ನವದೆಹಲಿ: ಪಂಜಾಬ್‌ನಲುಧಿಯಾನ ನ್ಯಾಯಾಲಯದಲ್ಲಿ ಡಿಸೆಂಬರ್ 23, 2021ರಂದು ಸಂಭವಿಸಿದ ಬಾಂಬ್ ಸ್ಫೋಟ ಪ್ರಕರಣದ ಪ್ರಮುಖ ಸಂಚುಕೋರನನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಅಧಿಕಾರಿಗಳು ಬಂಧಿಸಿದ್ದಾರೆ.
ಆರೋಪಿ ಹರ್‌ಪ್ರೀತ್ ಸಿಂಗ್‌ನನ್ನು ನವದೆಹಲಿಯ ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ ಎಂದು ಎಎನ್‌ಐ ಟ್ವೀಟಿಸಿದೆ.
ಪಂಜಾಬ್‌ನ ಅಮೃತಸರ ಜಿಲ್ಲೆಯವನಾದ ಹರ್‌ಪ್ರೀತ್ ಸಿಂಗ್ ಅಲಿಯಾಸ್ ಹ್ಯಾಪಿ ಮಲೇಷ್ಯಾನನ್ನು ಮಲೇಷ್ಯಾದ ಕ್ವಾಲಾಲಂಪುರದಿಂದ ದೆಹಲಿ ವಿಮಾನ ನಿಲ್ದಾಣಕ್ಕೆ ಬಂದಿಳಿದಾಗ ಬಂಧಿಸಲಾಗಿದೆ ಎಂದು ‘ಇಂಡಿಯಾ ಟುಡೆ‘ ವರದಿ ಮಾಡಿದೆ.
ಲುಧಿಯಾನಾ ಬಾಂಬ್ ಸ್ಫೋಟದಲ್ಲಿ ಒಬ್ಬರು ಮೃತಪಟ್ಟು, ಐದು ಮಂದಿ ಗಾಯಗೊಂಡಿದ್ದರು.
ಹರ್‌ಪ್ರೀತ್ ಸಿಂಗ್, ಐಎಸ್‌ವೈಎಫ್(ಅಂತರರಾಷ್ಟ್ರೀಯ ಸಿಖ್ ಯುವಕರ ಒಕ್ಕೂಟ) ಸಂಘಟನೆಯ ಪಾಕ್ ಮೂಲದ ಸ್ವಯಂ ಘೋಷಿತ ಮುಖ್ಯಸ್ಥ ಲಖ್ಬೀರ್ ಸಿಂಗ್ ರೋಡ್‌ನ ಸಹವರ್ತಿಯಾಗಿದ್ದು, ರೋಡ್ ಜೊತೆಗೆ ಲುಧಿಯಾನ ಕೋರ್ಟ್ ಸ್ಫೋಟದ ಸಂಚುಕೋರರಲ್ಲಿ ಒಬ್ಬ ಎಂದು ತನಿಖೆಯಿಂದ ತಿಳಿದುಬಂದಿದೆ. ಲೂಧಿಯಾನ ಕೋರ್ಟ್ ಕಾಂಪ್ಲೆಕ್ಸ್ ಸ್ಫೋಟದಲ್ಲಿ ಬಳಸಲಾದ ಸುಧಾರಿತ ಸ್ಫೋಟಕವನ್ನು ಹರ್‌ಪ್ರೀತ್ ಸಿಂಗ್, ರೋಡ್‌ನ ನಿರ್ದೇಶನದ ಮೇರೆಗೆ ಪಾಕಿಸ್ತಾನದಿಂದಭಾರತ ಮೂಲದ ಸಹವರ್ತಿಗಳಿಗೆ ತಲುಪಿಸುವಲ್ಲಿ ಕೆಲಸ ಮಾಡಿದ್ದ.
ಬಂಧಿತ ಆರೋಪಿಯು ಸ್ಫೋಟಕ, ಶಸ್ತ್ರಾಸ್ತ್ರ ಮತ್ತು ಮಾದಕ ವಸ್ತುಗಳ ಕಳ್ಳಸಾಗಣೆ ಸೇರಿದಂತೆ ವಿವಿಧ ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ.
ಹರ್‌ಪ್ರೀತ್ ಸಿಂಗ್ ಬಗ್ಗೆ ಮಾಹಿತಿ ನೀಡಿದವರಿಗೆ ₹10 ಲಕ್ಷ ಬಹುಮಾನವನ್ನು ಎನ್‌ಐಎ ಘೋಷಿಸಿತ್ತು, ಅವರ ವಿರುದ್ಧ ವಿಶೇಷ ಎನ್‌ಐಎ ನ್ಯಾಯಾಲಯದಿಂದ ಎನ್‌ಬಿಡಬ್ಲ್ಯೂ(ಜಾಮೀನು ರಹಿತ ಬಂಧನ ಆದೇಶ) ಹೊರಡಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.