ಸ್ಯಾನ್ ಫ್ರಾನ್ಸಿಸ್ಕೊ: ಐದು ದಿನಗಳ ಅಮೆರಿಕ ಪ್ರವಾಸ ಕೈಗೊಂಡಿರುವ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಸ್ಯಾನ್ ಫ್ರಾನ್ಸಿಸ್ಕೊ ತಲುಪಿದ್ದಾರೆ. ಭಾನುವಾರ(ಸ್ಥಳೀಯ ಕಾಲಮಾನ) ಅವರು ಸ್ಯಾನ್ ಫ್ರಾನ್ಸಿಸ್ಕೊ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದಿದ್ದಾರೆ.
ಅಮೆರಿಕದಲ್ಲಿ ಭಾರತದ ರಾಯಭಾರಿ ವಿನಯ್ ಮೋಹನ್ ಕ್ವಾತ್ರಾ ಮತ್ತು ಸ್ಯಾನ್ ಫ್ರಾನ್ಸಿಸ್ಕೊದಲ್ಲಿ ಭಾರತದ ಕಾನ್ಸುಲ್ ಜನರಲ್ ಶ್ರೀಕರ್ ರೆಡ್ಡಿ ಕೊಪ್ಪುಲ ಅವರು ನಿರ್ಮಲಾ ಅವರನ್ನು ಬರಮಾಡಿಕೊಂಡರು.
‘ಕೇಂದ್ರದ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಮ್ಮ ಅಧಿಕೃತ ಪ್ರವಾಸಕ್ಕಾಗಿ ಅಮೆರಿಕಕ್ಕೆ ಆಗಮಿಸಿದ್ದು, ಅವರನ್ನು ಅಮೆರಿಕದ ಭಾರತದ ರಾಯಭಾರಿ ವಿನಯ್ ಮೋಹನ್ ಕ್ವಾತ್ರಾ ಮತ್ತು ಸ್ಯಾನ್ ಫ್ರಾನ್ಸಿಸ್ಕೊದಲ್ಲಿ ಭಾರತದ ಕಾನ್ಸುಲ್ ಜನರಲ್ ಡಾ. ಶ್ರೀಕರ್ ರೆಡ್ಡಿ ಕೊಪ್ಪುಲ ಅವರು ಇಂದು ಸ್ಯಾನ್ ಫ್ರಾನ್ಸಿಸ್ಕೊ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹಣಕಾಸು ಕಾರ್ಯದರ್ಶಿ ಅಜಯ್ ಸೇಠ್ ಅವರ ಸಮ್ಮುಖದಲ್ಲಿ ಸ್ವಾಗತಿಸಿದರು’ಎಂದು ಹಣಕಾಸು ಸಚಿವಾಲಯ ಎಕ್ಸ್ ಪೋಸ್ಟ್‌ನಲ್ಲಿ ಬರೆದುಕೊಂಡಿದೆ.
ಸ್ಯಾನ್ ಫ್ರಾನ್ಸಿಸ್ಕೊದಲ್ಲಿ ಎರಡು ದಿನ ವಾಸ್ತವ್ಯ ಹೂಡಲಿರುವ ಸೀತಾರಾಮನ್, ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯದ ಹೂವರ್ ಸಂಸ್ಥೆಯಲ್ಲಿ ‘ವಿಕಸಿತ ಭಾರತ್ 2047ಕ್ಕೆ ಅಡಿಪಾಯ’ ಕುರಿತು ಭಾಷಣ ಮಾಡಲಿದ್ದಾರೆ.
ಹೂಡಿಕೆದಾರರೊಂದಿಗಿನ ಸಭೆಯಲ್ಲಿ ಪ್ರಮುಖ ನಿಧಿ ನಿರ್ವಹಣಾ ಸಂಸ್ಥೆಗಳ ಉನ್ನತ ಸಿಇಒಗಳೊಂದಿಗೆ ಮಾತುಕತೆ ನಡೆಸಲಿದ್ದಾರೆ. ಜೊತೆಗೆ, ಸ್ಯಾನ್ ಫ್ರಾನ್ಸಿಸ್ಕೊದಲ್ಲಿರುವ ಮಾಹಿತಿ ತಂತ್ರಜ್ಞಾನ (ಐಟಿ) ಸಂಸ್ಥೆಗಳ ಸಿಇಒಗಳೊಂದಿಗೆ ದ್ವಿಪಕ್ಷೀಯ ಸಭೆಗಳನ್ನು ನಡೆಸಲಿದ್ದಾರೆ.
ಸ್ಯಾನ್ ಫ್ರಾನ್ಸಿಸ್ಕೊದಲ್ಲಿರುವ ಭಾರತೀಯ ವಲಸಿಗರನ್ನು ಒಳಗೊಂಡ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಭಾರತೀಯ ಸಮುದಾಯದೊಂದಿಗೆ ಸಂವಹನ ನಡೆಸಲಿದ್ದಾರೆ.
ಏಪ್ರಿಲ್ 22ರಿಂದ 25ರವರೆಗೆ, ವಾಷಿಂಗ್ಟನ್ ಡಿಸಿ ಭೇಟಿಯ ಸಮಯದಲ್ಲಿ ಅಂತರರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಮತ್ತು ವಿಶ್ವಬ್ಯಾಂಕ್‌ನ ವಾರ್ಷಿಕ ಸಭೆಗಳು, ಎರಡನೇ ಜಿ20 ಹಣಕಾಸು ಮಂತ್ರಿಗಳು ಮತ್ತು ಕೇಂದ್ರ ಬ್ಯಾಂಕ್ ಗವರ್ನರ್ ಸಭೆಗಳು, ಅಭಿವೃದ್ಧಿ ಸಮಿತಿಯ ಸಮಗ್ರ ಸಭೆ ಮುಂತಾದ ಸಭೆಗಳಲ್ಲಿ ಭಾಗವಹಿಸಲಿದ್ದಾರೆ.
ಇದಲ್ಲದೆ, ಸೀತಾರಾಮನ್ ಅವರು ಅರ್ಜೆಂಟೀನಾ, ಬಹ್ರೇನ್, ಜರ್ಮನಿ, ಫ್ರಾನ್ಸ್, ಲಕ್ಸೆಂಬರ್ಗ್, ಸೌದಿ ಅರೇಬಿಯಾ, ಬ್ರಿಟನ್ ಮತ್ತು ಅಮೆರಿಕ ಸೇರಿದಂತೆ ಹಲವು ದೇಶಗಳ ಹಣಕಾಸು ಸಚಿವರೊಂದಿಗೆ ದ್ವಿಪಕ್ಷೀಯ ಸಭೆಗಳನ್ನು ನಡೆಸಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.