ನವದೆಹಲಿ: ನಿರ್ಭಯಾ ಪ್ರಕರಣದ ನಾಲ್ವರು ಅಪರಾಧಿಗಳಿಗೆ ಮಾರ್ಚ್ 3ರ ಬೆಳಿಗ್ಗೆ ಆರು ಗಂಟೆಗೆಗಲ್ಲು ಶಿಕ್ಷೆ ಜಾರಿಗೊಳಿಸುವಂತೆ ದೆಹಲಿ ಕೋರ್ಟ್ ಸೋಮವಾರ ತೀರ್ಪು ನೀಡಿದೆ.
2012ರಲ್ಲಿ ನಡೆದ ನಿರ್ಭಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಅಪರಾಧಿಗಳಾದ ಮುಕೇಶ್ ಕುಮಾರ್‌ಸಿಂಗ್, ಪವನ್ ಗುಪ್ತಾ, ವಿನಯ್‌ಕುಮಾರ್ ಶರ್ಮಾ, ಅಕ್ಷಯ್ ಕುಮಾರ್ ಅವರನ್ನು ಗಲ್ಲಿಗೇರಿಸುವಂತೆ ಹೆಚ್ಚುವರಿ ಸೆಷನ್ಸ್ ಕೋರ್ಟ್ ನ್ಯಾಯಾಧೀಶ ಧರ್ಮೇಂದ್ರ ರಾಣಾ ಆದೇಶ ಹೊರಡಿಸಿದ್ದಾರೆ.
ಒಂದು ವಾರದ ಒಳಗೆ ಕಾನೂನಾತ್ಮಕ ಪರಿಹಾರಗಳನ್ನು ಅಪರಾಧಿಗಳು ಪಡೆದುಕೊಳ್ಳಬಹುದು ಎಂದು ದೆಹಲಿ ಹೈಕೋರ್ಟ್ ಫೆ. 5ರಂದು ಆದೇಶ ನೀಡಿತ್ತು. ಅಪರಾಧಿಗಳು ಈ ಗಡುವಿನೊಳಗೆ ಈ ಅವಕಾಶವನ್ನು ಬಳಸಿಕೊಂಡಿಲ್ಲ. ಹಾಗಾಗಿ, ಗಲ್ಲು ಶಿಕ್ಷೆ ಜಾರಿಗೆ ಹೊಸ ದಿನಾಂಕ ನಿಗದಿ ಮಾಡಲು ಯಾವುದೇ ತೊಡಕು ಇಲ್ಲ ಎಂದು ನ್ಯಾಯಾಲಯ ತಿಳಿಸಿದೆ.
ಅಪರಾಧಿ ವಿನಯ್ ಮಾನಸಿಕವಾಗಿ ಅಸ್ವಸ್ಥನಾಗಿದ್ದು, ಈ ಬಗ್ಗೆ ತಿಹಾರ್ ಜೈಲು ಪ್ರಾಧಿಕಾರದಿಂದ ವರದಿಯನ್ನು ತರಿಸಿಕೊಳ್ಳಬಹುದು ಎಂದು ಆತನ ಪರ ವಕೀಲ ಎ.ಪಿ.ಸಿಂಗ್ ಹೇಳಿದರು. ಅಕ್ಷಯ್ ಸಲ್ಲಿಸಿದ್ದ ಪರಿಹಾರಾತ್ಮಕ ಅರ್ಜಿ ವಜಾ ಆಗಿದ್ದರೂ ಹೊಸದಾಗಿ ಅರ್ಜಿ ಸಲ್ಲಿಸಲು ಆತ ಬಯಸಿದ್ದಾನೆ ಎಂದರು.
ಆದರೆ, ಈ ವಾದವನ್ನು ನ್ಯಾಯಾಲಯ ಪುರಸ್ಕರಿಸಲಿಲ್ಲ. ವಿನಯ್ ಮಾನಸಿಕ ಅಸ್ವಸ್ಥ ಎಂಬ ವಾದವನ್ನು ಸುಪ್ರೀಂ ಕೋರ್ಟ್ ತಳ್ಳಿ ಹಾಕಿದೆ. ಅದಲ್ಲದೆ, ಪರಿಹಾರಾತ್ಮಕ ಅರ್ಜಿ ಸಲ್ಲಿಸಲು ಅಕ್ಷಯ್ ಸಿದ್ಧತೆ ನಡೆಸುತ್ತಿದ್ದಾನೆ ಎಂಬುದು ಮರಣ ದಂಡನೆ ಜಾರಿ ಮುಂದೂಡಲು ಕಾರಣವಾಗುವುದಿಲ್ಲ ಎಂದು ನ್ಯಾಯಾಧೀಶರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.