ಕೋಲ್ಕತ್ತ: ಪಶ್ಚಿಮ ಬಂಗಾಳದಲ್ಲಿ ಚುನಾವಣೋತ್ತರ ಹಿಂಸಾಚಾರ ಕುರಿತು ತನಿಖೆ ನಡೆಸಿದ್ದ ಎನ್‌ಎಚ್‌ಆರ್‌ಸಿ ಸಮಿತಿ ಸದಸ್ಯರು ಬಿಜೆಪಿ ಜೊತೆಗೆ ಕೈಜೋಡಿಸಿದ್ದು, ಆಡಳಿತರೂಢ ಸರ್ಕಾರ ವಿರುದ್ಧ ತಾರತಮ್ಯ ಧೋರಣೆ ತಳೆದಿದೆ ಎಂದು ತೃಣಮೂಲ ಕಾಂಗ್ರೆಸ್ ನೇತೃತ್ವದ ಸರ್ಕಾರ ಆರೋಪಿಸಿದೆ. ಈ ಬಗ್ಗೆ ಕಲ್ಕತ್ತ ಹೈಕೋರ್ಟ್‌ಗೆ ಪ್ರಮಾಣಪತ್ರ ಸಲ್ಲಿಸಿದೆ.
ಸಮಿತಿಯ ಸದಸ್ಯರಾಗಿದ್ದವರು ಬಿಜೆಪಿ ನಾಯಕರಿಗೆ ಆಪ್ತರಾಗಿದ್ದವರು ಎಂದೂ ಸೋಮವಾರ ಸಲ್ಲಿಸಿದ ಪ್ರಮಾಣಪತ್ರದಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ. ಸಮಿತಿ ಕೋರ್ಟ್‌ಗೆ ಸಲ್ಲಿಸಿದ್ದ ತನ್ನ ವರದಿಯಲ್ಲಿ ಪಶ್ಚಿಮ ಬಂಗಾಳದ ಸರ್ಕಾರವನ್ನು ಟೀಕಿಸಿತ್ತು. ಚುನಾವಣೋತ್ತರ ಹಿಂಸಾಚಾರದ ಕೆಲ ಘಟನೆಗಳನ್ನು ಸಿಬಿಐ ತನಿಖೆಗೆ ಒಪ್ಪಿಸಬಹುದು ಎಂದೂ ಶಿಫಾರಸು ಮಾಡಿತ್ತು.
ಸಮಿತಿಯ ರಚನೆ ಮತ್ತು ಬಳಿಕ ಸ್ಥಳಕ್ಕೆ ಭೇಟಿ ನೀಡಿರುವುದು ತಾರತಮ್ಯ ಧೋರಣೆಗೆ ಸಾಕ್ಷಿಯಾಗಿದೆ. ಸರ್ಕಾರದ ವಿರುದ್ಧ ದ್ವೇಷ ಸಾಧನೆಗಾಗಿ ಉದ್ದೇಶಪೂರ್ವಕವಾಗಿ ಸಮಿತಿಯನ್ನು ರಚಿಸಲಾಗಿದೆ ಎಂದು ಪ್ರಮಾಣಪತ್ರದಲ್ಲಿ ಹೇಳಲಾಗಿದೆ. ಕಲ್ಕತ್ತ ಹೈಕೋರ್ಟ್‌ನ ಪ್ರಭಾರ ಮುಖ್ಯನ್ಯಾಯಮೂರ್ತಿ ರಾಜೇಶ್ ಬಿಂದಾಲ್ ನೇತೃತ್ವದ ಪೀಠದ ಎದುರು ಅರ್ಜಿವಿಚಾರಣೆಗೆ ಬಂದಿತು.
ಎನ್ಎಚ್‌ಆರ್‌ಸಿ ಸಮಿತಿಯ ನೇತೃತ್ವ ವಹಿಸಿದ್ದ ರಾಜೀವ್ ಜೈನ್ ಅವರು ಬಿಜೆಪಿ ಸರ್ಕಾರದ ಅವಧಿಯಲ್ಲಿ ಗುಪ್ತದಳ ವಿಭಾಗದ ನಿರ್ದೇಶಕರಾಗಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತ್ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ 2005 ರಿಂದ 2008ರ ಅವಧಿಯಲ್ಲಿಯೂ ಅಹಮದಾಬಾದ್‌ನಲ್ಲಿ ಗುಪ್ತದಳ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದ್ದರು ಎಂದು ಉಲ್ಲೇಖಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.