police
ಹೈದರಾಬಾದ್: ಭೂ ಸ್ವಾಧೀನ ಹಾಗೂ ಪೊಲೀಸರ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ತೆಲಂಗಾಣದ ಲಗಚರ್ಲಾ ಗ್ರಾಮಸ್ಥರು ನೀಡಿದ ದೂರಿನ ಸಂಬಂಧ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು (ಎನ್‌ಎಚ್‌ಆರ್‌ಸಿ) ತನಿಖೆ ಆರಂಭಿಸಿದೆ.
ಆಯೋಗವು ವಿಚಾರಣೆ ಕೈಗೊಳ್ಳಲು ಶನಿವಾರ ತೆಲಂಗಾಣದ ವಿಕಾರಾಬಾದ್ ಜಿಲ್ಲೆಗೆ ಆಗಮಿಸಿದ್ದು, ಭಾನುವಾರ ಲಗಚರ್ಲಾ ಗ್ರಾಮಕ್ಕೆ ಭೇಟಿ ನೀಡುವ ನಿರೀಕ್ಷೆಯಿದೆ. ಆಯೋಗವು ಶನಿವಾರ ರೋಟಿಬಂಡ ತಾಂಡದ ನಿವಾಸಿಗಳೊಂದಿಗೆ ಮಾತುಕತೆ ನಡೆಸಿತು. ಪೊಲೀಸರು ದೌರ್ಜನ್ಯ, ಹಲ್ಲೆ ನಡೆಸಿ, ಸುಳ್ಳು ಅಪರಾಧಗಳ ಆರೋಪವನ್ನು ತಮ್ಮ ಮೇಲೆ ಹೊರಿಸಿದ್ದಾರೆ ಎಂದು ಲಗಚರ್ಲಾ ಗ್ರಾಮದ ರೈತರು ಆರೋಪಿಸಿದರು.
ಉದ್ದೇಶಿತ ‘ಫಾರ್ಮಾ ಗ್ರಾಮ’ ನಿರ್ಮಾಣಕ್ಕೆ ಸರ್ಕಾರ ಭೂಸ್ವಾಧೀನ ಮಾಡುತ್ತಿರುವುದನ್ನು ವಿರೋಧಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದ ಬಳಿಕ ಪೊಲೀಸ್ ದೌರ್ಜನ್ಯ ನಡೆದಿದೆ ಎಂದು ಹೇಳಲಾಗಿದೆ. ದೌರ್ಜನ್ಯಕ್ಕೊಳಗಾದ ಹೆಚ್ಚಿನವರು ಪರಿಶಿಷ್ಟ ಜಾತಿ, ಪಂಗಡ ಮತ್ತು ಹಿಂದುಳಿದ ಸಮುದಾಯಗಳಿಗೆ ಸೇರಿದವರು ಎನ್ನಲಾಗಿದೆ. ಕೆಲವು ದಿನಗಳ ಹಿಂದೆ ದೆಹಲಿಯಲ್ಲಿ ಆಯೋಗವನ್ನು ಸಂಪರ್ಕಿಸಿದ್ದ ಕನಿಷ್ಠ 12 ಮಂದಿ ಸಂತ್ರಸ್ತರು ಘಟನೆ ಸಂಬಂಧ ಮಧ್ಯಪ್ರವೇಶಿಸಬೇಕು ಎಂದು ಮನವಿ ಮಾಡಿ ದೂರು ಸಲ್ಲಿಸಿದ್ದರು.
ಉದ್ದೇಶಿತ ಫಾರ್ಮಾ ಯೋಜನೆಗೆ ಭೂ ಸ್ವಾಧೀನ ಆಗಿರುವುದನ್ನು ಘೋಷಿಸಲು ನ.11ರಂದು ಜಿಲ್ಲಾಧಿಕಾರಿ ಪ್ರತೀಕ್ ಜೈನ್ ಅವರು ಇತರೆ ಅಧಿಕಾರಿಗಳೊಂದಿಗೆ ಆಗಮಿಸಿದ್ದರು. ಸರ್ಕಾರದ ಈ ನಿರ್ಧಾರವನ್ನು ಖಂಡಿಸಿ ಕೆಲವು ಗ್ರಾಮಸ್ಥರು, ಜಿಲ್ಲಾಧಿಕಾರಿ ಹಾಗೂ ಇತರೆ ಸರ್ಕಾರಿ ಅಧಿಕಾರಿಗಳ ಮೇಲೆ ದಾಳಿ ನಡೆಸಿದ್ದರು. ಅದೇ ದಿನ ಸಂಜೆ ನೂರಾರು ಪೊಲೀಸರು ಕೆಲವು ಸ್ಥಳೀಯ ಗೂಂಡಾಗಳೊಂದಿಗೆ ಗ್ರಾಮದ ಮೇಲೆ ದಾಳಿ ನಡೆಸಿ ಪ್ರತಿಭಟನಾನಿರತ ಗ್ರಾಮಸ್ಥರ ಮೇಲೆ ಹಲ್ಲೆ ನಡೆಸಿದರು ಎಂದು ಆರೋಪಿಸಲಾಗಿದೆ.
ಯಾರೊಂದಿಗೂ ಗ್ರಾಮಸ್ಥರು ಸಂಪರ್ಕ ಸಾಧಿಸದೇ ಇರಲಿ ಎಂದು ಇಂಟರ್‌ನೆಟ್ ಸೇವೆ ಮತ್ತು ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿದೆ ಎಂದು ಆರೋಪಿಸಲಾಗಿದೆ. ಗ್ರಾಮಸ್ಥರ ದೂರಿನಲ್ಲಿರುವ ಮಾಹಿತಿ ನಿಜವೇ ಆಗಿದ್ದರೆ ಇದು ಮಾನವ ಹಕ್ಕುಗಳನ್ನು ಉಲ್ಲಂಘಿಸಿದ ಗಂಭೀರ ಪ್ರಕರಣವಾಗಲಿದೆ ಎಂದು ಆಯೋಗ ಅಭಿಪ್ರಾಯಪಟ್ಟಿದೆ. ಎರಡು ವಾರಗಳಲ್ಲಿ ಈ ಸಂಬಂಧ ವಿಸ್ತೃತ ವರದಿ ನೀಡುವಂತೆ ತೆಲಂಗಾಣದ ಮುಖ್ಯ ಕಾರ್ಯದರ್ಶಿ ಮತ್ತು ಪೊಲೀಸ್ ಮಹಾ ನಿರ್ದೇಶಕರಿಗೆ ಆಯೋಗ ನೋಟಿಸ್ ನೀಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.