ADVERTISEMENT

ಬೇಹುಗಾರಿಕೆ ಪ್ರಕರಣ: ಯೂಟ್ಯೂಬರ್ ಜ್ಯೋತಿ ವಿಚಾರಣೆ ನಡೆಸಿದ ಎನ್‌ಐಎ, ಐಬಿ

ಪಿಟಿಐ
Published 20 ಮೇ 2025, 12:42 IST
Last Updated 20 ಮೇ 2025, 12:42 IST
   

ಚಂಡೀಗಢ: ಬೇಹುಗಾರಿಕೆ ಪ್ರಕರಣದಲ್ಲಿ ಬಂಧನವಾಗಿರುವ ಹರಿಯಾಣದ ಯೂಟ್ಯೂಬರ್ ಜ್ಯೋತಿ ಮಲ್ಹೋತ್ರಾ ಅವರನ್ನು ಎನ್‌ಐಎ, ಗುಪ್ತಚರ ದಳ (ಐಬಿ) ಮತ್ತು ಸೇನಾ ಗುಪ್ತಚರ ಅಧಿಕಾರಿಗಳು ವಿಚಾರಣೆ ನಡೆಸಿದರು ಎಂದು ಪೊಲೀಸರು ಮಂಗಳವಾರ ತಿಳಿಸಿದರು.

ಮಲ್ಹೋತ್ರಾ ಅವರ ಹಣಕಾಸು ವರ್ಗಾವಣೆ ಮತ್ತು ಪ್ರಯಾಣದ ಮಾಹಿತಿ ಆಧರಿಸಿದ ತನಿಖೆಯೂ ಮುಂದುವರಿದಿದೆ ಎಂದು ಅವರು ತಿಳಿಸಿದರು.

ಜ್ಯೋತಿ ಅವರು, ಪಾಕಿಸ್ತಾನ, ಚೀನಾ ಮತ್ತು ಇತರ ದೇಶಗಳಿಗೆ ಭೇಟಿ ನೀಡಿರುವ ಬಗ್ಗೆ ವರದಿಯಾಗಿದೆ. ಈ ಆಯಾಮದಲ್ಲಿಯೂ ತನಿಖೆ ನಡೆಯುತ್ತಿದೆ ಎಂದು ಹರಿಯಾಣದ ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದರು.

ADVERTISEMENT

ಜ್ಯೋತಿ ಅವರ ಲ್ಯಾಪ್‌ಟಾಪ್‌ನ ವಿಧಿವಿಜ್ಞಾನ ಪರೀಕ್ಷೆ ನಡೆಯುತ್ತಿದೆ. ಜ್ಯೋತಿ ಅವರೊಂದಿಗೆ ಸಂಪರ್ಕದಲ್ಲಿದ್ದವರನ್ನೂ ವಿಚಾರಣೆ ನಡೆಸಲಾಗುತ್ತಿದೆ ಎಂದರು.

‘ಟ್ರಾವೆಲ್‌ ವಿತ್‌ ಜ್ಯೋ’ ಎನ್ನುವ ಯೂಟ್ಯೂಬ್‌ ಚಾನೆಲ್‌ ಮೂಲಕ ಟ್ರಾವೆಲ್‌ ವಿಡಿಯೊಗಳನ್ನು ಮಾಡುತ್ತಿದ್ದ ಜ್ಯೋತಿ ಅವರನ್ನು ಮೇ 16ರಂದು ಬಂಧಿಸಲಾಗಿದೆ.

ಅಧಿಕೃತ ರಹಸ್ಯ ಕಾಯ್ದೆ ಮತ್ತು ಭಾರತೀಯ ನ್ಯಾಯ ಸಂಹಿತೆಯ ವಿವಿಧ ಸೆಕ್ಷನ್‌ಗಳಡಿ ಅವರ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿದೆ ಎಂದರು.

ಬೇಹುಗಾರಿಕೆ ಆರೋಪದ ಮೇಲೆ ಪಂಜಾಬ್‌, ಹರಿಯಾಣ ಮತ್ತು ಉತ್ತರಪ್ರದೇಶದಿಂದ ಜ್ಯೋತಿ ಸೇರಿ 12 ಮಂದಿಯನ್ನು ಬಂಧಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.