ADVERTISEMENT

ತೆಲಂಗಾಣದ ಪಡಿತರ ಕೇಂದ್ರಗಳಲ್ಲಿ ಮೋದಿ ಚಿತ್ರ ನಾಪತ್ತೆ: ನಿರ್ಮಲಾ ಸೀತಾರಾಮನ್ ಗರಂ

ಐಎಎನ್ಎಸ್
Published 2 ಸೆಪ್ಟೆಂಬರ್ 2022, 12:21 IST
Last Updated 2 ಸೆಪ್ಟೆಂಬರ್ 2022, 12:21 IST
ನಿರ್ಮಲಾ ಸೀತಾರಾಮನ್
ನಿರ್ಮಲಾ ಸೀತಾರಾಮನ್   

ಹೈದರಾಬಾದ್: ತೆಲಂಗಾಣದ ಪಡಿತರ ವಿತರಣಾ ಕೇಂದ್ರಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಚಿತ್ರ ಇಲ್ಲದಿರುವ ಬಗ್ಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಗರಂ ಆದ ಘಟನೆ ಶುಕ್ರವಾರ ನಡೆದಿದೆ.

ಕಾಮರೆಡ್ಡಿ ಜಿಲ್ಲೆಯಲ್ಲಿ ಪಡಿತರ ಕೇಂದ್ರಗಳಿಗೆ ಭೇಟಿ ನೀಡಿದ್ದ ಅವರು, ಅಲ್ಲಿ ಮೋದಿ ಚಿತ್ರ ಇಲ್ಲದಿರುವುದನ್ನು ಕಂಡು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಪಡಿತರ ಕೇಂದ್ರಗಳಲ್ಲಿ ವಿತರಿಸುತ್ತಿರುವ ಅಕ್ಕಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಎಷ್ಟು ಹಣ ನೀಡುತ್ತಿವೆ ಎಂಬ ಬಗ್ಗೆ ವಿವರ ನೀಡುವಂತೆ ಕೇಳಿದರು. ಆದರೆ, ನಿರ್ಮಲಾ ಮನವಿಗೆ ಜಿಲ್ಲಾಡಳಿತ ಸೂಕ್ತ ರೀತಿಯಲ್ಲಿ ಸ್ಪಂದಿಸದಿದ್ದಾಗ ಅಸಮಾಧಾನಗೊಂಡ ಅವರು, ಆದ್ಯತೆ ಮೇರೆಗೆ ವಿವರ ಕೊಡುವಂತೆ ಸೂಚಿಸಿದರು.

ಪಡಿತರ ಕೇಂದ್ರಗಳಲ್ಲಿ ವಿತರಿಸಲಾಗುವ ಪ್ರತಿ ಕೆ.ಜಿ ಅಕ್ಕಿಗೆ ₹35ರಲ್ಲಿ ಕೇಂದ್ರ ₹29ನೀಡುತ್ತದೆ ಎಂಬುದನ್ನು ಒತ್ತಿ ಹೇಳಿದ ಅವರು, ಈ ಕೇಂದ್ರಗಳಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಚಿತ್ರ ಇಲ್ಲದಿರುವುದು ಅಚ್ಚರಿ ಎನಿಸುತ್ತಿದೆ ಎಂದು ಅಸಮಾಧಾನ ಹೊರಹಾಕಿದರು.

ADVERTISEMENT

ತೆಲಂಗಾಣದಲ್ಲಿ ಮೂರು ದಿನಗಳ ಪ್ರವಾಸ ಕೈಗೊಂಡಿರುವ ನಿರ್ಮಲಾ ಸೀತಾರಾಮನ್ ಅವರಿಗೆ ಎರಡನೇ ದಿನ ಯುವ ಕಾಂಗ್ರೆಸ್‌ನಿಂದ ಪ್ರತಿಭಟನೆಯ ಬಿಸಿ ಎದುರಾಯಿತು. ಪೆಟ್ರೋಲ್, ಡೀಸೆಲ್ ದರ ಕಡಿತಕ್ಕೆ ಒತ್ತಾಯಿಸಿ ಬಾನ್ಸ್‌ವಾಡ ಬಳಿ ಕಾರಿಗೆ ಅಡ್ಡ ಗಟ್ಟಿ ಪ್ರತಿಭಟನೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.