ನವದೆಹಲಿ: ನಿರ್ಭಯಾ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣದ ನಾಲ್ವರೂ ಅಪರಾಧಿಗಳನ್ನು ಇದೇ 20ರ ಬೆಳಿಗ್ಗೆ 5.30ಕ್ಕೆ ಗಲ್ಲಿಗೇರಿಸಬೇಕು ಎಂದು ಆದೇಶಿಸಿ ದೆಹಲಿ ನ್ಯಾಯಾಲಯ ಗುರುವಾರ ಹೊಸದಾಗಿ ವಾರಂಟ್ ಜಾರಿ ಮಾಡಿದೆ.
ಗಲ್ಲು ಜಾರಿಗೆ ದಿನಾಂಕ ನಿಗದಿ ಮಾಡಲು ಕಾನೂನಾತ್ಮಕವಾಗಿ ಯಾವುದೇ ಅಡ್ಡಿ ಇಲ್ಲ ಎಂದು ಅಪರಾಧಿಗಳ ಪರ ವಕೀಲರು ಇದಕ್ಕೂ ಮೊದಲು ನ್ಯಾಯಾಲಯಕ್ಕೆ ತಿಳಿಸಿದರು.
‘ಕಾನೂನಾತ್ಮಕವಾಗಿ ಎಲ್ಲಾ ಆಯ್ಕೆಗಳು ಮುಗಿದಿವೆ. ದಯಾ ಅರ್ಜಿ ತಿರಸ್ಕರವಾಗಿರುವುದನ್ನು ಪ್ರಶ್ನಿಸಿ ರಿಟ್ ಅರ್ಜಿ ಸಲ್ಲಿಸುವುದು ಕಾನೂನು ಪರಿಹಾರವಲ್ಲ’ ಎಂದು ಜೈಲಿನ ಪರ ಪ್ರಾಸಿಕ್ಯೂಟರ್ ನ್ಯಾಯಾಲಯಕ್ಕೆ ತಿಳಿಸಿದರು.
ಅಪರಾಧಿಗಳಾದ ವಿನಯ್ ಶರ್ಮಾ (26), ಅಕ್ಷಯ್ ಕುಮಾರ್ ಸಿಂಗ್ (31) ಮತ್ತು ಮುಕೇಶ್ ಕುಮಾರ್ ಸಿಂಗ್ (32) ಈ ಮೊದಲು ಸಲ್ಲಿಸಿದ್ದ ದಯಾ ಅರ್ಜಿಗಳನ್ನು ರಾಷ್ಟ್ರಪತಿ ತಿರಸ್ಕರಿಸಿದ್ದರು. ಬುಧವಾರ ಪವನ್ ಗುಪ್ತಾ (25) ಸಲ್ಲಿಸಿದ್ದ ಅರ್ಜಿಯೂ ತಿರಸ್ಕಾರಗೊಂಡಿತ್ತು.
ಮಾ.23ಕ್ಕೆ ಅರ್ಜಿ ವಿಚಾರಣೆ: ನಾಲ್ವರೂ ಅಪರಾಧಿಗಳನ್ನು ಏಕಕಾಲಕ್ಕೆ ಗಲ್ಲಿಗೆ ಏರಿಸಬೇಕು ಎಂದು ದೆಹಲಿ ಹೈಕೋರ್ಟ್ ಈ ಹಿಂದೆ ನೀಡಿದ್ದ ಆದೇಶ ಪ್ರಶ್ನಿಸಿ ಕೇಂದ್ರ ಸರ್ಕಾರ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಇದೇ 23ಕ್ಕೆ ನಡೆಸುವುದಾಗಿ ಸುಪ್ರೀಂಕೋರ್ಟ್ ತಿಳಿಸಿದೆ. ವಿಚಾರಣೆಯನ್ನು ಮುಂದೂಡುವುದಿಲ್ಲ ಎಂದು ನ್ಯಾಯಮೂರ್ತಿ ಆರ್. ಭಾನುಮತಿ ನೇತೃತ್ವದ ಪೀಠ ಸ್ಪಷ್ಟಪಡಿಸಿದೆ.
ಜೀವನದ ಬೆಳಗು ನಿರ್ಭಯಾ ತಾಯಿ
‘ಮಾರ್ಚ್ 20ರ ಬೆಳಿಗ್ಗೆ ನಮ್ಮ ಜೀವನದ ಬೆಳಗಾಗಲಿದೆ’ ಎಂದು ನಿರ್ಭಯಾ ತಾಯಿ ಆಶಾದೇವಿ ಅವರು ದೆಹಲಿ ಆದೇಶಕ್ಕೆ ಪ್ರತಿಕ್ರಿಯಿಸಿದ್ದಾರೆ.
‘ಆ ದಿನ ಅಂತಿಮವಾಗಿ ಗಲ್ಲುಶಿಕ್ಷೆ ಜಾರಿಯಾಗಲಿದೆ ಎನ್ನುವ ವಿಶ್ವಾಸ ಇದೆ. ಅವರನ್ನು ನೇಣಿಗೇರಿಸುವ ತನಕವೂ ನಮ್ಮ ಕಷ್ಟ ಮುಂದುವರಿಯುತ್ತದೆ. ಅವಕಾಶವಿದ್ದರೆ ಅಪರಾಧಿಗಳು ಸಾಯುವುದನ್ನು ನೋಡಬೇಕು’ ಎಂದು ಅವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.