ADVERTISEMENT

ನಿರ್ಭಯಾ ಪ್ರಕರಣ: ವಿನಯ್ ಶರ್ಮಾ ಅರ್ಜಿ ತೀರ್ಪು ನಾಳೆ ಮಧ್ಯಾಹ್ನ 2ಕ್ಕೆ

ಪಿಟಿಐ
Published 13 ಫೆಬ್ರುವರಿ 2020, 10:47 IST
Last Updated 13 ಫೆಬ್ರುವರಿ 2020, 10:47 IST
ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್   

ನವದೆಹಲಿ: ನಿರ್ಭಯಾ ಪ್ರಕರಣದಲ್ಲಿ ರಾಷ್ಟ್ರಪತಿಗಳು ತನ್ನ ಕ್ಷಮಾದಾನ ಅರ್ಜಿ ತಿರಸ್ಕರಿಸಿದ್ದನ್ನು ಪ್ರಶ್ನಿಸಿ ಅಪರಾಧಿ ವಿನಯ್ ಶರ್ಮಾ ಸಲ್ಲಿಸಿರುವ ಅರ್ಜಿಯ ತೀರ್ಪನ್ನು ಸುಪ್ರೀಂ ಕೋರ್ಟ್ ಶುಕ್ರವಾರ (ಫೆ.14) ಮಧ್ಯಾಹ್ನ 2 ಗಂಟೆಗೆ ಕಾದಿರಿಸಿದೆ.

ನಾಲ್ವರು ಅಪರಾಧಿಗಳಲ್ಲಿ ಒಬ್ಬನಾಗಿರುವ ಶರ್ಮಾ, ‘ಮರಣದಂಡನೆ ಶಿಕ್ಷೆಯನ್ನು ಜೀವಾವಧಿ ಶಿಕ್ಷೆಗೆ ಬದಲಾಯಿಸಬೇಕು. ಜೈಲಿನಲ್ಲಿ ಹಿಂಸೆಯಿಂದಾಗಿ ಮಾನಸಿಕ ಆರೋಗ್ಯ ಹದಗೆಟ್ಟಿದೆ’ ಎಂದು ಅರ್ಜಿಯಲ್ಲಿ ತಿಳಿಸಿದ್ದಾನೆ.

‘ನನ್ನನ್ನು ಗಲ್ಲಿಗೇರಿಸುವುದನ್ನು ಬೆಂಬಲಿಸಿ ಕೇಂದ್ರ ಸರ್ಕಾರದ ಸಚಿವರು ಹಾಗೂ ದೆಹಲಿ ಸರ್ಕಾರ ಸಾರ್ವಜನಿಕವಾಗಿ ನೀಡಿದ್ದ ಹೇಳಿಕೆಗಳಿಂದಾಗಿ, ನನ್ನ ಕ್ಷಮಾದಾನ ಅರ್ಜಿಯ ನಿರ್ಣಯ ಪೂರ್ವನಿರ್ಧರಿತವಾಗಿತ್ತು. ಕ್ಷಮಾದಾನ ಅರ್ಜಿ ಸಲ್ಲಿಕೆಯಾದ 48 ತಾಸುಗಳಲ್ಲಿಯೇ ತರಾತುರಿಯಲ್ಲಿ ಅರ್ಜಿಯನ್ನು ತಿರಸ್ಕರಿಸಿರುವುದು ವಂಚನೆ. ಇದು ಸಂವಿಧಾನದ ಉಲ್ಲಂಘನೆ’ ಎಂದು ಶರ್ಮಾ ಆರೋಪಿಸಿರುವುದಾಗಿ ಅರ್ಜಿಯಲ್ಲಿ ಹೇಳಲಾಗಿದೆ.

‘ಜೈಲಿನಲ್ಲಿ ಅಕ್ರಮವಾಗಿ ಆತನನ್ನು ಪ್ರತ್ಯೇಕ ಇರಿಸುವ ಮೂಲಕ ಅಧಿಕಾರಿಗಳು ಕಾನೂನನ್ನು ಉಲ್ಲಂಘಿಸಿದ್ದಾರೆ. ಇದರಿಂದ ಶರ್ಮಾನ ಹಕ್ಕುಗಳ ಉಲ್ಲಂಘನೆಯಾಗಿದೆ. ಹಿಂಸೆಯಿಂದಾಗಿ ಮಾನಸಿಕವಾಗಿ ಅಸ್ವಸ್ಥನಾಗಿದ್ದ ಆತ ಜೈಲಿನಲ್ಲಿ ಮನೋವೈದ್ಯಕೀಯ ಚಿಕಿತ್ಸೆ ಪಡೆದುಕೊಂಡಿದ್ದಾನೆ. ಜೈಲಿನಲ್ಲಿ ಮಾನಸಿಕ ಅಸ್ವಸ್ಥರಾಗಿದ್ದರೆ, ಗಲ್ಲುಶಿಕ್ಷೆಯನ್ನು ಬದಲಿಸಲು ಕೋರಲು ಅದು ಸಹ ಒಂದು ಆಧಾರವಾಗುತ್ತದೆ’ ಎಂದು ಆತನ ಪರ ವಕೀಲ ಎ.ಪಿ. ಸಿಂಗ್ ಅವರು ಅರ್ಜಿಯಲ್ಲಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.