ನವದೆಹಲಿ: ಪಾಕಿಸ್ತಾನ ಮೂಲದ ಖಾಲಿಸ್ತಾನಿ ಭಯೋತ್ಪಾದಕ ಹರ್ವಿಂದರ್ ಸಿಂಗ್ ಅಲಿಯಾಸ್ ರಿಂಡಾ ಜತೆ ಸಂಪರ್ಕ ಹೊಂದಿರುವ ಗ್ಯಾಂಗ್‌ಸ್ಟರ್ ಹರ್‌ಪ್ರೀತ್ ಸಿಂಗ್ ಅಲಿಯಾಸ್ ಹ್ಯಾಪಿ ಪಸ್ಸಿಯಾನ್‌ಗೆ ಸಂಬಂಧಿಸಿದ ಹಲವು ಸ್ಥಳಗಳ ಮೇಲೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಶುಕ್ರವಾರ ಶೋಧ ನಡೆಸಿದೆ.
ಭಯೋತ್ಪಾದಕ ಪಿತೂರಿ ಪ್ರಕರಣದ ತನಿಖೆಯ ಭಾಗವಾಗಿ ಎನ್‌ಐಎ ಈ ಶೋಧ ನಡೆಸಿದೆ ಎಂದು ಪ್ರಕಟಣೆ ತಿಳಿಸಿದೆ.
ಗುರುದಾಸಪುರ, ಬಟಾಲಾ, ಫಿರೋಜ್‌ಪುರ, ಫಜಿಲ್ಕಾ, ತರಣ್ ತರಣ್, ಅಮೃತಸರ ಮತ್ತು ಫರೀದ್‌ಕೋಟ್ ಜಿಲ್ಲೆಗಳಲ್ಲಿನ ಒಟ್ಟು 17 ಸ್ಥಳಗಳ ಮೇಲೆ ಎನ್‌ಐಎ ಪರಿಶೀಲನೆ ನಡೆಸಿದೆ. ಮೊಬೈಲ್ ಫೋನ್‌ಗಳು, ಡಿಜಿಟಲ್ ಸಾಧನಗಳು ಮತ್ತು ದಾಖಲೆಗಳು ಸೇರಿ ಹಲವು ಅಪರಾಧ ಸಾಮಗ್ರಿಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪ್ರಕಟಣೆ ಹೇಳಿದೆ.
ಪ್ರಸ್ತುತ ಅಮೆರಿಕದಲ್ಲಿರುವ ಪಸ್ಸಿಯಾನ್ ಅನ್ನು ಅಲ್ಲಿನ ಪೊಲೀಸರು ಕಳೆದ ತಿಂಗಳು ಬಂಧಿಸಿದ್ದಾರೆ. ಈತನು ಪಾಕಿಸ್ತಾನ ಮೂಲದ ಬಬ್ಬರ್ ಖಾಲ್ಸಾ ಇಂಟರ್‌ನ್ಯಾಷನಲ್ (ಬಿಕೆಐ) ಭಯೋತ್ಪಾದಕ ಸಂಘಟನೆಯ ಪ್ರಮುಖ ಕಾರ್ಯಕರ್ತನಾಗಿದ್ದ ಎಂದು ಅದು ಹೇಳಿದೆ. ಪಂಜಾಬ್, ಹರಿಯಾಣಗಳಲ್ಲಿ ಇತ್ತೀಚೆಗೆ ನಡೆದ ಸರಣಿ ಗ್ರೆನೇಡ್ ದಾಳಿಯ ಹಿಂದಿನ ಮಾಸ್ಟರ್ ಮೈಂಡ್ ಹ್ಯಾಪಿ ಎಂದು ನಂಬಲಾಗಿದೆ ಎಂದು ಪ್ರಕಟಣೆ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.