ADVERTISEMENT

ರೈತರ ಪ್ರತಿಭಟನೆ ದುಷ್ಪರಿಣಾಮದ ವರದಿ ಕೇಳಿದ ಎನ್‌ಎಚ್‌ಆರ್‌ಸಿ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2021, 17:05 IST
Last Updated 14 ಸೆಪ್ಟೆಂಬರ್ 2021, 17:05 IST
ದೆಹಲಿಯ ಸಿಂಘು ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರು ದೆಹಲಿ–ಹರಿಯಾಣ ಹೆದ್ದಾರಿಯಲ್ಲಿ ಟೆಂಟ್‌ ಹಾಕಿಕೊಂಡಿರುವ ದೃಶ್ಯ. ಇದು ಮಾರ್ಚ್‌ 4ರಂದು ತೆಗೆದ ಚಿತ್ರ –ಎಎಫ್‌ಪಿ ಚಿತ್ರ
ದೆಹಲಿಯ ಸಿಂಘು ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರು ದೆಹಲಿ–ಹರಿಯಾಣ ಹೆದ್ದಾರಿಯಲ್ಲಿ ಟೆಂಟ್‌ ಹಾಕಿಕೊಂಡಿರುವ ದೃಶ್ಯ. ಇದು ಮಾರ್ಚ್‌ 4ರಂದು ತೆಗೆದ ಚಿತ್ರ –ಎಎಫ್‌ಪಿ ಚಿತ್ರ   

ನವದೆಹಲಿ: ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆಗಳ ವಿರುದ್ಧ ರೈತರು 2020ರ ನವೆಂಬರ್‌ನಿಂದ ನಡೆಸುತ್ತಿರುವ ಪ್ರತಿಭಟನೆಯಿಂದಾಗುತ್ತಿರುವ ದುಷ್ಪರಿಣಾಮಗಳ ಬಗ್ಗೆ ವರದಿ ನೀಡಿ ಎಂದು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು (ಎನ್‌ಎಚ್‌ಆರ್‌ಸಿ) ದೆಹಲಿ, ಹರಿಯಾಣ, ಉತ್ತರ ಪ್ರದೇಶ, ಪಂಜಾಬ್, ರಾಜಸ್ಥಾನ ಮತ್ತು ಕೇಂದ್ರ ಸರ್ಕಾರಗಳಿಗೆ ನೋಟಿಸ್ ನೀಡಿದೆ.

ರೈತರ ಪ್ರತಿಭಟನೆಯಿಂದ ತೊಂದರೆಯಾಗುತ್ತಿದೆ ಎಂದು ಈವರೆಗೆ ಸಾವಿರಾರು ದೂರುಗಳು ಬಂದಿವೆ. ಹೀಗಾಗಿ ಈ ಬಗ್ಗೆ ವರದಿ ನೀಡುವಂತೆ ರಾಜ್ಯ ಸರ್ಕಾರಗಳಿಗೆ ಮತ್ತು ಕೇಂದ್ರ ಸರ್ಕಾರಕ್ಕೆ ನೋಟಿಸ್ ನೀಡಿದ್ದೇವೆ ಎಂದು ಎನ್‌ಎಚ್‌ಆರ್‌ಸಿ ಹೇಳಿದೆ.

ರೈತರ ಪ್ರತಿಭಟನೆಯಿಂದ ಪ್ರಯಾಣಿಕರಿಗೆ, ವಾಣಿಜ್ಯ ಚಟುವಟಿಕೆಗಳಿಗೆ, ಕೈಗಾರಿಕೆಗಳಿಗೆ ಆಗುತ್ತಿರುವ ತೊಂದರೆ ಬಗ್ಗೆ ಸಮೀಕ್ಷೆ ನಡೆಸಿ ವರದಿ ಸಲ್ಲಿಸುವಂತೆ ಇನ್‌ಸ್ಟಿಟ್ಯೂಟ್ ಆಫ್ ಎಕನಾಮಿಕ್‌ ಗ್ರೋತ್‌ (ಐಇಜಿ), ರಾಷ್ಟ್ರೀಯ ವಿಕೋಪ ನಿರ್ವಹಣಾ ಪ್ರಾಧಿಕಾರ (ಎನ್‌ಡಿಎಂಎ) ಮತ್ತು ದೆಹಲಿ ಸ್ಕೂಲ್ ಆಫ್ ಸೋಷಿಯಲ್ ವರ್ಕ್‌ಗೆ ಎನ್‌ಎಚ್‌ಆರ್‌ಸಿ ಸೂಚನೆ ನೀಡಿದೆ.

ADVERTISEMENT

‘ರೈತರ ಪ್ರತಿಭಟನೆಯಿಂದ ತೀರಾ ದುಷ್ಪರಿಣಾಮಗಳು ಉಂಟಾಗುತ್ತಿವೆ ಎಂದು ಹಲವರು ದೂರು ನೀಡಿದ್ದಾರೆ. ಕೈಗಾರಿಕೆಗಳಿಗೆ ಭಾರಿ ತೊಂದರೆಯಾಗುತ್ತಿದೆ. ರೈತರು ರಸ್ತೆಗಳಲ್ಲಿ ಪ್ರತಿಭಟನೆ ನಡೆಸುತ್ತಿರುವ ಕಾರಣ 9,000ಕ್ಕೂ ಹೆಚ್ಚು ಸೂಕ್ಷ್ಮ, ಸಣ್ಣ, ಮಧ್ಯಮ ಮತ್ತು ಬೃಹತ್ ಕೈಗಾರಿಕೆಗಳ ಕಾರ್ಯಾಚರಣೆಗೆ ಹಲವು ರೀತಿಯ ಅಡಚಣೆಯಾಗುತ್ತಿದೆ. ರೋಗಿಗಳು, ಅಂಗವಿಕಲರು ಮತ್ತು ಹಿರಿಯ ನಾಗರಿಕರ ಓಡಾಟಕ್ಕೆ ತೀವ್ರ ಅಡ್ಡಿ ಆಗುತ್ತಿದೆ.ಪ್ರತಿಭಟನೆಯ ಕಾರಣದಿಂದ ಪೊಲೀಸರು ಎಲ್ಲೆಡೆ ಬ್ಯಾರಿಕೇಡ್‌ಗಳನ್ನು ಹಾಕಿದ್ದಾರೆ. ಹೀಗಾಗಿ ಜನಸಾಮಾನ್ಯರು ಪ್ರತಿನಿತ್ಯ ಸುತ್ತುಬಳಸಿ ಓಡಾಡಬೇಕಿದೆ ಎಂಬ ದೂರುಗಳು ಬಂದಿವೆ’ ಎಂದು ಎನ್‌ಎಚ್‌ಆರ್‌ಸಿ ವಿವರಿಸಿದೆ.

ಈ ದುಷ್ಪರಿಣಾಮಗಳನ್ನು ತಡೆಗಟ್ಟಲು ತೆಗೆದುಕೊಂಡ ಕ್ರಮಗಳ ಬಗ್ಗೆ ವರದಿ ನೀಡಿ ಎಂದು ಪಂಜಾಬ್, ಉತ್ತರ ಪ್ರದೇಶ, ರಾಜಸ್ಥಾನ, ದೆಹಲಿ ಮತ್ತು ಹರಿಯಾಣ ಸರ್ಕಾರಗಳ ಮುಖ್ಯ ಕಾರ್ಯದರ್ಶಿಗಳು ಮತ್ತು ಪೊಲೀಸ್ ಮಹಾ ನಿರ್ದೇಶಕರಿಗೆ ಎನ್‌ಎಚ್‌ಆರ್‌ಸಿ ನೋಟಿಸ್ ನೀಡಿದೆ.

ಪ್ರತಿಭಟನೆ ವೇಳೆ ರೈತರು ಕೋವಿಡ್‌ ನಿಯಂತ್ರಣ ಮಾರ್ಗಸೂಚಿಗಳನ್ನು ಉಲ್ಲಂಘಿಸುತ್ತಿದ್ದಾರೆ ಎಂಬ ದೂರುಗಳಿವೆ. ಇದರ ಬಗ್ಗೆ ವರದಿ ನೀಡಿ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮತ್ತು ರಾಷ್ಟ್ರೀಯ ವಿಕೋಪ ನಿರ್ವಹಣಾ ಪ್ರಾಧಿಕಾರಕ್ಕೆ ಸೂಚನೆ ನೀಡಲಾಗಿದೆ.

ರೈತರ ಪ್ರತಿಭಟನೆಯಿಂದ ಕೈಗಾರಿಕೆಗಳು, ವಾಣಿಜ್ಯ ಚಟುವಟಿಕೆಗಳು ಮತ್ತು ಸಾರಿಗೆ ಕ್ಷೇತ್ರಕ್ಕೆ ಆಗುತ್ತಿರುವ ಅಡಚಣೆ ಮತ್ತು ಹೆಚ್ಚುವರಿ ವೆಚ್ಚದ ಬಗ್ಗೆ ಅಧ್ಯಯನ ನಡೆಸಿ, ವರದಿ ಸಲ್ಲಿಸಿ ಎಂದು ಐಇಜಿಗೆ ಎನ್‌ಎಚ್‌ಆರ್‌ಸಿ ಸೂಚನೆ ನೀಡಿದೆ. ಅಕ್ಟೋಬರ್ 10ರ ಒಳಗೆ ಈ ವರದಿ ಸಲ್ಲಿಸುವಂತೆ ಸೂಚನೆ ನೀಡಿದೆ.

ಹರಿಯಾಣದ ಜಝ್ಝಾರ್‌ನಲ್ಲಿ ರೈತರ ಪ್ರತಿಭಟನೆ ವೇಳೆ ನಡೆದಿದೆ ಎನ್ನಲಾದ ಸಾಮೂಹಿಕ ಅತ್ಯಾಚಾರದ ಸಂತ್ರಸ್ತೆಗೆ ಪರಿಹಾರ ನೀಡುವ ಬಗ್ಗೆ ವರದಿ ನೀಡುವಂತೆ ಜಝ್ಝಾರ್ ಜಿಲ್ಲಾಡಳಿತಕ್ಕೆ ಎನ್‌ಎಚ್‌ಆರ್‌ಸಿ ಸೂಚನೆ ನೀಡಿದೆ.

***

ಪ್ರತಿಭಟನೆಯೂ ಒಂದು ಹಕ್ಕು. ಆದರೆ ಅದರಿಂದ ಬೇರೆ ಮಾನವ ಹಕ್ಕುಗಳಿಗೆ ಆಗುವ ಧಕ್ಕೆಯನ್ನು ಗಂಭೀರವಾಗಿ ಪರಿಗಣಿಸಬೇಕಾಗುತ್ತದೆ

-ಎನ್‌ಎಚ್‌ಆರ್‌ಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.