ADVERTISEMENT

ಹಾಸಿಗೆಯಲ್ಲಿ ಮೂತ್ರ ಮಾಡಿದ್ದ ವಿದ್ಯಾರ್ಥಿಗಳಿಗೆ ಬರೆ ಹಾಕಿದ ಶಿಕ್ಷಕ:NHRC ನೋಟಿಸ್

ಪಿಟಿಐ
Published 29 ಆಗಸ್ಟ್ 2025, 3:55 IST
Last Updated 29 ಆಗಸ್ಟ್ 2025, 3:55 IST
   

ನವದೆಹಲಿ: ರಾಜಸ್ಥಾನದ ಬರ್ಮರ್ ಜಿಲ್ಲೆಯ ಹಾಸ್ಟೆಲ್‌ವೊಂದರಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಕರು ಕಾದ ಕಬ್ಬಿಣದ ಸರಳಿನಿಂದ ಬರೆ ಹಾಕಿದ್ದಾರೆ ಎಂಬ ಆರೋಪದ ಹಿನ್ನೆಲೆ ಜಿಲ್ಲಾಡಳಿತಕ್ಕೆ ನೋಟಿಸ್ ನೀಡಿರುವುದಾಗಿ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ(ಎನ್‌ಎಚ್‌ಆರ್‌ಸಿ ) ಹೇಳಿದೆ.

ಈ ಕ್ರೂರಕೃತ್ಯದ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲೂ ಹರಿದಾಡಿದೆ ಎಂದು ಎನ್‌ಎಚ್‌ಆರ್‌ಸಿ ಹೇಳಿದೆ.

ಬಾರ್ಮರ್ ಜಿಲ್ಲೆಯ ದೇವಾಲಯ ಸಂಕೀರ್ಣದೊಳಗಿನ ಹಾಸ್ಟೆಲ್‌ನಲ್ಲಿ ಕೆಲವು ವಿದ್ಯಾರ್ಥಿಗಳು ಹಾಸಿಗೆಯಲ್ಲಿ ಮೂತ್ರ ಮಾಡಿಕೊಂಡಿದ್ದನ್ನು ನೋಡಿ ಸಿಟ್ಟಿಗೆದ್ದ ಶಿಕ್ಷಕರೊಬ್ಬರು ಅವರಿಗೆ ಕಾದ ಕಬ್ಬಿಣದ ರಾಡ್‌ನಿಂದ ಬರೆ ಹಾಕಿದ್ದಾರೆ ಎಂಬ ಮಾಧ್ಯಮ ವರದಿಯನ್ನು ಸ್ವಯಂಪ್ರೇರಿತವಾಗಿ ಪರಿಗಣಿಸಲಾಗಿದೆ ಎಂದು ಮಾನವ ಹಕ್ಕುಗಳ ಆಯೋಗ ತಿಳಿಸಿದೆ.

ADVERTISEMENT

ಸುದ್ದಿ ವರದಿಯ ವಿಷಯವು ನಿಜವಾಗಿದ್ದರೆ, ಮಾನವ ಹಕ್ಕುಗಳ ಉಲ್ಲಂಘನೆಯ ಗಂಭೀರ ಸಮಸ್ಯೆಗಳನ್ನು ಹುಟ್ಟುಹಾಕುತ್ತದೆ ಎಂದು ಎನ್‌ಎಚ್‌ಆರ್‌ಸಿ ಹೇಳಿದೆ.

ಆದ್ದರಿಂದ, ಜಿಲ್ಲಾ ಮ್ಯಾಜಿಸ್ಟ್ರೇಟ್ ಮತ್ತು ಬಾರ್ಮರ್ ಪೊಲೀಸ್ ವರಿಷ್ಠಾಧಿಕಾರಿಗೆ ನೋಟಿಸ್ ಜಾರಿ ಮಾಡಿದ್ದು, ಸಂತ್ರಸ್ತ ವಿದ್ಯಾರ್ಥಿಗಳ ಆರೋಗ್ಯ ಸ್ಥಿತಿ ಸೇರಿದಂತೆ ಎರಡು ವಾರಗಳಲ್ಲಿ ವಿವರವಾದ ವರದಿಯನ್ನು ಕೋರಿದೆ.

ಗಾಯಗೊಂಡ ಬಾಲಕರಲ್ಲಿ ಒಬ್ಬನು ತನ್ನ ಮನೆಗೆ ತಲುಪಿ ಕುಟುಂಬಕ್ಕೆ ವಿಷಯವನ್ನು ತಿಳಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ನಂತರ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಾರೆ ಎಂದು ಆಯೋಗ ತಿಳಿಸಿದೆ.

ಮತ್ತೊಂದು ಪ್ರಕರಣದಲ್ಲಿ ಬಿಹಾರದ ಕತಿಹಾರ್ ಜಿಲ್ಲೆಯ ಹಫ್ಲಗಂಜ್ ಪ್ರದೇಶದ ಸರ್ಕಾರಿ ಶಾಲೆಯೊಂದರ ಸುಮಾರು 18 ವಿದ್ಯಾರ್ಥಿಗಳನ್ನು ಅವರ ಶಿಕ್ಷಕರು ಕೋಣೆಯೊಂದರಲ್ಲಿ ಕೂಡಿಹಾಕಿ ದೈಹಿಕ ಶಿಕ್ಷೆ ನೀಡಿದ್ದಾರೆ. ಈ ಬಗ್ಗೆಯೂ ಸ್ವಯಂಪ್ರೇರಿತ ಪ್ರಕರಣ ದಾಖಲಿಸಲಾಗಿದೆ ಎಂದು ಆಯೋಗ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.