ನವದೆಹಲಿ: ‘ಇಂಡಿಯಾ’ ಮೈತ್ರಿಕೂಟವು ಆರಂಭದಲ್ಲಿದ್ದಂತೆ ಈಗ ಬಿರುಸು ಕಾಯ್ದುಕೊಳ್ಳದೇ ಇರಲು, ಕಾಂಗ್ರೆಸ್ ಪಕ್ಷವು ಸದ್ಯ ನಡೆಯುತ್ತಿರುವ ಐದು ರಾಜ್ಯಗಳ ಚುನಾವಣೆಗಳತ್ತಲೇ ಹೆಚ್ಚಿನ ಆಸಕ್ತಿಯನ್ನು ಹೊಂದಿರುವುದೇ ಕಾರಣ’ ಎಂದು ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಹೇಳಿದ್ದಾರೆ.
ಸಿಪಿಐ ಪಕ್ಷ ಗುರುವಾರ ಪಾಟ್ನಾದಲ್ಲಿ ಅಯೋಜಿಸಿದ್ದ ‘ಬಿಜೆಪಿ ಹಠಾವೊ, ದೇಶ್ ಬಚಾವೊ’ ರ‍್ಯಾಲಿಯಲ್ಲಿ ಮಾತನಾಡಿದ ಅವರು, ‘ಇಂಡಿಯಾ’ ಮೈತ್ರಿಕೂಟದಲ್ಲಿ ಕಾಂಗ್ರೆಸ್ ಪಕ್ಷದ ವಿರುದ್ಧ ಅಪಸ್ವರ ಮೂಡಿರುವುದನ್ನು ಉಲ್ಲೇಖಿಸಿ ಈ ಮಾತು ಹೇಳಿದರು.
ಐದು ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ‘ಇಂಡಿಯಾ’ದ ಸದಸ್ಯ ಪಕ್ಷಗಳ ಜೊತೆಗೆ ಮೈತ್ರಿ ಮಾಡಿಕೊಳ್ಳದ ಕಾಂಗ್ರೆಸ್ ವಿರುದ್ಧ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಈಚೆಗೆ ಬೇಸರ ವ್ಯಕ್ತಪಡಿಸಿದ್ದರು. ಆ ಹಿನ್ನೆಲೆಯಲ್ಲಿ ನಿತೀಶ್ ಹೇಳಿಕೆ ಹೊರಬಿದ್ದಿದೆ.
ಕೇಂದ್ರದಲ್ಲಿ ಬಿಜೆಪಿ ಸರ್ಕಾರವನ್ನು ವಿರೋಧಿಸುವ ಪಕ್ಷಗಳು, ‘ಇಂಡಿಯಾ’ ಹೆಸರಿನಲ್ಲಿ ಮೈತ್ರಿಕೂಟವನ್ನು ರಚಿಸಿಕೊಂಡಿದ್ದವು. ಆದರೆ, ಇತ್ತೀಚಿನ ದಿನಗಳಲ್ಲಿ ಮೈತ್ರಿಕೂಟದಲ್ಲಿ ಗಣನೀಯ ಬೆಳವಣಿಗೆ ಕಂಡುಬಂದಿಲ್ಲ ಎಂದು ನಿತೀಶ್ ಕುಮಾರ್ ಅಭಿಪ್ರಾಯಪಟ್ಟರು.
ಇತಿಹಾಸಕ್ಕೆ ಧಕ್ಕೆ ತರಲು ಯತ್ನಿಸುತ್ತಿರುವವರಿಂದ ದೇಶವನ್ನು ರಕ್ಷಿಸಲು ಒಗ್ಗಟ್ಟು ಕಾಯ್ದುಕೊಳ್ಳಬೇಕು ಎಂದು ನಾವು ಎಲ್ಲ ಪಕ್ಷಗಳ ಮುಖಂಡರ ಜೊತೆಗೆ ಚರ್ಚಿಸಿ, ಆಗ್ರಹಪಡಿಸಿದ್ದೆವು. ಇದೇ ಕಾರಣಕ್ಕೆ ವಿವಿಧೆಡೆ ಸಭೆ ನಡೆದ ಬಳಿಕ ಮೈತ್ರಿಕೂಟ ರಚನೆಯಾಗಿತ್ತು ಎಂದು ಸ್ಮರಿಸಿದರು.
‘ಈಗ ಕಾಂಗ್ರೆಸ್‌ಗೆ ಐದು ರಾಜ್ಯಗಳ ವಿಧಾನಸಭೆಗೆ ಚುನಾವಣೆ ಕುರಿತೇ ಹೆಚ್ಚಿನ ಒಲವಿದೆ. ನಾವು ಕಾಂಗ್ರೆಸ್ ಮುನ್ನಡೆಸಲು ಯತ್ನಿಸುತ್ತಿದ್ದೇವೆ. ಇದನ್ನು ಆ ಪಕ್ಷ ಗಮನಿಸುತ್ತಿಲ್ಲ. ಬಹುಶಃ ಚುನಾವಣೆ ಬಳಿಕ ಕಾಂಗ್ರೆಸ್ ಎಲ್ಲರ ಜೊತೆಗೆ ಮಾತನಾಡಬಹುದು’ ಎಂದೂ ಅಭಿಪ್ರಾಯಪಟ್ಟರು.
ಕಾಂಗ್ರೆಸ್ ವಿರುದ್ಧ ಬೇಸರ ವ್ಯಕ್ತಪಡಿಸಿದ್ದ ಅಖಿಲೇಶ್, ‘2018ರ ಚುನಾವಣೆಯಲ್ಲಿ ಆ ಪಕ್ಷ ಉತ್ತಮ ಸಾಧನೆ ಮಾಡಿರಬಹುದು. ಆದರೆ, ಬಿಜೆಪಿಯು ಹಿಂದಿ ಪ್ರಾಬಲ್ಯದ ರಾಜ್ಯಗಳ ವಿಧಾನಸಭೆ ಚುನಾವಣೆ ಗೆದ್ದರೂ, ಅದರಿಂದ ಹಿಗ್ಗಿಹೋಗಲಿಲ್ಲ’ ಎಂದು ಕಾಂಗ್ರೆಸ್ ಪಕ್ಷಕ್ಕೆ ನೆನಪಿಸಿದ್ದರು.
‘ಈಗ ಚುನಾವಣೆ ನಡೆಯುತ್ತಿರುವ ಐದು ರಾಜ್ಯಗಳಲ್ಲಿಯೂ ಮೈತ್ರಿಕೂಟದ ಸದಸ್ಯ ಪಕ್ಷಗಳು ಒಟ್ಟಾಗಿಯೇ ಸ್ಪರ್ಧೆ ನಡೆಸಿದ್ದರೆ ಚೆನ್ನಾಗಿರುತ್ತಿತ್ತು’ ಎಂದು ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಅವರು ಅಭಿಪ್ರಾಯಪಟ್ಟರು.
‘ಇಂಡಿಯಾ’ ಮೈತ್ರಿಕೂಟದ ಕಡೆಯ ಸಭೆಯು ಈ ವರ್ಷದ ಆಗಸ್ಟ್–ಸೆಪ್ಟೆಂಬರ್ ತಿಂಗಳಲ್ಲಿ ಮುಂಬೈನಲ್ಲಿ ನಡೆದಿತ್ತು. ಆ ನಂತರ ಮೈತ್ರಿಕೂಟದಲ್ಲಿ ಗಮನಾರ್ಹ ಪ್ರಗತಿ ಕಂಡುಬಂದಿಲ್ಲ.
‘ವಿಧಾನಸಭೆ ಚುನಾವಣೆಗಳ ಮತ ಎಣಿಕೆ ಕಾರ್ಯವು ಡಿ.3ರಂದು ನಡೆಯಲಿದ್ದು, ಆ ನಂತರವೇ ಪ್ರಗತಿ ನಿರೀಕ್ಷಿಸಬಹುದು. ಪಾಟ್ನಾ, ನಾಗ್ಪುರ, ಚೆನ್ನೈ, ಗುವಾಹಟಿ ಮತ್ತು ದೆಹಲಿಯಲ್ಲಿ ಮೈತ್ರಿಕೂಟದ ರ‍್ಯಾಲಿ ಸಂಘಟಿಸುವ ಚಿಂತನೆ ಮುಖಂಡರಲ್ಲಿದೆ’ ಎಂದು ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.