡೆಸುವಂತೆಯೂ ಸೂಚಿಸಿದೆ.

ADVERTISEMENT

2020ರ ಡಿ.31ರವರೆಗೆ ಕೈಗೊಳ್ಳುವ ಕೆರೆಗಳ ಅಭಿವೃದ್ಧಿ ಕಾಮಗಾರಿಗಳ ವಸ್ತುಸ್ಥಿತಿ ಕುರಿತು 2021ರ ಜ.15ರ ಒಳಗಾಗಿ ವರದಿ ಸಲ್ಲಿಸುವಂತೆ ಹೇಳಿದೆ. ಸಂಬಂಧಿಸಿದ ಸರ್ಕಾರಿ ಇಲಾಖೆಗಳು ತೆಗೆದುಕೊಂಡ ಕ್ರಮಗಳನ್ನು ಪರಿಷ್ಕರಿಸಿ ಸಮಗ್ರ ವರದಿಯೊಂದನ್ನು ತನಗೆ ಸಲ್ಲಿಸುವಂತೆಯೂ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಆದೇಶಿಸಿದೆ.

ಬೆಳ್ಳಂದೂರು, ಅಗರ ಮತ್ತು ವರ್ತೂರು ಕೆರೆಗಳ ಪುನಶ್ಚೇತನ ಕೋರಿ ಸಲ್ಲಿಸಲಾದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ‌ ಆದರ್ಶ್‌ ಕುಮಾರ್‌ ಗೋಯಲ್‌ ನೇತೃತ್ವದ ಪೀಠವು ಈ ಆದೇಶ ಹೊರಡಿಸಿದೆ.

ಕೊಳಚೆ ನೀರು ಸಂಸ್ಕರಣಾ ಘಟಕ (ಎಸ್‌ಟಿಪಿ) ಸ್ಥಾಪಿಸುವವರೆಗೂ ನಗರದ ತ್ಯಾಜ್ಯ ಮತ್ತು ಕೊಳಚೆ ನೀರು ಕೆರೆಗಳ ಒಡಲು ಸೇರದಂತೆ ನೋಡಿಕೊಳ್ಳುವುದು ಬೆಂಗಳೂರು ಜಲಮಂಡಳಿಯ (ಬಿಡಬ್ಲ್ಯುಎಸ್‌ಎಸ್‌ಬಿ) ಜವಾಬ್ದಾರಿ ಎಂದು ತಾಕೀತು ಮಾಡಿದೆ. ಒಂದು ವೇಳೆ ಇದಕ್ಕೆ ತಪ್ಪಿದರೆ ಪ್ರತಿ ತಿಂಗಳು ₹5 ಲಕ್ಷ ದಂಡ ತೆರಬೇಕಾಗುವುದು ಎಂದು ಎಚ್ಚರಿಕೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.